ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ: ಪತ್ನಿ ಅನಿತಾ, ಭೋಜೇಗೌಡ, ಸ್ವರೂಪ್ ಭಾಗಿ

Published 7 ನವೆಂಬರ್ 2023, 8:24 IST
Last Updated 7 ನವೆಂಬರ್ 2023, 8:24 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹಾಸನಾಂಬ ದೇವಿಯ ದರ್ಶನ ಪಡೆದರು. ಬೆಳಿಗ್ಗೆ 11.30ಕ್ಕೆ ದೇವಾಲಯಕ್ಕೆ ಬಂದ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಿಗೆ ಸೀರೆ, ಹೂವು, ಹಣ್ಣು ಅರ್ಪಿಸಿದ ಕುಮಾರಸ್ವಾಮಿ ದಂಪತಿ, ಹಾಸನಾಂಬೆಯ ಮುಂದೆ ಪ್ರಾರ್ಥನೆ ಮಾಡಿದರು. ಈ ವೇಳೆ ಕುಮಾರಸ್ವಾಮಿ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಶಾಸಕ ಸ್ವರೂಪ್ ಪ್ರಕಾಶ್ ಇದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಹಾಸನಾಂಬ ದರ್ಶನಕ್ಕೆ ಭಕ್ತರು ಬರುತ್ತಾರೆ. ಹಾಸನಾಂಬ ದೇವಿ ವಿಶೇಷ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ್ದು, ವರ್ಷದಲ್ಲಿ ಕೆಲ ದಿನಗಳು ಮಾತ್ರ ದರ್ಶನ ಕರುಣಿಸುತ್ತಾರೆ ಎಂದರು.

ದಶಕಗಳ ಹಿಂದಿನಿಂದಲೂ ಹಳ್ಳಿ ಹಳ್ಳಿಯಿಂದ ಕೃಷಿಕರು ಬಂದು ಹಾಸನಾಂಬ ದರ್ಶನ ಪಡೆಯುತ್ತಿದ್ದರು. ನಾನು ಕುಟುಂಬದೊಂದಿಗೆ ದರ್ಶನ ಪಡೆದು, ನಾಡಿನ ಜನತೆಗೆ ಸಮೃದ್ಧಿ ನೀಡಲಿ/ ರೈತರು ಉತ್ತಮ ರೀತಿಯಲ್ಲಿ ಜೀವನ ನಡೆಸಲು ಅನುಕೂಲವಾಗುವಂತೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.

ನಾಡಿನಲ್ಲಿ ಸಂಪತ್ತಿನ ಕೊರತೆ ಇಲ್ಲ. ಅದು ಸಮಾನವಾಗಿ ಹಂಚಿಕೆ ಆಗಬೇಕು. ರೈತರ ಬದುಕಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಲಿ ಎಂದು ಹಾಸನಾಂಬೆಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಹಾಸನಾಂಬ ದೇವಿಯ ಆಶೀರ್ವಾದ ಪಡೆದು ನಮ್ಮ ಕುಟುಂಬವು ಪ್ರಗತಿ ಕಂಡಿದೆ ಎಂದು ತಿಳಿಸಿದ ಅವರು, ಜೆಡಿಎಸ್ ನ 19 ಶಾಸಕರು ಮಂಗಳವಾರ ಹಾಸನಾಂಬ ದೇವಿಯ ದರ್ಶನ ಪಡೆಯಲಿದ್ದು ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿದ್ದೇವೆ ಎಂದರು.

ಪದೇ ಪದೇ ಕಾಂಗ್ರೆಸ್‌ನ ಕೆಲ ಮುಖಂಡರು ಜೆಡಿಎಸ್‌ನ ಶಾಸಕರು ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಗಳನ್ನು ಎಬ್ಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಾಸಕರಿಗೆ ಮನಸ್ಸು ಗಟ್ಟಿ ಮಾಡಲು ತಾಯಿ ಸನ್ನಿಧಾನದಲ್ಲಿ ಒಗ್ಗಟ್ಟಿನ ಸಂಕಲ್ಪ ಮಾಡುತ್ತಿದ್ದೇವೆ ಎಂದು ಹೇಳಿದರು.

ಇಂದು, ನಾಳೆ ಹಾಸನದಲ್ಲಿಯೇ ಎಲ್ಲ ಶಾಸಕರು ತಂಗಲಿದ್ದು, ಸಭೆ ನಡೆಸಿ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣೆಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಒಗ್ಗಟ್ಟಿನ ದೃಢಸಂಕಲ್ಪವನ್ನು ಮಾಡುವ ಮೂಲಕ ಸ್ಪಷ್ಟ ಸಂದೇಶ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ದಂಪತಿ ಹಾಗೂ ಭೋಜೇಗೌಡರನ್ನು ದೇವಾಲಯದ ಆಡಳಿತಾಧಿಕಾರಿ ಮಾರುತಿ ಹಾಗೂ ತಹಶೀಲ್ದಾರ್ ಶ್ವೇತಾ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT