ಹಾವೇರಿ: ‘ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ನಿರ್ವಾಹಕಿ ಹಾಗೂ ಇತರೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಹಳೇ ಪಿ.ಬಿ. ರಸ್ತೆಯಲ್ಲಿರುವ ಡಿಪೊ ಎದುರು ಸೇರಿದ್ದ ವಿದ್ಯಾರ್ಥಿಗಳು, ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.
‘ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಜುಲೈ 10ರಂದು ಇಜಾರಿ ಲಕಮಾಪುರ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಇದೇ ಬಸ್‌ನ ನಿರ್ವಾಹಕಿ, ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ನಂತರ, ಹಾವೇರಿ ನಿಲ್ದಾಣದಲ್ಲೂ ನಿರ್ವಾಹಕಿ ಹಾಗೂ ಸಿಬ್ಬಂದಿ ಸೇರಿಕೊಂಡು ವಿದ್ಯಾರ್ಥಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಇದರಿಂದ ಗಾಯಗೊಂಡಿದ್ದ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಸಿಬ್ಬಂದಿ, ತಮ್ಮ ಮೇಲೆಯೇ ಹಲ್ಲೆಯಾಗಿರುವುದಾಗಿ ಸುಳ್ಳು ದೂರು ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ದೂರಿದರು.
‘ಹಲ್ಲೆ ಮಾಡಿದ್ದ ನಿರ್ವಾಹಕಿ ಹಾಗೂ ಇತರೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಅಮಾನತು ಮಾಡಲು ಗಡುವು ನೀಡಲಾಗಿತ್ತು. ಆದರೆ, ಇದುವರೆಗೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಹಾವೇರಿಯಿಂದ ಕುಸನೂರಿಗೆ ಹೋಗುವ ಬಸ್, ಸೋಮಾಪುರ ಮಾರ್ಗವಾಗಿ ಹೋಗುವಂತೆ ಮಾಡಬೇಕು. ಸಿ.ಬಿ.ಕೊಳ್ಳಿ ಕಾಲೇಜು ಬಳಿ ಬಸ್ ನಿಲುಗಡೆ ಮಾಡಬೇಕು. ಹಾವೇರಿ–ಚಿಕ್ಕ ಬಾಸೂರು, ಹಾವೇರಿ–ಹೊಂಬರಡಿ ಮಾರ್ಗದಲ್ಲಿ ಹೆಚ್ಚುವರಿ ಬಸ್ ಬಿಡಬೇಕು. ಹಾವೇರಿ–ಶಿರಸಿ ಮಾರ್ಗದಲ್ಲಿ ಹೋಗುವ ಬಸ್‌ಗಳು, ವರ್ದಿ ವೃತ್ತ ಹಾಗೂ ಗೌರಾಪುರದಲ್ಲಿ ನಿಲುಗಡೆ ಮಾಡಲು ಸೂಚಿಸಬೇಕು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಅಮಾನತಿಗೆ ಕ್ರಮ: ಡಿಪೊ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಇದರಿಂದ ಬೇಸತ್ತ ಕೆಲ ವಿದ್ಯಾರ್ಥಿಗಳು, ಘೋಷಣೆ ಕೂಗುತ್ತ ಡಿಪೊದೊಳಗೆ ಹೋಗಿದ್ದರು. ಎಚ್ಚೆತ್ತ ಅಧಿಕಾರಿಗಳು, ವಿದ್ಯಾರ್ಥಿಗಳ ಜೊತೆಗೆಯೇ ಡಿಪೊದಿಂದ ಹೊರಬಂದು ಮನವಿ ಸ್ವೀಕರಿಸಿದರು.
‘ನಿರ್ವಾಹಕಿ ಅಮಾನತು ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಹೆಚ್ಚುವರಿ ಬಸ್ ಹಾಗೂ ಬಸ್ ನಿಲುಗಡೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಹೇಳಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಪೊ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಎಬಿವಿಪಿ ಹಾವೇರಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ್ ಪುರವಂತಿಗೌಡ್ರ, ತಾಲ್ಲೂಕ ಸಂಚಾಲಕ ನವೀನ ಜಿ.ಕೆ., ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದು ಹಿರೇಮಠ, ಮಾಧ್ಯಮ ಪ್ರಮುಖ ಸೋಮಶೇಖರ ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.