ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿಕೆಯ ಕಾಲು ಭಾಗದಷ್ಟೂ ಮಳೆಯಿಲ್ಲ!

ಅಲ್ಲಲ್ಲಿ ಕೃಷಿ ಚಟುವಟಿಕೆ, ಎಲ್ಲ ಕಡೆ ಮಳೆಗಾಗಿ ಚಡಪಡಿಕೆ
Last Updated 28 ಜೂನ್ 2019, 20:00 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯ ಕಾಲು ಭಾಗದಷ್ಟೂ ಮಳೆಯಾಗಿಲ್ಲ. ನಾಲ್ಕೈದು ದಿನಗಳಿಂದ ತುಂತುರು ಶುರುವಾಗಿದ್ದು ಕೆಲವೆಡೆ ರೈತರು ಬಿತ್ತನೆ ಶುರು ಮಾಡಿದ್ದಾರೆ. ಆದರೆ, ಇನ್ನೂ ಕೆಲವು ಗ್ರಾಮಗಳ ರೈತರು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

2019ರ ವಾರ್ಷಿಕ ವಾಡಿಕೆ ಮಳೆ 779.6ಮಿ.ಮೀ ಇದೆ. ಆದರೆ, ಜನವರಿಯಿಂದ ಇಲ್ಲಿಯವರೆಗೆ ಕೇವಲ 101 ಮಿ.ಮೀ ಮಳೆಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ 94.90 ಮಿ.ಮೀ ಮಳೆಯಾಗಿ, ಜಿಲ್ಲೆಯ ಎಲ್ಲ ಕಡೆಯೂ ಕೃಷಿ ಚಟುವಟಿಕೆ ನಡೆದಿದ್ದವು.ಆದರೆ, ಈ ಬಾರಿ ಜೂನ್ ಮುಗಿಯಲು ಎರಡು ದಿನ ಬಾಕಿ ಇದ್ದರೂ ಮಳೆ ಪ್ರಮಾಣ 47.51 ಮಿ.ಮೀನಲ್ಲೇ ಇದೆ.

ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ ಒಟ್ಟು 3,32,826 ಹೆಕ್ಟೇರ್ಪ್ರದೇಶವನ್ನು ಬಿತ್ತನೆಗೆ ಗುರಿ ಹಾಕಿಕೊಂಡಿದೆ. ಈವರೆಗೆ 18,135 ಹೆಕ್ಟೆರ್‌ ಪ್ರದೇಶದಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು ಬಿತ್ತನೆ ಹಾಗೂ ವಾಣಿಜ್ಯ ಬೆಳೆಯನ್ನು ಹಾಕಲಾಗಿದೆ.

ಹೈಬ್ರಿಡ್‌ ಜೋಳ, ಹೈಬ್ರಿಡ ಗೋವಿನ ಜೋಳ, ಭತ್ತ, ತೊಗರಿ, ಹೆಸರು, ಸೋಯಾಅವರೆ, ಶೇಂಗಾ, ಅಲಸಂಧಿ, ಸೂರ್ಯಕಾಂತಿ, ನವಣೆಯ 33,925 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆ ಇದೆ. ಆದರೆ, 18,096 ಕ್ವಿಂಟಲ್‌ ಸರಬರಾಜಾಗಿದ್ದು, 7,537 ಕ್ವಿಂಟಲ್‌ ಬೀಜಗಳನ್ನು ಮಾತ್ರ ರೈತರಿಗೆ ವಿತರಣೆ ಮಾಡಲಾಗಿದೆ.

‘ರೈತರಿಗೆ ಪೂರೈಸಲು ಅಗತ್ಯವಿರುವಷ್ಟು ಗೊಬ್ಬರವನ್ನು ಈಗಾಗಲೇ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ.ಒಟ್ಟು 46,335 ಟನ್‌ ಗೊಬ್ಬರ ಸಂಗ್ರಹಣೆ ಇದ್ದು, ಈವರೆಗೆ 6,813 ಟನ್‌ ವಿತರಣೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಕೊಪ್ಪದ ತಿಳಿಸಿದರು.

‘ಬೇಸಿಗೆಯಲ್ಲಿ ಜನ–ಜಾನುವರುಗಳಿಗೆ ಕುಡಿಯುವುದಕ್ಕೂ ನೀರಿರಲಿಲ್ಲ. ಈಗ ಮಳೆಗಾಲ ಆರಂಭವಾದರೂ ಬವಣೆ ತಪ್ಪಿಲ್ಲ. ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟಿದ್ದರಿಂದ, ಜನ ಮತ್ತೆ ಕಂಗಾಲಾಗಿದ್ದಾರೆ. ಈ ಹೊತ್ತಿಗಾಗಲೇ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರಬೇಕಿತ್ತು’ ಎಂದು ರೈತ ಮಲ್ಲಿಕಾರ್ಜುನ ಹೇಳಿದರು.

*
ಹಾನಗಲ್‌, ಶಿಗ್ಗಾವಿ ಭಾಗದಲ್ಲಿ ಅಲ್ಪ ಪ್ರಮಾಣಲ್ಲಿ ಮಳೆಯಾಗಿದ್ದು ಬಿತ್ತನೆ ಆರಂಭಿಸಿದ್ದಾರೆ. ಇಲಾಖೆ ಎಲ್ಲ ರೀತಿಯಿಂದ ಕೃಷಿ ಚಟುವಟಿಕೆಗೆ ಸನ್ನದ್ಧವಾಗಿದೆ.
–ಬಿ.ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕರು

*
ತಡವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಈಗ ಬೀಜ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆ ಬಳಿಕ ಮಳೆ ಕೊರತೆಯಾಗದಂತೆ ಸರ್ಕಾರ ಮೋಡ ಬಿತ್ತನೆ ಕಾರ್ಯ ಆರಂಭಿಸಬೇಕು.
–ವೀರಭದ್ರಪ್ಪ ಗುಡಗೇರಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT