ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಲೆ ಕುಸಿತ: ಹೊಲಕ್ಕೆ ಹೊರೆಯಾದ ಬೂದುಕುಂಬಳ

Published 11 ನವೆಂಬರ್ 2023, 5:39 IST
Last Updated 11 ನವೆಂಬರ್ 2023, 5:39 IST
ಅಕ್ಷರ ಗಾತ್ರ

ಹಳೇಬೀಡು: ಬೆಲೆ ಕುಸಿತದಿಂದಾಗಿ ಕೇಳುವವರೇ ಇಲ್ಲದಂತಾಗಿರುವ ಬೂದುಕುಂಬಳ ಹಳೇಬೀಡಿನಲ್ಲಿ ರಸ್ತೆ ಬದಿಯಲ್ಲಿ ಕೊಳೆಯುತ್ತಿದೆ. ಅಯುಧ ಪೂಜೆಯಲ್ಲಿಯೂ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಬೆಳೆಗಾರರು ಹಾಗೂ ವರ್ತಕರು ತತ್ತರಿಸಿದ್ದಾರೆ.

ಕುಂಬಳಕಾಯಿ ಬೆಲೆ ಪಾತಳಕ್ಕೆ ಕುಸಿದಿದೆ. ಒಂದು ಕೆ.ಜಿ. ಕುಂಬಳಕಾಯಿ ಬೆಲೆ ₹ 7ರಿಂದ ₹ 8ಕ್ಕೆ ಇಳಿಕೆಯಾಗಿದೆ. ಸಿಕ್ಕಿದಷ್ಟು ಹಣಕ್ಕೆ ಮಾರಾಟ ಮಾಡಿ ಕೈತೊಳೆದುಕೊಳ್ಳಲು ರೈತರು ಮುಂದಾದರೂ ಕೊಳ್ಳುವವರಿಲ್ಲದೇ ಚಿಂತಕ್ರಾಂತರಾಗಿದ್ದಾರೆ.

ಕುಂಬಳಕಾಯಿ ಹೊಲಕ್ಕೆ ಹೊರೆಯಾಗಿದೆ. ಕೆಲವು ಕಡೆ ಜಮೀನಿನಲ್ಲಿಯೇ ಕುಂಬಳಕಾಯಿ ಕೊಳೆತು ಹೋಗುತ್ತಿದೆ. ಸಾಕಷ್ಟು ರೈತರು ರಸ್ತೆ ಬದಿಗೆ ಕುಂಬಳಕಾಯಿ ತಂದು ಸುರಿಯುತ್ತಿದ್ದಾರೆ. ಕುಂಬಳಕಾಯಿಯನ್ನು ಯಾರೂ ಮುಟ್ಟುತ್ತಿಲ್ಲ. ಅಡುಗೆ ಬಳಕೆಗೆ ಎಲ್ಲರೂ ಕುಂಬಳಕಾಯಿ ಬಳಸುವುದಿಲ್ಲ. ಸಾಕಷ್ಟು ಮಂದಿ ಗೃಹ ಪ್ರವೇಶ, ಆಯುಧ ಪೂಜೆಯಲ್ಲಿ ಮಾತ್ರ ಕುಂಬಳಕಾಯಿ ಬಳಸುತ್ತಾರೆ. ಉಚಿತವಾಗಿ ಕುಂಬಳಕಾಯಿ ಕೊಂಡೊಯ್ಯಬಾರದು ಎಂಬ ನಂಬಿಕೆ ಸಾಕಷ್ಟು ಜನರಲ್ಲಿ ಬೇರೂರಿದೆ. ಹೀಗಾಗಿ ಪೌಷ್ಟಿಕಾಂಶದ ಕುಂಬಳಕಾಯಿ ರಸ್ತೆ ಬದಿಯಲ್ಲಿ ಕೊಳೆಯುತ್ತಿದೆ.

ಬೇಲೂರು ರಸ್ತೆಯಲ್ಲಿರುವ ಗೋವಿನಕಟ್ಟೆ ತಿಮ್ಮನಹಳ್ಳಿ ಕಟ್ಟೆಯ ಏರಿಯ ಮೇಲೆ ರೈತರು ಕುಂಬಳಕಾಯಿ ರಾಶಿ ಹಾಕಿದ್ದಾರೆ. ಬಿಸಿಲಿನ ತಾಪದ ಜೊತೆಗೆ ಮಳೆಯೂ ಬೀಳುತ್ತಿರುವುದರಿಂದ ಕುಂಬಳಕಾಯಿ ಕೊಳೆತು ನಾರಲಿದೆ ಎಂಬ ಮಾತು ರೈತರಿಂದಲೇ ಕೇಳಿ ಬರುತ್ತಿದೆ.

‘ಕುಂಬಳಕಾಯಿ ಖರೀದಿಸುವವರು ಇಲ್ಲ ಎಂದು ಹೊಲದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕುಂಬಳಕಾಯಿ ಬೆಳೆಯಲ್ಲಿ ನಷ್ಟವಾದರೂ, ಮತ್ತೊಂದು ಬೆಳೆಯಲ್ಲಾದರೂ ದುಡಿಮೆ ಮಾಡಲು ರೈತರು ಮುಂದಾಗಲೇಬೇಕು. ಹೀಗಾಗಿ ಹೊಲದಲ್ಲಿರುವ ಕುಂಬಳಕಾಯಿಯನ್ನು ಹೊರಗೆ ಸಾಗಿಸಿ, ಭೂಮಿಯನ್ನು ಹಸನು ಮಾಡಲೇಬೇಕಾಗಿದೆ. ಕುಂಬಳಕಾಯಿ ಹೊರ ಹಾಕಲು ಬೇರೆ ಮಾರ್ಗವಿಲ್ಲ. ವಿಧಿ ಇಲ್ಲದೆ ರಸ್ತೆ ಬದಿಗೆ ಹಾಕಲೇಬೇಕಾಗಿದೆ. ಹಿಂದೆ ನಾನು ಸಹ ಬೂದುಕುಂಬಳ ಬೆಳೆದು ಕೈಸುಟ್ಟು ಕೊಂಡಿದ್ದೇನೆ’ ಎಂದು ರೈತ ಸುರೇಶ್ ಶಂಭು ಹೇಳುತ್ತಾರೆ.

‘ಮಳೆ ಕೈಕೊಟ್ಟಿದ್ದಲ್ಲದೇ ಅಧಿಕ ಉಷ್ಣಾಂಶದಿಂದ ಕುಂಬಳಕಾಯಿ ದೊಡ್ಡಗಾತ್ರದಲ್ಲಿ ಬೆಳವಣಿಗೆಯಾಗಲಿಲ್ಲ. ಫಸಲು ಕಡಿಮೆ ಪ್ರಮಾಣದಲ್ಲಿ ಬಂತು. ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಮಾರುಕಟ್ಟೆಗೆ ಕುಂಬಳಕಾಯಿ ಭಾರೀ ಪ್ರಮಾಣದಲ್ಲಿ ಜಮಾಯಿಸಿತು. ಅಗತ್ಯಕ್ಕಿಂತ ಹೆಚ್ಚಿನ ಮಾಲು ಮಾರುಕಟ್ಟೆ ಪ್ರವೇಶಿಸಿದ್ದು, ಗುಣಮಟ್ಟ ಕಾಯಿ ಇಲ್ಲದಂತಾಯಿತು. ಹೀಗಾಗಿ ಕುಂಬಳಕಾಯಿ ಕೇಳುವವರೆ ಇಲ್ಲದಂತಾಯಿತು’ ಎಂದು ವರ್ತಕ ಈಶ್ವರ ಸಮಸ್ಯೆ ಬಿಚ್ಚಿಟ್ಟರು.

ಬೇಡಿಕೆಗಿಂತ ಅಧಿಕ ಆವಕ

ಆಯುಧ ಪೂಜೆಗಿಂತ ಒಂದು ವಾರ ಮೊದಲು ಬೂದುಕುಂಬಳ ಕೆ.ಜಿ.ಗೆ ₹30ರಿಂದ ₹ 40 ಬೆಲೆ ನಿಗದಿಯಾಗಿತ್ತು. ಆದರೆ ಹೆಚ್ಚು ಮಂದಿ ಖರೀದಿ ಮಾಡಲಿಲ್ಲ. ಆಯುಧ ಪೂಜೆ ವೇಳೆಗೆ ಬೆಲೆ ಇಳಿಕೆಯಾಗುತ್ತ ಬಂತು. ಆಯುಧ ಪೂಜೆಯ ದಿನ ಸಾಕಷ್ಟು ವರ್ತಕರು ಕೇಳಿದಷ್ಟು ಬೆಲೆಗೆ ಮಾರಾಟ ಮಾಡಿದರು. ಆದರೂ ಕುಂಬಳಕಾಯಿ ರಾಶಿ ಕಡಿಮೆಯಾಗಲಿಲ್ಲ. ಪೂಜೆ ಮುಗಿದ ನಂತರ ನಗರಗಳಿಗೆ ಕುಂಬಳಕಾಯಿ ಕಳುಹಿಸುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಹಳೇಬೀಡಿನಲ್ಲಿ ಆಯುಧ ಪೂಜೆ ಸಮಯದಲ್ಲಿ ಅಂದಾಜು 2ಸಾವಿರ ಕುಂಬಳಕಾಯಿ ಮಾರಾಟವಾಗುತ್ತದೆ. ಈ ವರ್ಷ ಕೇವಲ 1ಸಾವಿರ ಕುಂಬಳಕಾಯಿ ಮಾರಾಟವಾಯಿತು. 8ಸಾವಿರದಿಂದ 10 ಸಾವಿರ ಕುಂಬಳಕಾಯಿ ಬಂದಿದ್ದರಿಂದ ಮಾರಾಟವಾಗದೆ ಉಳಿಯಿತು ಎಂದು ತರಕಾರಿ ವರ್ತಕ ಹೇಮಂತ್ ಹೇಳಿದರು.

ಕುಂಬಳಕಾಯಿ ಜೊತೆಗೆ ತರಕಾರಿಗಳಿಗೂ ಬೆಲೆ ಇಲ್ಲದೆ ರೈತರು ತತ್ತರಿಸಿದ್ದಾರೆ. ತರಕಾರಿಗೆ ಆಗೊಮ್ಮೆ ಈಗೊಮ್ಮೆ ಬೆಲೆ ಸಿಕ್ಕರೂ ಉಪಯೋಗವಿಲ್ಲ. ಕೃಷಿ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ಕೊಡಬೇಕು.
ಸುರೇಶ್ ಶಂಭು, ರೈತ, ಹಳೇಬೀಡು
ಆಯುಧಪೂಜೆ ನಂತರ ಉಳಿದ ಕುಂಬಳಕಾಯಿ ಖರೀದಿಸಲು ನಗರದ ವರ್ತಕರು ಬರುತ್ತಿದ್ದರು. ಈ ವರ್ಷ ಅಯುಧಪೂಜೆ ಮುಗಿದಿದ್ದರೂ ಕುಂಬಳಕಾಯಿ ಕೇಳುವವರೇ ಇಲ್ಲದಂತಾಗಿದೆ.
ಈಶ್ವರ, ವರ್ತಕ, ಹಳೇಬೀಡು
ಹಳೇಬೀಡು ಸಮೀಪದ ತಿಮ್ಮನಹಳ್ಳಿ ಕಟ್ಟೆಯ ಏರಿಯಲ್ಲಿ ಬಿದ್ದಿರುವ ಕುಂಬಳಕಾಯಿ ರಾಶಿ.
ಹಳೇಬೀಡು ಸಮೀಪದ ತಿಮ್ಮನಹಳ್ಳಿ ಕಟ್ಟೆಯ ಏರಿಯಲ್ಲಿ ಬಿದ್ದಿರುವ ಕುಂಬಳಕಾಯಿ ರಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT