ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೋವಿಡ್‌ ವಾರ್ಡ್‌ನಲ್ಲೇ ‘ಫ್ರೆಂಡ್‌ಶಿಪ್‌ ಡೇ’

Last Updated 2 ಆಗಸ್ಟ್ 2020, 13:27 IST
ಅಕ್ಷರ ಗಾತ್ರ

ಹಾವೇರಿ: ‘ನನ್ನ ಪತಿಗೆ ಕೋವಿಡ್‌ ಬಂದಿತು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ನನಗೆ ಮತ್ತು ನನ್ನ ಮೂವರು ಸ್ನೇಹಿತೆಯರಿಗೂ ಸೋಂಕು ತಗುಲಿ ವರದಿ ಪಾಸಿಟಿವ್‌ ಬಂದಿತು. ನಂತರ ಎಲ್ಲರೂ ಒಟ್ಟಿಗೆ ಆಸ್ಪತ್ರೆಗೆ ಹೋಗಿ, ಗುಣಮುಖರಾಗಿ ಒಟ್ಟಿಗೇ ಆಸ್ಪತ್ರೆಯಿಂದ ಹೊರಬಂದೆವು’ ಎನ್ನುತ್ತಾರೆ ಕೋವಿಡ್ ಗೆದ್ದುಬಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಲ್ಯಾಬ್‌ ಟೆಕ್ನೀಶಿಯನ್‌ ಪದ್ಮಶ್ರೀ ಪೂಜಾರ.

ಜುಲೈ 18ರಂದು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡೆ. ಅಂದೇ ನನ್ನ ಮೂವರು ಸ್ನೇಹಿತೆಯರೂ (ಆಯುಷ್‌ ವೈದ್ಯೆ, ನೇತ್ರತಜ್ಞೆ ಮತ್ತು ಲ್ಯಾಬ್ ಟೆಕ್ನೀಶಿಯನ್‌) ತಪಾಸಣೆ ಮಾಡಿಸಿಕೊಂಡರು. ಕೋವಿಡ್‌ ಆಸ್ಪತ್ರೆಯಲ್ಲೇ ‘ಫ್ರೆಂಡ್‌ಶಿಪ್‌ ಡೇ’ ಆಚರಿಸೋಣ ಎಂದು ಖುಷಿಯಿಂದಲೇ ಎಲ್ಲರೂ ಆಸ್ಪತ್ರೆ ಸೇರಿದೆವು.

ವೈದ್ಯಕೀಯ ಸಿಬ್ಬಂದಿ ಎಲ್ಲರೂ ಪರಿಚಿತರೇ ಇದ್ದ ಕಾರಣ ‘ಕೋವಿಡ್‌ ವಾರ್ಡ್’‌ ನಮ್ಮ ಮನೆಯಲ್ಲಿದ್ದೇವೆ ಎಂಬ ಭಾವನೆ ಮೂಡಿಸಿತು. ಎಲ್ಲರೂ ಪರಸ್ಪರ ಮಾತನಾಡುತ್ತಾ, ಖುಷಿಯ ಕ್ಷಣಗಳನ್ನು ಅನುಭವಿಸುತ್ತಾ ಕಾಲ ಕಳೆದವು. ಪೌಷ್ಟಿಕ ಆಹಾರ ಮತ್ತು ಉತ್ತಮ ಚಿಕಿತ್ಸೆಯಿಂದ ವಾರದಲ್ಲೇ ಗುಣಮುಖರಾದೆವು. ನಾವು ಡಿಸ್ಚಾರ್ಜ್‌ ಆಗುವಾಗ ಅಲ್ಲಿದ್ದ ಸಿಬ್ಬಂದಿ ಇನ್ನಷ್ಟು ದಿನ ಇದ್ದು ಹೋಗಿ ಎಂದು ತಮಾಷೆ ಮಾಡಿದರು.

ಕೋವಿಡ್‌ ಆರಂಭವಾದ ದಿನದಿಂದ ವಾರದ ರಜೆ ತೆಗೆದುಕೊಳ್ಳದೆ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ರಕ್ತ ಪರೀಕ್ಷೆ, ಪ್ಲಾಸ್ಮಾ ಪ್ರತ್ಯೇಕಿಸುವುದು, ರಕ್ತದಾನಿಗಳಿಂದ ರಕ್ತ ಸಂಗ್ರಹಣೆ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವುದರಿಂದ ಮಗಳು ಸುರಕ್ಷಿತವಾಗಿರಲಿ ಎಂದು ಬಳ್ಳಾರಿಯ ಅಮ್ಮನ ಮನೆಯಲ್ಲಿ ಬಿಟ್ಟಿದ್ದೆ. 10 ದಿನಗಳ ಹಿಂದೆ, ನಮ್ಮ ಹಿರಿಯ ಸಹೋದ್ಯೋಗಿಗಳೇ ರಜೆ ಹಾಕಿಸಿ, ಮಗಳನ್ನು ನೋಡಿಕೊಂಡು ಬನ್ನಿ ಎಂದು ಕಳುಹಿಸಿಕೊಟ್ಟಿದ್ದರು.

‘ನಮ್ಮ ಮನೆಗೆ ಕೊರೊನಾ ಬಂದು ಹೋಗಿದೆ. ಆದ್ದರಿಂದ ಈಗ ಅಮ್ಮನ ಬಳಿ ಹೋಗುತ್ತೇನೆ’ ಎಂದು ಮಗಳು ಈಗ ಹಟ ಮಾಡುತ್ತಿದ್ದಾಳೆ. ನಮ್ಮ ಮನೆಯ ಮಾಲೀಕರು ನಮಗೆ ಪಾಸಿಟಿವ್‌ ಬಂದಾಗ ಆತಂಕಗೊಂಡಿದ್ದರು. ಕೋವಿಡ್‌ ವಾರ್ಡ್‌ನಲ್ಲಿದ್ದಾಗಲೇ ವಿಡಿಯೊ ಕಾಲ್‌ ಮಾಡಿ ಧೈರ್ಯ ಹೇಳಿದ್ದೆ. ಇತರ ಸೋಂಕಿತರಿಗೂ ಸಮಾಧಾನ ಹೇಳಿದ್ದೆ. ಕೊರೊನಾ ಬಗ್ಗೆ ತಪ್ಪು ಕಲ್ಪನೆ ಬೇಡ. ಮುನ್ನೆಚ್ಚರಿಕಾ ಕ್ರಮ ಅನುಸರಿಸುವ ಮೂಲಕ ಸುರಕ್ಷಿತವಾಗಿರಿ ಎನ್ನುತ್ತಾರೆ ಪದ್ಮಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT