ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವು ನೀಡಿದ ಮಳೆ, ನದಿ ತೀರದಲ್ಲಿ ಹೈ–ಅಲರ್ಟ್!

ಬಣವೆ ಬಿದ್ದು ವ್ಯಕ್ತಿ ಸಾವು, ಚಳಿಗೆ ಇಬ್ಬರು ವೃದ್ಧರ ಬಲಿ, ಗ್ರಾಮಗಳು ಇನ್ನೂ ಜಲಾವೃತ
Last Updated 11 ಆಗಸ್ಟ್ 2019, 9:15 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಪ್ರವಾಹ ಪರಿಸ್ಥಿತಿ ಮಾತ್ರ ಯಥಾ ಸ್ಥಿತಿಯಲ್ಲಿದೆ. ಮಳೆ, ಚಳಿಯಿಂದಾಗಿ ಶನಿವಾರ ಮೂವರು ಅಸುನೀಗಿದ್ದಾರೆ. ಇದರ ಬೆನ್ನಲ್ಲೇ ಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವುದಾಗಿ ರಾಜ್ಯ ನೀರಾವರಿ ನಿಗಮ ಘೋಷಿಸಿದ್ದು, ಅದರಿಂದ ನದಿ ಪತ್ರದ ಗ್ರಾಮಗಳಲ್ಲಿ ಹೈ–ಅಲರ್ಟ್ ಮುಂದುವರಿದಿದೆ.

‘ಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ತಗ್ಗು ಪ್ರದೇಶದ ಜನ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸ್ಥಳಗಳಿಗೆ ತೆರಳಬೇಕು’ ಎಂದು ರಾಜ್ಯ ನೀರಾವರಿ ನಿಗಮದ ಎಂಜಿನಿಯರ್ ಆರ್.ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಲಾಶಯದ ಮಟ್ಟ ಶನಿವಾರಕ್ಕೆ 176.6 ಅಡಿ ತಲುಪಿದೆ. ಒಳ ಹರಿವಿನ ಪ್ರಮಾಣ 75 ಸಾವಿರದಿಂದ 80 ಸಾವಿರ ಕ್ಯೂಸೆಕ್ಸ್ ಇದ್ದು, ಇದೇ ಪ್ರಮಾಣದಲ್ಲಿ ನೀರು ಹರಿದು ಬರುವುದು ಮುಂದುವರಿದರೆ ಜಲಾಶಯ ಶೀಘ್ರದಲ್ಲೇ ಭರ್ತಿ ಆಗಬಹುದು. ಆಗ ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಬೇಕಾದರೂ ನದಿಗೆ ನೀರು ಬಿಡಲಾಗುವುದು. ಹೀಗಾಗಿ, ನದಿ ಪಾತ್ರದ ಜನ ಎಚ್ಚರಿದಿಂದ ಇರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಮೂವರ ಸಾವು:ಗಂಜಿಕೇಂದ್ರಕ್ಕೆ ತೆರಳಲು ನಿರಾಕರಿಸಿದ್ದ ಹಾವೇರಿ ಶಾಂತಿನಗರದ ಮಾರಪ್ಪ ಹುಸೇನಪ್ಪ ಒಂಟೆತ್ತಿನವರ (76) ವಿಪರೀತ ಚಳಿಯಿಂದ ಶನಿವಾರ ಬೆಳಿಗ್ಗೆ ಗುಡಿಸಲಿನಲ್ಲೇ ಅಸುನೀಗಿದ್ದಾರೆ. ಕೋಣನತಂಬಿಗಿ ಗ್ರಾಮದ ಭರ್ಮಣ್ಣ ಹೊಳಪ್ಪನವರ (70) ಕೂಡ ಗಂಜಿಕೇಂದ್ರದಲ್ಲೇ ಮೃತಪಟ್ಟಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮೈ ಮೇಲೆ ಹುಲ್ಲಿನ ಬಣವೆ ಬಿದ್ದು ನಾಗಪ್ಪ ಗುಡ್ಡಪ್ಪ ಮಳಗುಂದ (38) ಮರಣ ಹೊಂದಿದ್ದಾರೆ.

ಮುಳುಗಡೆ ಆಗಿದ್ದ ಹಾಗೂ ಜಲಾವೃತವಾಗಿದ್ದ ಕೆಲ ಗ್ರಾಮಗಳಲ್ಲಿ ಶನಿವಾರ ನೀರಿನ ಪ್ರಮಾಣ ಸ್ವಲ್ಪ ಕಡಿಮೆ ಆಗಿತ್ತು. ಆದರೆ, ವರದಾ ನದಿ ಹರಿವು ಹೆಚ್ಚಿರುವ ಕಾರಣ ನಾಗನೂರು, ವರದಹಳ್ಳಿ, ಕರ್ಜಗಿ, ಕಲಕೋಟಿ, ಹಿರೇಮಗದೂರು, ಕೋಣನತಂಬಿಗಿ ಗ್ರಾಮಗಳಲ್ಲಿ ಪರಿಸ್ಥಿತಿ ಹಾಗೆಯೇ ಇತ್ತು.

ಬಿಸಿಲ ಕಂಡು ನಿಟ್ಟುಸಿರು: ಜಿಲ್ಲೆಯಲ್ಲಿ ಗುರುವಾರ 591.7 ಮಿ.ಮೀ ಪ್ರಮಾಣದಲ್ಲಿ ಸುರಿದಿದ್ದ ಮಳೆ, ಶುಕ್ರವಾರ 224.3 ಮಿ.ಮೀಗೆ ಇಳಿಯಿತು. ಶನಿವಾರ ಸಂಪೂರ್ಣ ಕಡಿಮೆ ಆಗಿದ್ದು, ಕೆಲ ಕಾಲ ಬಿಸಿಲು ಆವರಿಸಿದ್ದರಿಂದ ಜನ ನಿಟ್ಟುಸಿರು ಬಿಟ್ಟರು.

‘ತುಂಗಭದ್ರಾ ನದಿಯಿಂದ 1.15 ಲಕ್ಷ ಕ್ಯೂಸೆಕ್ಸ್,ವರದಾ ನದಿಯಿಂದ 32 ಕ್ಯೂಸೆಕ್ ಹಾಗೂ ಧರ್ಮಾ ನದಿಯಿಂದ 5 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಗ್ರಾಮಗಳಿಗೆ ನೆರೆ ಆವರಿಸಿದೆ.ಹಾನಗಲ್‌ ಹಾಗೂ ಸವಣೂರು ತಾಲ್ಲೂಕುಗಳಲ್ಲಿ ತಲಾ ನಾಲ್ಕು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಸಂಪರ್ಕ ಒದಗಿಸುವ ಕಾರ್ಯ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ಹೇಳಿದರು.

‘ಜಿಲ್ಲೆಯ 76 ಗಂಜಿ ಕೇಂದ್ರಗಳಲ್ಲಿ ಒಟ್ಟು 6,493 ಸಂತ್ರಸ್ತರು ಆಶ್ರಯ ಪಡೆದಿದ್ದು, ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಅವರ ಬೇಡಿಕೆಗೆ ಅನುಸಾರ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ. ವರದಾ ನದಿಯಲ್ಲಿ ಕೊಚ್ಚಿ ಹೋಗಿರುವ ರೈತನ ಪತ್ತೆಗೆ ಶೋಧ ಮುಂದುವರಿದಿದೆ.’

‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಹಂತ ಹಂತವಾಗಿ ಸುಧಾರಿಸುತ್ತಿದೆ. ಜಿಲ್ಲಾ ಅಗ್ನಿಶಾಮಕ ಪಡೆಯ ಜತೆ ಬಳ್ಳಾರಿ ಹಾಗೂ ಚಿತ್ರದುರ್ಗದ ಸಿಬ್ಬಂದಿಯೂ, ನಾಲ್ಕು ದೋಣಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 15ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ10 ಜಾಕ್‍ವೆಲ್‍ಗಳು ಮುಳುಗಿ ಹೋಗಿವೆ. ನಡುಗಡ್ಡೆ ಆಗಿರುವ ನದಿನೀರಲಗಿ ಗ್ರಾಮದ ಜನರಿಗೆ ದೋಣಿಯ ಮೂಲಕವೇ ನೀರಿನ ಕ್ಯಾನ್‍ಗಳನ್ನು ಪೂರೈಸಲಾಗುತ್ತಿದೆ‌’ ಎಂದು ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಘೋಷಣೆ: ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಪ್ರವಾಹ ಪೀಡತ ಎಂದು ಸರ್ಕಾರ ಘೋಷಣೆ ಮಾಡಿದ್ದು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕಂದಾಯಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಕೋಶದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ತಾಯಿ–ಮಗು, ಹಿರಿಯರ ಸ್ಥಳಾಂತರ
‘ಗಂಜಿಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಎಲ್ಲ ಹಿರಿ ಜೀವಗಳನ್ನು, ಒಂದು ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಸತಿ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ಅದರನ್ವಯ ತಾಯಿ–ಮಗು, ಹಿರಿಯರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಿದ್ದೇವೆ’ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಗಿಲ್ಲ ಪರಿಹಾರ; ಜಿಲ್ಲಾಧಿಕಾರಿ ಸ್ಪಷ್ಟನೆ
ನೆರೆಯಿಂದ ಹಾನಿಗೀಡಾದ14 ಜಿಲ್ಲೆಗಳಿಗೆ ಸರ್ಕಾರ ₹ 100 ಕೋಟಿ ಪರಿಹಾರ ಘೋಷಿಸಿದೆ. ಆದರೆ, ಆ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯ ಹೆಸರು ಇಲ್ಲದಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ‘ಜಿಲ್ಲಾ ವಿಪತ್ತು ನಿಧಿಯಲ್ಲಿ ₹ 16 ಕೋಟಿ ಇದೆ. ಅಲ್ಲದೇ ಮಳೆಗಾಲದ ಪ್ರಾರಂಭದಲ್ಲೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ತಹಶೀಲ್ದಾರ್‌ಗಳಿಗೂ ತಲಾ ₹ 25 ಲಕ್ಷ ನೀಡಲಾಗಿದೆ. ಹೀಗಾಗಿ, ಒಟ್ಟು ₹ 18 ಕೋಟಿಯಷ್ಟು ಹಣ ನಿಧಿಯಲ್ಲಿದೆ. ಅದೇ ಕಾರಣಕ್ಕೆ ಸರ್ಕಾರ ಜಿಲ್ಲೆಗೆ ಹಣ ಕೊಟ್ಟಿಲ್ಲ. ಸಂತ್ರಸ್ತರ ನೆರವಿಗೆ ಜಿಲ್ಲಾಡಳಿತ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಿದೆ’ ಎಂದು ಸ್ಪಷ್ಟಪಡಿಸಿದರು.

ವೇಷ ಹಾಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು
ಮಳೆಯಿಂದಾಗಿ ನಲುಗಿದ್ದ ಶಾಂತಿನಗರದ ನಿವಾಸಿಗಳಿಗಾಗಿ ತೆರೆಯಲಾಗಿದ್ದ ಗಂಜಿ ಕೇಂದ್ರಕ್ಕೆ ಹೋಗಲು ನಿರಾಕರಿಸಿದ ಮಾರಪ್ಪ ಹುಸೇನಪ್ಪ ಒಂಟೆತ್ತಿನವರ(76) ಶನಿವಾರ ನಸುಕಿನಲ್ಲಿ ಅತಿಯಾದ ಚಳಿಯಿಂದ ಮೃತಪಟ್ಟಿದ್ದಾರೆ.

ಮೃತರು ಮೂಲ ಇಳಕಲ್‌ನ ಚಂದಾಪುರದವರು. ಕಳೆದ ನಾಲ್ಕೈದು ತಿಂಗಳಿಂದ ಮಗಳು ಅಳಿಯನೊಂದಿಗೆ ಇಲ್ಲಿಯೇ ವಾಸವಾಗಿದ್ದರು. ಸುಡುಗಾಡುಸಿದ್ದರ ವೇಷ ಹಾಕಿದಿನದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಶುಕ್ರವಾರ(ಆ.9) ರಾತ್ರಿಯೂ ಸಹ ಗಂಜಿ ಸೇವಿಸಿದ್ದರು. ಬೆಳಿಗ್ಗೆ ನೋಡಿದಾಗ ಶವವಾಗಿ ಕಂಡು ಬಂದರು.

ಗಂಜಿ ಕೇಂದ್ರಕ್ಕೆ ಬರಲು ನಿರಾಕರಿಸಿದ ಅವರು ಗುಡಿಸಲಿನಲ್ಲಿಯೇ ಉಳಿದಿದ್ದರು. ಅವರನ್ನು ನೋಡಿಕೊಳ್ಳಲೆಂದು ಮಗಳು ದುರ್ಗಮ್ಮ ಫಕ್ಕೀರಪ್ಪ ಬಾದಗಿ ಹಾಗೂ ಅಳಿಯ ಫಕ್ಕೀರಪ್ಪ ಬಾದಗಿ ಇದ್ದರು. ಅಲ್ಲಿ ನೀರು ತುಂಬಿತ್ತು. ಅಲ್ಲದೇ, ಕೊರೆಯುವಚಳಿಯಲ್ಲೇ ಮಲಗಿದ್ದರು.

ಮಳೆಯಿಂದ ಎಷ್ಟು ನಷ್ಟ
2,822:ಮನೆಗಳ ಹಾನಿ
₹ 2.71 ಕೋಟಿ:ಮನೆ ನಷ್ಟದ ಅಂದಾಜು
7,261 ಎಕರೆ:ಬೆಳೆ ನಷ್ಟ
₹ 2.73 ಕೋಟಿ:ರಸ್ತೆ ಹಾನಿ ಅಂದಾಜು
701:ಮುಳುಗಿದ ವಿದ್ಯುತ್ ಕಂಬಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT