ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ದರ ಕುಸಿತ: ಬ್ಯಾಡಗಿ ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ರೈತರು!

Published 11 ಮಾರ್ಚ್ 2024, 14:25 IST
Last Updated 11 ಮಾರ್ಚ್ 2024, 14:25 IST
ಅಕ್ಷರ ಗಾತ್ರ

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ದರ ಕುಸಿತವಾದ ಹಿನ್ನೆಲೆಯಲ್ಲಿ ಸೋಮವಾರ ರೈತರು ಬ್ಯಾಡಗಿ ಪಟ್ಟಣದ ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ಎಪಿಎಂಸಿ ಕಚೇರಿಯತ್ತ ಕಲ್ಲು ತೂರಿದ ಪರಿಣಾಮ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾದವು. ನಂತರ ಕಚೇರಿಯ ಮುಂಭಾಗ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿಗೆ ಕಲ್ಲು ತೂರಿ ಗಾಜುಗಳನ್ನು ಪುಡಿಗಟ್ಟಿ, ಬೆಂಕಿ ಇಟ್ಟರು. ನಂತರ ಆವರಣದಲ್ಲಿ ನಿಂತಿದ್ದ ಜೀಪು, ಕಾರು, ಸ್ವಚ್ಛತಾ ವಾಹನಗಳಿಗೆ ಬೆಂಕಿ ಹಚ್ಚಿ ಕಿಡಿಕಾರಿದರು. ಆವರಣದಲ್ಲಿ ನಿಂತಿದ್ದ ಬೈಕ್‌ಗಳು ಸಹ ಬೆಂಕಿಯ ಕೆನ್ನಾಲಿಗೆಗೆ ತುತ್ತಾದವು. 

ಅಗ್ನಿಶಾಮಕ ವಾಹನಕ್ಕೂ ಬೆಂಕಿ

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧಪ್ರದೇಶ, ತೆಲಂಗಾಣ ರಾಜ್ಯಗಳಿಂದ ಬ್ಯಾಡಗಿ ಎಂಪಿಎಂಸಿ ಮಾರುಕಟ್ಟೆಗೆ ರೈತರು ಸೋಮವಾರ ಮೆಣಸಿನಕಾಯಿ ತಂದಿದ್ದರು. ಬ್ಯಾಡಗಿ ಮೆಣಸಿನಕಾಯಿ ಸರಾಸರಿ ದರದಲ್ಲಿ ಕ್ವಿಂಟಲ್‌ಗೆ ₹3 ಸಾವಿರದಿಂದ ₹5 ಸಾವಿರದವರೆಗೆ ದರ ಕುಸಿತವಾಗಿದೆ ಎಂದು ಆಕ್ರೋಶಗೊಂಡ ರೈತರು ಬ್ಯಾಡಗಿ ಎಂಪಿಎಂಸಿ ಕಚೇರಿಯತ್ತ ನುಗ್ಗಿ ದಾಂಧಲೆ ನಡೆಸಿದರು.

 ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಬೆನ್ನತ್ತಿ ಓಡಿಸಿಕೊಂಡು ಹೋಗಿ, ಹಲ್ಲೆ ನಡೆಸಿದರು. ನಂತರ ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ವಾಹನಕ್ಕೂ ಬೆಂಕಿ ಹಚ್ಚಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. 

ಬಿಗುವಿನ ವಾತಾವರಣ

ಬ್ಯಾಡಗಿ ಎಪಿಎಂಸಿ ಕಚೇರಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಗಾಢವಾದ ಹೊಗೆ ಆವರಿಸಿದ್ದು, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರ ಸಂಖ್ಯೆಗಿಂತ ಪೊಲೀಸ್‌ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದ ಕಾರಣ ಪರಿಸ್ಥಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. 

ಎಸ್ಪಿ ಅಂಶುಕುಮಾರ್‌ ನೇತೃತ್ವದಲ್ಲಿ ಪೊಲೀಸ್ ತುಕಡಿಗಳು ಬ್ಯಾಡಗಿ ಪಟ್ಟಣಕ್ಕೆ ಧಾವಿಸಿ, ಪರಿಸ್ಥಿತಿಯನ್ನು ಸದ್ಯ ನಿಯಂತ್ರಣಕ್ಕೆ ತಂದಿದ್ದಾರೆ. ವಿದ್ಯುತ್‌ ಹೋದ ಪರಿಣಾಮ ಎಪಿಎಂಸಿ ಮಾರುಕಟ್ಟೆ ಕತ್ತಲಲ್ಲಿ ಮುಳುಗಿದೆ. ಎಪಿಎಂಸಿ ಕಚೇರಿ ಮುಂಭಾಗ ರೈತರ ಪ್ರತಿಭಟನೆ ಮುಂದುವರಿದಿದೆ. ಸದ್ಯದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

‘ಕಳೆದ ವಾರಕ್ಕಿಂತ ಈ ಬಾರಿ ಅರ್ಧದಷ್ಟು ದರ ಕುಸಿತ’
‘ಹಗಲು–ರಾತ್ರಿ ಕಷ್ಟಪಟ್ಟು ಮೆಣಸಿನಕಾಯಿ ಬೆಳೆದ ನಾವು 300–400 ಕಿ.ಮೀ. ದೂರದಿಂದ ವಾಹನಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ಕೊಟ್ಟು, ಬ್ಯಾಡಗಿ ಎಪಿಎಂಸಿಗೆ ಮೆಣಸಿನಕಾಯಿ ತಂದಿದ್ದೆವು. ಇಲ್ಲಿ ಉತ್ತಮ ದರ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ನಾವು ತಂದ ಒಣ ಮೆಣಸಿನಕಾಯಿಗೆ ಕಳೆದ ವಾರಕ್ಕಿಂತ ಈ ಬಾರಿ ಅರ್ಧದಷ್ಟು ದರ ಕುಸಿತವಾಗಿದೆ’ ಎಂದು ಆಂಧ್ರ, ತೆಲಂಗಾಣ, ಷಹಾಪುರ, ಬಳ್ಳಾರಿ ಕಡೆಯಿಂದ ಬಂದಿದ್ದ ರೈತರು ದೂರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT