ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲವಿಜ್ಞಾನಿಗಳಿಂದ ರೈತಸ್ನೇಹಿ ತಂತ್ರಜ್ಞಾನ

542 ವೈವಿಧ್ಯಮಯ ಮಾದರಿಗಳ ಪ್ರದರ್ಶನ: ಕೃಷಿ ಪ್ರಗತಿಗೆ ವಿಜ್ಞಾನದ ಬೆಸುಗೆ
Last Updated 1 ಫೆಬ್ರುವರಿ 2020, 10:09 IST
ಅಕ್ಷರ ಗಾತ್ರ

ಹಾವೇರಿ: ದೇಶದ ಬೆನ್ನೆಲುಬಾಗಿರುವ ಅನ್ನದಾತರ ಕಾರ್ಯಗಳನ್ನು ಸರಳಗೊಳಿಸುವ ಮತ್ತು ಕೃಷಿ ಕೆಲಸವನ್ನು ಉತ್ತೇಜಿಸುವ ದೃಷ್ಟಿಯಿಂದ ರೈತಸ್ನೇಹಿ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ ಏಲಕ್ಕಿ ನಾಡಿನ ಬಾಲವಿಜ್ಞಾನಿಗಳು.

ಜಿಲ್ಲಾ ಪಂಚಾಯಿತಿ ಮತ್ತು ಡಯಟ್‌ ಸಹಯೋಗದಲ್ಲಿ ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್- ಮಾನಕ ಕಾರ್ಯಕ್ರಮ’ದಲ್ಲಿ ಪ್ರದರ್ಶನಗೊಂಡ ಬರೋಬ್ಬರಿ 542 ವೈವಿಧ್ಯಮಯ ಮಾದರಿಗಳು ಮಕ್ಕಳ ಜ್ಞಾನ, ಕೌಶಲ ಮತ್ತು ಕನಸುಗಳಿಗೆ ಕನ್ನಡಿ ಹಿಡಿದವು.

ಪ್ರದರ್ಶನಕ್ಕೆ ಬಂದಿದ್ದ ಬಹುತೇಕ ಮಕ್ಕಳು ಗ್ರಾಮೀಣ ಹಿನ್ನೆಲೆಯವರಾಗಿದ್ದರು.ಕೃಷಿ ಕ್ಷೇತ್ರದ ಸಮಸ್ಯೆ ಮತ್ತು ಅನ್ನದಾತರ ಬವಣೆಗಳನ್ನು ಹತ್ತಿರದಿಂದಲೇ ನೋಡಿದ್ದ ಈ ಮಕ್ಕಳು, ಸಹಜವಾಗಿಯೇ ರೈತಸ್ನೇಹಿ ತಂತ್ರಜ್ಞಾನ ಆವಿಷ್ಕರಿಸಿ ನಿರ್ಣಾಯಕರಿಂದಲೂ ಸೈ ಎನಿಸಿಕೊಂಡರು.

ಬೆಳೆ ರಕ್ಷಿಸುವ ಸೆನ್ಸಾರ್‌ ಬೇಲಿ

ಹಗಲೆಲ್ಲ ಹೊಲ–ಗದ್ದೆಗಳಲ್ಲಿ ದುಡಿದ ರೈತ ದಣಿದು ಮನೆ ಸೇರುತ್ತಾನೆ. ಆದರೆ, ರಾತ್ರಿ ವೇಳೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುವ ಚಿಂತೆ ಅವನ ನಿದ್ದೆ ಕಸಿಯುತ್ತಿತ್ತು. ಇದನ್ನು ಅರ್ಥಮಾಡಿಕೊಂಡ ಸವಣೂರು ತಾಲ್ಲೂಕಿನ ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸುಧಾ ಮೆಣಸಿನಕಾಯಿ ‘ಸೆನ್ಸಾರ್‌ ಬೇಲಿ’ ಮಾದರಿಯನ್ನು ಆವಿಷ್ಕರಿಸಿದ್ದಾರೆ.

‘ರಾತ್ರಿ ವೇಳೆ ಯಾವುದಾದರೂ ಕಾಡುಪ್ರಾಣಿ ಬೇಲಿ ದಾಟಿ ಬಂದರೆ, ಸೆನ್ಸಾರ್ ಜಾಗೃತಗೊಂಡು, ಬೆಳಕು ಮತ್ತು ದೊಡ್ಡ ಶಬ್ದ ಮೊಳಗುತ್ತದೆ. ಇದಕ್ಕೆ ಬೆದರಿ ಕಾಡುಪ್ರಾಣಿಗಳು ಓಡಿ ಹೋಗುತ್ತವೆ. ಬೆಳೆ ರಕ್ಷಣೆ ಜತೆಗೆ ಹೊಲದಲ್ಲಿ ಕಟ್ಟಿರುವ ಜಾನುವಾರುಗಳ ರಕ್ಷಣೆಯೂ ಆಗುತ್ತದೆ’ ಎಂದು ಸುಧಾ ವಿವರಿಸಿದರು.

ಸ್ವಯಂಚಾಲಿತ ನೀರಿನ ವ್ಯವಸ್ಥೆ

ದನ ಕರುಗಳು ಬೇಸಿಗೆಯಲ್ಲಿ ಬಾಯಾರಿಕೆಯಿಂದ ಬಳಲುತ್ತವೆ. ಕಾಲ ಕಾಲಕ್ಕೆ ನೀರು ಇಡುವುದನ್ನು ಮರೆತರೆ, ಸರಿಯಾಗಿ ಮೇವು ತಿನ್ನದೆ ಹಸುಗಳು ಹಾಲು ಕೊಡುವುದಿಲ್ಲ. ಇದರಿಂದ ರೈತನಿಗೆ ನಷ್ಟ ಕಟ್ಟಿಟ್ಟಬುತ್ತಿ. ಇದನ್ನು ಮನವರಿಕೆ ಮಾಡಿಕೊಂಡ ಸಂಗೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅನುಷಾ ದೊಡ್ಡಮನಿ ‘ದನದ ಕೊಟ್ಟಿಗೆಯಲ್ಲಿ ಸ್ವಯಂಚಾಲಿತ ಕುಡಿಯುವ ನೀರಿನ ವ್ಯವಸ್ಥೆ’ ವಿಧಾನವನ್ನು ಆವಿಷ್ಕಾರ ಮಾಡಿದ್ದಾರೆ.

‘15 ಲೀಟರ್‌ ಸಾಮರ್ಥ್ಯದ ವಾಟರ್‌ ಟ್ಯಾಂಕ್‌, 10 ಲೀಟರ್‌ ಸಾಮರ್ಥ್ಯದ ಬಕೆಟ್‌, ಪಿವಿವಿ ಪೈಪ್‌ ಮತ್ತು ವಾಟರ್‌ ಟ್ಯಾಂಕ್‌ ಬಾಲ್‌ ಬಳಸಿಕೊಂಡು ಈ ಮಾದರಿ ತಯಾರಿಸಿದ್ದೇನೆ. ಟ್ಯಾಂಕ್‌ನಿಂದ ಬಕೆಟ್‌ಗೆ ನೀರು ಬರುತ್ತದೆ. ಅಲ್ಲಿರುವ ವಾಟರ್‌ ಬಾಲ್‌ ನೀರಿನ ಮಟ್ಟದ ಸಮತೋಲನ ಕಾಪಾಡುತ್ತದೆ. ಬಕೆಟ್‌ನಿಂದ ಹೊರಬರುವ ನೀರು ಕೊಟ್ಟಿಗೆಯಲ್ಲಿರುವ ಬಾನಿಗಳಿಗೆ ತುಂಬಿಕೊಳ್ಳುತ್ತದೆ. ದನಕರು ಕುಡಿದ ತಕ್ಷಣ ಮತ್ತೆ ನೀರು ಅದೇ ಪ್ರಮಾಣದಲ್ಲಿ ತುಂಬಿಕೊಳ್ಳುತ್ತದೆ’ ಎಂದು ಅನುಷಾ ಮಾಹಿತಿ ನೀಡಿದರು.

ಇಷ್ಟೇ ಅಲ್ಲದೆ, ರೈತರೇ ಸರಳವಾಗಿ ಕಾರ್ಬೈಡ್‌ ಕಲ್ಲುಗಳಿಂದ ಗ್ಯಾಸ್‌ ವೆಲ್ಡಿಂಗ್‌ ಮಾಡಬಹುದಾದ ವಿಧಾನ, ವಿದ್ಯುತ್‌ ಕಳ್ಳತನದಿಂದ ರೈತರು ಪಾರಾಗುವ ಬಗೆ, ಮನೆಯ ಕಸವನ್ನು ‘ಪೈಪ್‌ ಕಾಂಪೋಸ್ಟ್‌’ ವಿಧಾನದ ಮೂಲಕ ಜೈವಿಕ ಗೊಬ್ಬರವನ್ನಾಗಿಸುವ ಪ್ರಕ್ರಿಯೆ, ಕೃಷಿಯಲ್ಲಿ ಸೌರಶಕ್ತಿ ಬಳಕೆ ಸೇರಿದಂತೆ ಹಲವಾರು ಮಾದರಿಗಳು ರೈತರ ಮೆಚ್ಚುಗೆಗೆ ಪಾತ್ರವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT