ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಅಣೆಕಟ್ಟೆಗೂ ವಿರೋಧ: ಬೇಸರ

ಕಾವೇರಿ ವಿವಾದ ಪುಸ್ತಕ ಬಿಡುಗಡೆಯಲ್ಲಿ ಎ.ಟಿ. ರಾಮಸ್ವಾಮಿ ಅಭಿಪ್ರಾಯ
Published 9 ಜುಲೈ 2024, 12:32 IST
Last Updated 9 ಜುಲೈ 2024, 12:32 IST
ಅಕ್ಷರ ಗಾತ್ರ

ಹಾಸನ: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂದು ನಾವೆಲ್ಲಾ ಹೇಳುತ್ತೇವೆ. ಆದರೆ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ನೀರು ಬಿಡುತ್ತಲೇ ಬರಲಾಗಿದ್ದು, ಈ ಬಗ್ಗೆ ಪ್ರಜ್ಞಾವಂತರಾಗಿ ಕಣ್ಣು ತೆರೆಸುವ ಕೆಲಸವನ್ನು ‘ಕಾವೇರಿ ವಿವಾದ’ ಎನ್ನುವ ಪುಸ್ತಕದ ಕೃತಿಕರ್ತರಾದ ಚಂದ್ರಶೇಖರ್ ಮಾಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಾಸನ ಜಿಲ್ಲಾ ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಹಸಿರು ಭೂಮಿ ಪ್ರತಿಷ್ಠಾನಗಳ ಆಶ್ರಯದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರು ರಚಿಸಿರುವ ‘ಕಾವೇರಿ ವಿವಾದ - ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಮತ್ತು ಮೈಸೂರಿನ ರಾಜ್ಯಗಳ ನಡುವೆ ಒಪ್ಪಂದಗಳಾದವು. ಮೈಸೂರಿನ ಮಹಾರಾಜರ ಮೇಲೆ ಬಹಳ ಒತ್ತಡಗಳಿದ್ದವು. ಇಲ್ಲವಾದರೇ ಮೈಸೂರು ಸಂಸ್ಥಾನ ಹೋಗಿ, ಬ್ರಿಟಿಷರ ಆಳ್ವಿಕೆ ಬರುತ್ತಿತ್ತು ಎನ್ನುವ ವಿಚಾರವನ್ನು ಇತಿಹಾಸದ ಚರಿತ್ರೆಯಲ್ಲಿ ತಿಳಿದುಕೊಂಡಿದ್ದೇವೆ. ಆ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಅಂದಿನ ದಿನಗಳಿಂದಲೂ ಸಹ ನೀರು ಬಿಡಬೇಕಾಗಿದೆ. ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂದು ನಾವೆಲ್ಲಾ ಹೇಳುತ್ತಿದ್ದೇವೆ. ಎಲ್ಲರೂ ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಅನುಗುಣವಾಗಿ ನೀರನ್ನು ಬಿಟ್ಟುಕೊಂಡು ಬರಲಾಗಿದೆ ಎಂದು ವಿವರಿಸಿದರು.

ನೀರನ್ನು ಬಳಕೆ ಮಾಡುವುದಕ್ಕೂ ನಾವು ಅಣೆಕಟ್ಟು ನಿರ್ಮಿಸುವ ಹಾಗಿಲ್ಲ. ಇನ್ನು ಪ್ರವಾಹದ ನೀರು ಹಾಗೂ ಇತರೆ ನೀರನ್ನು ಮೇಕೆದಾಟುನಲ್ಲಿ ಸಂಗ್ರಹ ಮಾಡಿ, ಕೃಷಿಗೆ ಅಲ್ಲದಿದ್ದರೂ ಕುಡಿಯುವುದಕ್ಕೂ ಬಳಕೆ ಮಾಡವುದಕ್ಕೂ ದೊಡ್ಡ ವಿರೋಧ ವ್ಯಕ್ತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆಚ್ಚು ನೀರು ನಮ್ಮಲ್ಲಿ ಉತ್ಪತ್ತಿ ಆಗುತ್ತದೆ. ಆದರೂ ಘೋರ ಅನ್ಯಾಯ ಈ ತೀರ್ಪುನಿಂದ ಆಗಿದೆ. ಪ್ರಜ್ಞಾವಂತರಾಗಿ ಕಣ್ಣು ತೆರೆಸುವ ಕೆಲಸವನ್ನು ಕಾವೇರಿ ವಿವಾದ ಪುಸ್ತಕ ಕೃತಿಕರ್ತರಾದ ಸಿ. ಚಂದ್ರಶೇಖರ್ ಮಾಡಿದ್ದಾರೆ. ನೆಲ, ಜಲ, ಭಾಷೆ ವಿಚಾರದಲ್ಲಿ ಹೆಚ್ಚು ಜನರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ರೈತ ಮುಖಂಡ, ಅರ್ಥಶಾಸ್ತ್ರಜ್ಞ ಪ್ರೊ. ಕೆ.ಸಿ. ಬಸವರಾಜು ಮಾತನಾಡಿ, ಈ ಪುಸ್ತಕದಲ್ಲಿ ಕಾವೇರಿ ವಿವಾದ ಕುರಿತು ಐತಿಹಾಸಿಕ ದಾಖಲೆ ಮುದ್ರಿಸಲಾಗಿದೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ನಿವೃತ್ತಿ ನಂತರ ಕಾವೇರಿ ವಿವಾದ ಕುರಿತು ಪುಸ್ತಕ ಬರೆದಿದ್ದಾರೆ ಎಂದರು.

ಶಾಸಕ ಸಿಮೆಂಟ್ ಮಂಜು, ಹಸಿರುಭೂಮಿ ಪ್ರತಿಷ್ಠಾನ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ ಪ್ರಸನ್ನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ, ಹಿರಿಯ ರೈತ ಹೋರಾಟಗಾರ ಮಂಜುನಾಥ್ ದತ್ತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಕಾವೇರಿ ಹೋರಾಟಕ್ಕೆ ಸಹಕಾರ

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ ಕಾವೇರಿ ವಿಚಾರವಾಗಿ ಎಷ್ಟು ಸಮಸ್ಯೆ ಆಗಿದೆ. ಈ ಬಗ್ಗೆ ಅನೇಕ ತೀರ್ಮಾನಗಳನ್ನು ವಿಶ್ಲೇಷಿಸಿದ್ದಾರೆ. ಕರ್ನಾಟಕದಿಂದ ನೀರು ಹರಿಸಿದ್ದರಿಂದ ತಮಿಳುನಾಡಿನ ಜನಜೀವನ ಉತ್ತಮ ಆಗಿದೆ. ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಕರ್ನಾಟಕದಲ್ಲಿ ರೈತರು ಬೆಳೆಯುವ ಬೆಳೆಗೆ ನೀರು ತೀರಾ ಕಡಿಮೆ ಆಗಿದೆ. ಈ ಕಾವೇರಿ ಹೋರಾಟದಲ್ಲಿ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದರು.  

ಪಕ್ಷಾತೀತವಾಗಿ ಕಮಿಟಿ ಮಾಡಿ

ರೈತ ಚಳವಳಿ ಹೋರಾಟಗಾರ ಬೋರಯ್ಯ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿವರೆಗೂ ಒಂದು ಕಮಿಟಿ ಮಾಡಿಲ್ಲ. ಕೂಡಲೇ ಪಕ್ಷತೀತವಾಗಿ ಕಮಿಟಿ ಮಾಡಲು ಅವಕಾಶ ಕೊಡಬೇಕು. ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ತಮಿಳುನಾಡಿನಲ್ಲಿ ಕಾವೇರಿ ಬಿಟ್ಟು ಬೇರೆ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ. ತಮಿಳುನಾಡಿಗೆ ಕುಡಿಯುವ ನೀರಿಗಾಗಿ ನಮ್ಮ ಬೆಳೆ ಹಾಳು ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT