ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಸ್ಮಾರ್ಟ್‌ ಎದುರು ಪ್ರತಿಭಟನೆ

ಕೇಂದ್ರದ ಕೃಷಿ ಕಾಯ್ದೆ ರದ್ದುಗೊಳಿಸಲು ಒತ್ತಾಯ
Last Updated 14 ಡಿಸೆಂಬರ್ 2020, 13:54 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಹಾಗೂ ರೈತರ ದೆಹಲಿ ಚಲೋ ಬೆಂಬಲಿಸಿ ನಗರದ ಶಂಕರ ಮಠ ರಸ್ತೆಯಲ್ಲಿರುವ ರಿಲಯನ್ಸ್‌ ಸ್ಮಾರ್ಟ್ ಸೂಪರ್‌ ಸ್ಟೋರ್‌ ಎದುರು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರೈತ, ಕಾರ್ಮಿಕ, ಜನಪರ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಸಾಗಿ ರಿಲಯನ್ಸ್‌ ಸ್ಮಾರ್ಟ್ ಎದುರು ಜಮಾವಣೆಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ‘ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಉದ್ಯಮಿಗಳ ಸಾಲಮನ್ನಾ ಮಾಡುವ ಸರ್ಕಾರ, ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಿ ನೆರವಿಗೆ ಧಾವಿಸುತ್ತಿಲ್ಲ. ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಕಾರ್ಪೋರೆಟ್ ಕಂಪನಿಗಳ ಹಿಡಿತಕ್ಕೆ ಸಲುಕಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‌ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರ ಮೂರು ಕಾಯ್ದೆಗಳು ಕಾರ್ಪೋರೆಟ್‌ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಸಂಘ ಪರಿವಾರಕ್ಕೆ ಸೇರಿದ
ಭಾರತೀಯ ಕಿಸಾನ್ ಸಂಘ ರೈತ ವಿರೋಧಿ ಕಾಯ್ದೆಗಳಿಗೆ ಬೆಂಬಲ ನೀಡಿರುವುದು ನಿಜ ಬಣ್ಣ ಬಯಲಾಗಿದೆ’ ಎಂದು
ಟೀಕಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ‘ಕೃಷಿ ಸಂಬಂಧಿತವಾದ ತಿದ್ದುಪಡಿ ಕಾಯ್ದೆಗಳು ದೇಶದ ರೈತ
ಹಾಗೂ ಕಾರ್ಮಿಕರ ಬದುಕಿಗೆ ಮಾರಕವಾಗಿವೆ ಮತ್ತು ಕಾರ್ಪೋರೇಟ್ ಲೂಟಿಗೆ ಪೂರಕವಾಗಿವೆ. ಕನಿಷ್ಠ ಬೆಂಬಲ ಬೆಲೆ ಖಾತರಿ (ಎಂಎಸ್‍ಪಿ)ಯನ್ನು ಶಾಸನ ಬದ್ಧಗೊಳಿಸಬೇಕು, ಸಾರ್ವಜನಿಕ ಸಾಲ ಒದಗಿಸುವ ಹಾಗೂ ಋಣಮುಕ್ತಿ ನೀಡುವ ಕಾಯ್ದೆ ಜಾರಿಗೆ ತರಬೇಕು ಎಂಬ ಒತ್ತಾಯಗಳೊಂದಿಗೆ ಕೋಟ್ಯಂತರ ರೈತರು ಸತ್ಯಾಗ್ರಹ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಮುಖಂಡ ಬಾಬು, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ ಪೃಥ್ವಿ, ಕೆಪಿಆರ್‍ಎಸ್ ಜಿಲ್ಲಾ ಕಾರ್ಯದರ್ಶಿ ವಸಂತ ಕುಮಾರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ, ಕಾರ್ಯದರ್ಶಿ ಅರವಿಂದ, ಜಯಂತಿ, ರೈತ ಸಂಘದ ಸಾದಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT