ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಕಾಂತ್‌ ವಿರುದ್ಧ ಸುಳ್ಳು ಮಾಹಿತಿ: ಸಿಎಂ ಜನರ ಕ್ಷಮೆ ಕೇಳಲಿ– ಈಶ್ವರಪ್ಪ

Published 5 ಜನವರಿ 2024, 14:02 IST
Last Updated 5 ಜನವರಿ 2024, 14:02 IST
ಅಕ್ಷರ ಗಾತ್ರ

ಹಾವೇರಿ: ‘ಶ್ರೀಕಾಂತ ಪೂಜಾರಿ ವಿರುದ್ಧ 16 ಪ್ರಕರಣಗಳಿವೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು. 

ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ‘ಶ್ರೀಕಾಂತ ವಿರುದ್ಧ 16 ಪ್ರಕರಣಗಳು ಇರಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ಮತ್ತು ಜಾಮೀನು ಕೂಡಾ ಕೊಟ್ಟಿದೆ. 1992ರ ರಾಮಮಂದಿರ ಪ್ರಕರಣ ಮಾತ್ರ ಆತನ ಮೇಲಿದೆ. ‘ಶ್ರೀಕಾಂತ್‌ ವಿರುದ್ಧ ಯಾವುದೇ ವ್ಯಕ್ತಿ ದೂರು ನೀಡಿಲ್ಲ, ಎಫ್‌.ಐ.ಆರ್‌ ಪ್ರತಿಯೂ ಇಲ್ಲ. ಹೀಗಾಗಿ ಆತನನ್ನು ಬಂಧಿಸಿದ್ದೇ ಮಹಾಪರಾಧ’ ಎಂದು ಕಿಡಿಕಾರಿದರು. 

‘ಸಿಎಂ ಮತ್ತು ಗೃಹಸಚಿವರು ಭಂಡತನದಿಂದ ಕೊಟ್ಟ ಕೇಸಿದು. ಈ ತೀರ್ಪಿನಿಂದ ನ್ಯಾಯಾಲಯದ ಮೇಲಿನ ಗೌರವ ಹೆಚ್ಚಾಗಿದೆ. ರಾಜ್ಯದ ಇತಿಹಾಸದಲ್ಲೇ ಸಿಎಂ ಮತ್ತು ಗೃಹ ಸಚಿವರು ಕೋರ್ಟ್‌ಗೆ ಸುಳ್ಳು ಮಾಹಿತಿ ಕೊಟ್ಟಿರಲಿಲ್ಲ’ ಎಂದು ಕುಟುಕಿದರು. 

ರಾಮ ಬೇಕು, ವಾಲ್ಮೀಕಿ ಬೇಡವಾ? ಎಂಬ ಕಾಂಗ್ರೆಸ್ ಟೀಕೆಗೆ, ‘ಕಾಂಗ್ರೆಸ್‌ನವರಿಗೆ ವಾಲ್ಮೀಕಿ ಈಗ ನೆನಪಾಗಿದ್ದಾರೆ. ರಾಮಮಂದಿರ ಎಂದರೆ ಕಾಂಗ್ರೆಸ್‌ನವರಿಗೆ ಮುಳ್ಳು ಚುಚ್ಚಿದಂತಾಗುತ್ತದೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ವಾಲ್ಮೀಕಿ ಹೆಸರನ್ನು ಇಟ್ಟು ಗೌರವ ನೀಡಿದೆ’ ಎಂದು ಹೇಳಿದರು. 

‘ಶ್ರೀಕಾಂತ್‌ ಋಣದಲ್ಲಿ ಸಿಎಂ ಆದ ಶೆಟ್ಟರ್‌’‌

‘ಶ್ರೀಕಾಂತ ಪೂಜಾರಿ ಹೋರಾಟದ ಋಣದಲ್ಲೇ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿ ಆದವರಲ್ವಾ? ಅವರು ಸಿಎಂ ಆದ ವೇಳೆ ಶ್ರೀಕಾಂತ್‌ ಮೇಲಿನ ಪ್ರಕರಣ ವಾಪಸ್‌ ಪಡೆದು ಋಣ ತೀರಿಸಬಹುದಿತ್ತು. ಏಕೆ ಕೇಸ್‌ ವಾಪಸ್‌ ಪಡೆಯಲಿಲ್ಲ’ ಎಂದು ಶೆಟ್ಟರ್‌ ವಿರುದ್ಧ ಈಶ್ವರಪ್ಪ ಕಿಡಿಕಾರಿದರು. 

‘ಭಾರತ ಹಿಂದೂ ರಾಷ್ಟ್ರ ಆದರೆ ದೇಶಕ್ಕೆ ಕಂಟಕ’ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನರೇಂದ್ರ ಮೋದಿಯಂಥವರು ಪಾಕಿಸ್ತಾನದ ಪ್ರಧಾನಿಯಾಗಲಿ ಎಂದು ಆ ದೇಶದ ಜನರೇ ಅಪೇಕ್ಷಿಸುತ್ತಿದ್ದಾರೆ. ಯತೀಂದ್ರ ಅವರಿಗೆ ಪಾಕಿಸ್ತಾನದವರ ಮೇಲೆ ಪ್ರೀತಿ ಜಾಸ್ತಿ ಇರಬೇಕು. ಅಪ್ಪ ಮತ್ತು ಮಗ ಇಬ್ಬರೂ ಮತಾಂತರ ಆಗಿ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT