ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಕೆಳಸೇತುವೆ ಸೇರುತ್ತಿರುವ ತ್ಯಾಜ್ಯ: ಜನರ ಗೋಳು

ನಾಗೇಂದ್ರನಮಟ್ಟಿಯ ಹಲವು ವರ್ಷಗಳ ಸಮಸ್ಯೆಗಿಲ್ಲ ಪರಿಹಾರ
Published 9 ಜುಲೈ 2024, 15:36 IST
Last Updated 9 ಜುಲೈ 2024, 15:36 IST
ಅಕ್ಷರ ಗಾತ್ರ

ಹಾವೇರಿ: ನಗರದ ಚರಂಡಿ ಹಾಗೂ ಕಾಲುವೆಗಳ ಮೂಲಕ ಸಾಗುವ ತ್ಯಾಜ್ಯ, ನಾಗೇಂದ್ರನಮಟ್ಟಿಯ ಕೆಳಸೇತುವೆಯಲ್ಲಿ ಸೇರುತ್ತಿದೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಗರದ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ನಾಗೇಂದ್ರನಮಟ್ಟಿಗೆ ಸಂಪರ್ಕ ಕಲ್ಪಿಸಲು ಸಿಂದಗಿ ಮಠದ ಬಳಿ ರೈಲ್ವೆ ಹಳಿಗೆ ಕೆಳ ಸೇತುವೆ ನಿರ್ಮಿಸಲಾಗಿದೆ. ಇದೇ ಪ್ರದೇಶದಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯವೆಲ್ಲವೂ ಜಮೆ ಆಗುತ್ತಿದ್ದು, ಅದೆಲ್ಲವೂ ಕೆಳ ಸೇತುವೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.

ಮಳೆಗಾಲದಲ್ಲಂತೂ ಕೆಳ ಸೇತುವೆ ಸಮಸ್ಯೆ ಹೆಚ್ಚಾಗಿದೆ. ಮಳೆ ಬಂದ ಸಂದರ್ಭದಲ್ಲಿ ನೀರಿನ ಜೊತೆಯಲ್ಲಿ ಪ್ಲಾಸ್ಟಿಕ್, ಹಾಳಾದ ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ತ್ಯಾಜ್ಯ ಬರುತ್ತಿದೆ. ಇದೆಲ್ಲವೂ ಕೆಳ ಸೇತುವೆಯ ಕಾಲುವೆ ಮೂಲಕ ಹರಿದು ಹೋಗುತ್ತಿದೆ. ಕೆಳ ಸೇತುವೆ ಬಳಿ ಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದಿದ್ದರಿಂದ, ತ್ಯಾಜ್ಯವೆಲ್ಲವೂ ಸುಲಭವಾಗಿ ಕೆಳಸೇತುವೆಗೆ ನುಗ್ಗುತ್ತಿದೆ. ಇದರ ಜೊತೆಯಲ್ಲಿ ಹಾವು, ಚೇಳುಗಳೂ ಸೇರಿಕೊಳ್ಳುತ್ತಿವೆ.

ಕೆಳ ಸೇತುವೆಗೆ ಹೊಂದಿಕೊಂಡು ಕೆರೆ ಇದ್ದು, ಹೂಳು ತುಂಬಿಕೊಂಡು ಹಲವು ವರ್ಷವೇ ಆಗಿದೆ. ಈ ಪ್ರದೇಶ, ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ರೋಗಗಳಿವೆ ಆಹ್ವಾನ ನೀಡುವಂತಿದೆ.

ನಾಗೇಂದ್ರನಮಟ್ಟಿಯ ಶಾಲೆ ಮಕ್ಕಳು, ಉದ್ಯೋಗಿಗಳು, ಕೂಲಿ ಕೆಲಸಗಾರರು ಇದೇ ಕೆಳಸೇತುವೆ ಮೂಲಕ ನಿತ್ಯವೂ ನಗರಕ್ಕೆ ಬಂದು ಹೋಗುತ್ತಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಕೆಳ ಸೇತುವೆ ದಾಟುತ್ತಿದ್ದಾರೆ. ಇತ್ತೀಚೆಗೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ, ಕೆಳ ಸೇತುವೆಯಲ್ಲಿ ತ್ಯಾಜ್ಯವೇ ಹೆಚ್ಚಿದ್ದುದ್ದು ಕಂಡುಬಂತು.

‘ಕೆಳ ಸೇತುವೆ ನಿರ್ವಹಣೆ ಸರಿಯಿಲ್ಲ. ಇದು ಹಲವು ವರ್ಷಗಳ ಸಮಸ್ಯೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ನಾಗೇಂದ್ರನಮಟ್ಟಿಯ ರಜಾಕ ಅಹ್ಮದ್ ಹೇಳಿದರು.

ಸ್ಥಳೀಯ ನಿವಾಸಿ ಲಕ್ಷ್ಮಣ, ‘ಬಡವರು ವಾಸಿಸುವ ಸ್ಥಳವಿದೆ. ಕೆಳ ಸೇತುವೆ ದಾಟಲು ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ತ್ಯಾಜ್ಯದ ಜೊತೆಯಲ್ಲಿಯೇ ವಿಷಕಾರಿ ಕ್ರಿಮಿ–ಕೀಟಗಳು ಓಡಾಡುತ್ತಿವೆ. ಇದರಿಂದ ಮಕ್ಕಳ ಜೀವಕ್ಕೂ ಅಪಾಯ ಉಂಟಾಗುವ ಭಯವಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT