ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: 2.5 ಲಕ್ಷ ಶೇಂಗಾ ಹೋಳಿಗೆ ತಯಾರಿ

35 ಎಕರೆಯಲ್ಲಿ ಕಿಚನ್‌ ಮತ್ತು ಡೈನಿಂಗ್‌ ವ್ಯವಸ್ಥೆ: ನಿತ್ಯ 1.50 ಲಕ್ಷ ಮಂದಿಗೆ ಊಟ
Last Updated 5 ಜನವರಿ 2023, 14:32 IST
ಅಕ್ಷರ ಗಾತ್ರ

ಹಾವೇರಿ: ‘ಏಲಕ್ಕಿ ಕಂಪಿನ ನಗರಿ’ ಹಾವೇರಿಯಲ್ಲಿ ಜನವರಿ 6ರಿಂದ 8ರ ವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರು ದಿನಗಳ ಮುಂಚೆಯೇ ಸಿಹಿ ಖಾದ್ಯಗಳ ತಯಾರಿ ಆರಂಭವಾಗಿದೆ.

ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಎದುರು ನಿರ್ಮಾಣಗೊಂಡಿರುವ ವೇದಿಕೆಯ ಅಡುಗೆ ಸ್ಥಳದಲ್ಲಿ 2.5 ಲಕ್ಷ ಶೇಂಗಾ ಹೋಳಿಗೆ, ರವೆ ಉಂಡೆ ಮತ್ತು ಮೋತಿಚೂರ್‌ ಲಡ್ಡು ಸೇರಿದಂತೆ ಸಿಹಿ ಖಾದ್ಯಗಳ ತಯಾರಿ ಭರದಿಂದ ಸಾಗಿದೆ.

ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಾದ ಕೇಸರಿಬಾತ್‌, ಹೆಸರುಬೇಳೆ ಪಾಯಸ, ಶ್ಯಾವಿಗೆ ಕೀರು, ಗೋಧಿ ಹುಗ್ಗಿ, ಮೈಸೂರ್‌ ಪಾಕ್‌ ಸೇರಿದಂತೆ ವಿಶೇಷ ಊಟ ತಯಾರು ಮಾಡಲು ಸಮ್ಮೇಳನದ ಆಹಾರ ಉಪಸಮಿತಿ ಸಿದ್ಧತೆ ಕೈಗೊಂಡಿದೆ. ಈಗಾಗಲೇ ಹುಬ್ಬಳ್ಳಿಯ ಭೈರು ಕ್ಯಾಟರರ್ಸ್‌ನವರು 600 ಬಾಣಸಿಗರು ಸೇರಿದಂತೆ 1200 ಅಡುಗೆ ಸಿಬ್ಬಂದಿಯೊಂದಿಗೆ ಊಟದ ತಯಾರಿ ನಡೆಸಿದ್ದಾರೆ.

ನಿತ್ಯ 1.50 ಲಕ್ಷ ಮಂದಿಗೆ ಊಟ: ‘ಮೊದಲ ದಿನ 1.50 ಲಕ್ಷ, ಎರಡನೇ ದಿನ 1 ಲಕ್ಷ ಹಾಗೂ 3ನೇ ದಿನ 1.50 ಲಕ್ಷ ಮಂದಿಗೆ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗುವುದು. ಸಾಮಾನ್ಯ ವರ್ಗ, ಗಣ್ಯರು, ಅತಿಗಣ್ಯರು ಮೂರು ಶ್ರೇಣಿಯಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ. ಸಮ್ಮೇಳನದ ಮೂರೂ ದಿನ ನಿಗದಿತ ಅವಧಿಯಲ್ಲಿ ಸಾವಯವ ಬೆಲ್ಲದ ಕಾಫಿ, ಟೀ ಪೂರೈಸಲು ನಿರ್ಧರಿಸಲಾಗಿದೆ’ ಎಂದು ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ ಮೊಹಮ್ಮದ್‌ ರೋಶನ್‌ ಮಾಹಿತಿ ನೀಡಿದರು.

35 ಎಕರೆಯಲ್ಲಿ ಕಿಚನ್‌: ಸಮ್ಮೇಳನ ನಡೆಯುವ 128 ಎಕರೆ ವಿಶಾಲವಾದ ಜಾಗದಲ್ಲಿ 35 ಎಕರೆಯಲ್ಲಿ ಕಿಚನ್ ಮತ್ತು ಡೈನಿಂಗ್ ವ್ಯವಸ್ಥೆ ಮಾಡಲಾಗಿದೆ. 250 ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರತಿ ಕೌಂಟರ್ ಉಸ್ತುವಾರಿಗೆ ಒಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ 20 ಸ್ವಯಂಸೇವಕರನ್ನು ನೇಮಿಸಲಾಗುವುದು. ಮಹಿಳೆಯರು, ಅಂಗವಿಕಲರು, 70 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಸಮ್ಮೇಳನದ ಸೇವಾ ನಿರತರಿಗೆ ಪ್ರತ್ಯೇಕ ಊಟದ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ರೋಶನ್‌ ತಿಳಿಸಿದರು.

ನೀರಿನ ಕೊರತೆಯಾಗದು: ‘ಸಮ್ಮೇಳನ ಜಾಗದಲ್ಲಿ 23 ನೀರಿನ ಪಾಯಿಂಟ್‌ಗಳನ್ನು ಮಾಡಲಾಗಿದ್ದು, ಕುಡಿಯುವುದಕ್ಕೆ ಮತ್ತು ಕೈತೊಳೆಯುವುದಕ್ಕೆ ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಕೈ ತೊಳೆಯಲೆಂದೇ 828 ನಲ್ಲಿಗಳನ್ನು ಹಾಗೂ ಕುಡಿಯುವ ನೀರಿಗಾಗಿ 414 ನಲ್ಲಿಗಳನ್ನು ಅಳವಡಿಸಿದ್ದೇವೆ. ದೇವಿಹೊಸೂರು ಮತ್ತು ಅಗಡಿಯ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಶುದ್ಧೀಕರಿಸಿದ ನೀರನ್ನು ಪೂರೈಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಾಫರ್‌ ಸುತಾರ ‘ಪ್ರಜಾವಾಣಿ’ಗೆ ತಿಳಿಸಿದರು.

3 ದಿನಗಳ ಊಟದ ‘ಮೆನು’
‘ಮೊದಲ ದಿನ ಉಪಾಹಾರಕ್ಕೆ ಉಪ್ಪಿಟ್ಟು-ಕೇಸರಿಬಾತ್‌, ಎರಡನೇ ದಿನ ವೆಜಿಟೆಬಲ್‌ ಪುಲಾವ್‌- ರವೆ ಉಂಡೆ, ಮೂರನೇ ದಿನ ವಾಂಗೀಬಾತ್-ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತಿದೆ. ಮಧ್ಯಾಹ್ನದ ಊಟಕ್ಕೆ ಜೋಳದ ರೊಟ್ಟಿ, ಚಪಾತಿ, ಪಲ್ಯ, ಶೇಂಗಾ ಚಟ್ನಿ, ಅನ್ನಸಾರು, ಉಪ್ಪಿನಕಾಯಿ, ಮೊಸರು ಕೊಡಲಾಗುತ್ತದೆ. ರಾತ್ರಿ ಊಟಕ್ಕೆ ನಿತ್ಯ ಒಂದೊಂದು ರೀತಿಯ ಪಾಯಸ, ಜತೆಗೆ ಪುಳಿಯೊಗರೆ, ಬಿಸಿಬೇಳೆ ಬಾತ್‌, ಚಿತ್ರಾನ್ನ ಹಾಗೂ ಅನ್ನ ಸಾಂಬಾರ್‌ ಬಡಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾಹಿತಿ ನೀಡಿದರು.

***

6 ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅಡುಗೆ ತಯಾರಿಸಿರುವ ಹಿರಿಮೆ ನಮ್ಮದು. ನಮ್ಮ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ.
–ರತನ್‌ ಪ್ರಜಾಪತ್‌, ಅಡುಗೆ ಗುತ್ತಿಗೆದಾರ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT