ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024 | ಹಾಸನ– ಪ್ರಜ್ವಲ್‌ ರೇವಣ್ಣ ನಾಮಪತ್ರ: ಪ್ರೀತಂ ಗೌಡ ಗೈರು

Published 4 ಏಪ್ರಿಲ್ 2024, 18:17 IST
Last Updated 4 ಏಪ್ರಿಲ್ 2024, 18:17 IST
ಅಕ್ಷರ ಗಾತ್ರ

ಹಾಸನ: ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಗುರುವಾರ ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ ವೇಳೆ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಶಾಸಕ ಎಚ್‌.ಡಿ. ರೇವಣ್ಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖಂಡರಾದ ಡಿ.ವಿ. ಸದಾನಂದಗೌಡ, ಬೆಳ್ಳಿಪ್ರಕಾಶ್‌, ಎಂ.ಕೆ. ಪ್ರಾಣೇಶ್‌ ಹಾಜರಿದ್ದು, ಮಿತ್ರ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ನಾಮಪತ್ರ ಸಲ್ಲಿಕೆ ಹಾಗೂ ನಂತರ ನಡೆದ ರ‍್ಯಾಲಿಯಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಗೈರು ಎದ್ದು ಕಾಣುತ್ತಿತ್ತು.

ಆ ಬಗ್ಗೆ ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ, ‘ನಿನ್ನೆ ಜಿಲ್ಲೆಯ ನಾಯಕರೆಲ್ಲ ಸೇರಿ ಬಿಜೆಪಿ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದು, ಒಂದೆರಡು ದಿನದಲ್ಲಿ ವಾತಾವರಣ ತಿಳಿಯಾಗಲಿದೆ. ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಎನ್.ಡಿ.ಎ. ತೆಕ್ಕೆಗೆ ಬಂದಿರುವ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕರ್ತವ್ಯ ನಮಗೂ ಇರುತ್ತದೆ’ ಎಂದರು.

‘ಜೆಡಿಎಸ್ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಬಿಜೆಪಿ ಬೆಂಬಲಿಸಬೇಕು. ಬಿಜೆಪಿ ಅಭ್ಯರ್ಥಿಗಳನ್ನು ಜೆಡಿಎಸ್‌ ಬೆಂಬಲಿಸಲೇಬೇಕು. ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಕೆಲಸ ಮಾಡಬೇಕೆಂದು ಎಲ್ಲರಿಗೂ ಸೂಚಿಸಲಾಗಿದೆ. ಪ್ರೀತಂ ಗೌಡರಿಗೂ ಅದು ಅನ್ವಯವಾಗುತ್ತದೆ. ಅದರಂತೆಯೇ ಅವರು ಕೆಲಸ ಮಾಡಲಿದ್ದಾರೆ’ ಎಂದರು.

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಎಚ್.ಡಿ. ದೇವೇಗೌಡ, ‘28 ಗ್ಯಾರಂಟಿ ಕೊಡುತ್ತೇವೆ. 8 ಕೋಟಿ ಮನೆ ನಿರ್ಮಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನೀವು ಇರುವುದು ಕೇವಲ ಮೂರು ರಾಜ್ಯದಲ್ಲಿ. 8 ಕೋಟಿ ಮನೆ ಕಟ್ಟುತ್ತೇವೆ ಎನ್ನುತ್ತೀರಿ. ಯಾವ ರೀತಿ ಸರ್ವೆ ಮಾಡಿದ್ದೀರಿ? ಈಗ ಜ್ಞಾನೋದಯವಾಯಿತೇ? ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಯಾರನ್ನು ದಡ್ಡರನ್ನಾಗಿ ಮಾಡುತ್ತಿದ್ದೀರಿ’ ಎಂದು ಟೀಕಿಸಿದರು.

‘ಜೆಡಿಎಸ್ ಮುಗಿಸುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಜೆಡಿಎಸ್ ಎಲ್ಲಿದೆ ಎಂದು ಮುಖ್ಯಮಂತ್ರಿ ಕೇಳುತ್ತಾರೆ. ಅವರಿಗೆ ಪಕ್ಷ ಎಲ್ಲೆಲ್ಲಿದೆ ಎಂಬುದನ್ನು ತೋರಿಸಬೇಕು. ಸಿದ್ದರಾಮಯ್ಯನವರೇ, ನರೇಂದ್ರ ಮೋದಿಯವರ ಜೊತೆ ಜೆಡಿಎಸ್ ಸೇರಿದೆ. ಅಧಿಕಾರದಲ್ಲಿರುವ ಮೂರು ಕಡೆಯೂ ಕಾಂಗ್ರೆಸ್ ಅನ್ನು ನೆಲಸಮ ಮಾಡುತ್ತೇವೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT