ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು | ಭತ್ತದ ಬೆಳೆಗೆ ಕುತ್ತು ತಂದ ಮಳೆ: ಸಂಕಷ್ಟದಲ್ಲಿ ರೈತರು

Published 7 ಜನವರಿ 2024, 13:41 IST
Last Updated 7 ಜನವರಿ 2024, 13:41 IST
ಅಕ್ಷರ ಗಾತ್ರ

ಕೊಣನೂರು: ಗುಡುಗು ಸಹಿತ ಮಳೆಯು ಭತ್ತ ಮತ್ತು ರಾಗಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

ಶನಿವಾರ ರಾತ್ರಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದ್ದು ಭತ್ತ ಮತ್ತು ರಾಗಿಯನ್ನು ಕಟಾವು ಮಾಡಿರುವ ಕೊಣನೂರು ಮತ್ತು ರಾಮನಾಥಪುರ ವ್ಯಾಪ್ತಿಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮಳೆಯ ಬರುವ ವಾತಾವರಣವು ಇಲ್ಲದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಕಟಾವು ಮಾಡಿದ್ದ ಭತ್ತದ ಬೆಳೆಯ ಅರಿಗಳು ಭಾರಿ ಮಳೆಯಿಂದಾಗಿ ನೀರಿನಲ್ಲಿ ತೇಲಿದ್ದು, ನಿಂತಿದ್ದ ಬೆಳೆಯನ್ನು ಕೊಯ್ದು ಹಾಕಿದ ನಂತರ ರಾತ್ರೋರಾತ್ರಿ ಏಕಾಏಕಿ ಸುರಿದ ಮಳೆಯು ನೀರು ಪಾಲು ಮಾಡಿದೆ.

ತಗ್ಗುಪ್ರದೇಶದಲ್ಲಿ ಭತ್ತದ ಗದ್ದೆಗಳ ತುಂಬಾ ನೀರು ತುಂಬಿದ್ದು ಅರಿಗಳನ್ನು ಮತ್ತೊಂದೆಡೆಗೆ ಎತ್ತಿಡಲು ಆಗದ ಪರಿಸ್ಥಿತಿ ಇದೆ. ರಾತ್ರಿ ಸುರಿದ ಮಳೆಗೆ ಅತಿಯಾದ ಶೀತಾಂಶದಿಂದಾಗಿ ಹುಲ್ಲು ಸಂಪೂರ್ಣವಾಗಿ ಕರಗಿಹೋಗುತ್ತದೆ. ಭಾನುವಾರ ಬೆಳಿಗ್ಗೆಯಾದರೂ ಸಹ ನೀರು ತುಂಬಿದ್ದರಿಂದ ಭತ್ತವೂ ಸಹ ಉದುರಿಹೋಗುವ ಸಾಧ್ಯತೆಯಿದೆ. ಭಾನುವಾರವೂ ಮೋಡ ಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಒಣಗುವ ಅವಕಾಶವೂ ಸಿಗಲಿಲ್ಲ.

ಗುರುವಾರ ಸುರಿದ ಮಳೆಗೆ ಸಿಕ್ಕಿದ್ದ ಭತ್ತದ ಬೆಳೆಯನ್ನು ಕೆಲವರು ಯಂತ್ರದ ಸಹಾಯದಿಂದ ಒಕ್ಕಣೆ ಮಾಡಿಕೊಂಡಿದ್ದರೆ, ಇನ್ನೇನು ಮಳೆ ಬರುವುದಿಲ್ಲವೆಂದು ಜಮೀನಿನಲ್ಲೆ ಬಿಟ್ಟಿದ್ದು ಅದೇ ಹುಲ್ಲು ಮತ್ತೊಮ್ಮೆ ಶನಿವಾರದ ಮಳೆಗೂ ಸಿಲುಕಿ ಕರಗುತ್ತಿದೆ. ಕೆಲವೆಡೆ ಈ ಮೊದಲೇ ಕಟಾವು ಮಾಡಿ ಹಾಕಿದ್ದ ಮೆದೆಗಳ ತಳಭಾಗಕ್ಕೂ ಸಹ ನೀರು ನುಗ್ಗಿದ್ದು ಹುಲ್ಲು ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ರಾಗಿಯ ಹುಲ್ಲು ದಪ್ಪವಿರುವುದರಿಂದ ಮಳೆಯಿಂದಾಗಿ ಒಣಗುವುದು ಕಷ್ಟವಾಗುತ್ತದೆ ಮತ್ತೊಮ್ಮೆ ಮಳೆಯಾದರೆ ಹುಲ್ಲು ಕಪ್ಪಾಗಿ ಜಾನುವಾರುಗಳಿಗೆ ತಿನ್ನಲು ಯೋಗ್ಯವಾಗುವುದಿಲ್ಲ ಎನ್ನುತ್ತಾರೆ ರೈತರು. ಈ ವರ್ಷ ಹಾರಂಗಿ ಅಣೆಕಟ್ಟೆಯಿಂದ ಕಡಿಮೆ ನೀರನ್ನೂ ಒದಗಿಸಿದ್ದು ಹಗಲು ರಾತ್ರಿಯೆನ್ನದೆ ನೀರು ಹಾಯಿಸಲು ಹೆಣಗಾಡಿ ಭತ್ತ ಬೆಳೆದಿದ್ದೆವು, ಇದೀಗ ಮಳೆಯು ಈ ಬೆಳೆಯನ್ನು ಕಿತ್ತುಕೊಳ್ಳುತ್ತಿರುವುದು ದುರದೃಷ್ಟಕರ ಎಂಬುದು ಭತ್ತದ ಬೆಳೆಗಾರರ ಅಳಲು.

ಗುಡುಗು ಸಹಿತ ಅಬ್ಬರಿಸಿದ ಮಳೆಯಿಂದಾಗಿ ಕೆಲವೆಡೆ ಕೆರೆಗಳಿಗೆ ನೀರು ಬರಲಾರಂಭಿಸಿದ್ದು, ಹಳ್ಳಕೊಳ್ಳಗಳು ನೀರು ಮಯವಾಗಿದ್ದವು.

ಮಳೆಯಿಂದಾಗಿ ಕಟ್ಟಿದ ಭತ್ತದ ಹೊರೆಗಳನ್ನು ಗದ್ದೆಯಲ್ಲಿಯೆ ಬಿಟ್ಟಿರುವುದು
ಮಳೆಯಿಂದಾಗಿ ಕಟ್ಟಿದ ಭತ್ತದ ಹೊರೆಗಳನ್ನು ಗದ್ದೆಯಲ್ಲಿಯೆ ಬಿಟ್ಟಿರುವುದು
ಚಿಕ್ಕಬೊಮ್ಮನಹಳ್ಳಿಯ ಕೆರೆಗೆ ನೀರು ಹರಿದು ಬರುತ್ತಿದೆ
ಚಿಕ್ಕಬೊಮ್ಮನಹಳ್ಳಿಯ ಕೆರೆಗೆ ನೀರು ಹರಿದು ಬರುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT