ಹಾವೇರಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಸೂಕ್ತ ಸಮಯದಲ್ಲಿ ಬೆಂಕಿ ನಂದಿಸಲು ಸಾಧ್ಯವಾಗದೇ ಜನರ ವಸ್ತುಗಳು ಸುಟ್ಟು ಕರಕಲಾಗುತ್ತಿವೆ. ಜೀವನಕ್ಕೆ ಆಧಾರವಾದ ಕೃಷಿ ಬೆಳೆಗಳು ಕಣ್ಣೆದುರೇ ಭಸ್ಮವಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗುತ್ತಿದ್ದಾರೆ. ಜಲವಾಹನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಜಿಲ್ಲೆಯಲ್ಲಿ ಬೆಂಕಿ ನಂದಿಸಲು ನಾನಾ ಕಷ್ಟಗಳು ಎದುರಾಗುತ್ತಿವೆ. ಇದರ ಪರಿಣಾಮವಾಗಿ ಜನರು ಹಾಗೂ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾಗಿರುವ ಹಾವೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೃಷಿ, ಮಾರುಕಟ್ಟೆ, ಉದ್ಯಾನ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಇಂದಿಗೂ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಅದರಲ್ಲೂ, ಬೆಂಕಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಅದನ್ನು ನಂದಿಸಲು ಜನರು ಪಡುತ್ತಿರುವ ಪಾಡು ಹೇಳತೀರದ್ದಾಗಿದೆ.

ಜಿಲ್ಲೆಯಲ್ಲಿರುವ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಕೊರತೆಗಳ ಪಟ್ಟಿ ದೊಡ್ಡದಿದೆ. ನೀರು ಹಾಕಿ ಬೆಂಕಿ ನಂದಿಸುವ ಜಲ ವಾಹನಗಳ ಕೊರತೆ, ರಕ್ಷಣಾ ವಾಹನಗಳ ಕೊರತೆ, ಸಿಬ್ಬಂದಿ ಕೊರತೆ, ಅಗ್ನಿಶಾಮಕ ಠಾಣೆಗಳ ಕೊರತೆ... ಹೀಗೆ ಹಲವು ಕೊರತೆಗಳು ಜಿಲ್ಲೆಯ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಬೆಂಕಿ ತಗುಲಿದ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಜಲ ವಾಹನಗಳು ಸ್ಥಳಕ್ಕೆ ಹೋಗದಿದ್ದರಿಂದ ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ.

ಜಿಲ್ಲೆಯ ಹಾವೇರಿ, ಹಾನಗಲ್, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಜಲವಾಹನಗಳನ್ನು ನೀಡಲಾಗಿದೆ. ಹಿರೇಕೆರೂರು ತಾಲ್ಲೂಕಿನಿಂದ ವಿಭಜನೆಗೊಂಡು ಹೊಸ ತಾಲ್ಲೂಕು ಆಗಿರುವ ರಟ್ಟೀಹಳ್ಳಿಯಲ್ಲಿ ಒಂದೂ ವಾಹನ ಲಭ್ಯವಿಲ್ಲ.

ಇಡೀ ಜಿಲ್ಲೆಯಲ್ಲಿ ಏಳು ಜಲ ವಾಹನಗಳು ಮಾತ್ರ ಲಭ್ಯವಿವೆ. ಒಂದೇ ಸಮಯದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಕಡೆ ಬೆಂಕಿ ಅವಘಡಗಳು ಸಂಭವಿಸಿದರೆ, ಜಲ ವಾಹನ ಎಲ್ಲಿಗೆ ಕೊಂಡೊಯ್ಯಬೇಕೆಂಬ ಗೊಂದಲ ಸಿಬ್ಬಂದಿಯನ್ನು ಕಾಡುತ್ತಿದೆ. ಒಂದು ಕಡೆ ಹೋದರೆ, ಇನ್ನೊಂದು ಹಾಗೂ ಮತ್ತೊಂದು ಕಡೆ ನಷ್ಟ ಉಂಟಾಗುತ್ತಿರುವುದು ಸಾಮಾನ್ಯವಾಗಿದೆ. ತಾಲ್ಲೂಕಿಗೊಂದು ಜಲ ವಾಹನ ಇರುವುದರಿಂದ, ತುರ್ತು ಸಂದರ್ಭದ ಸೇವೆಯಲ್ಲಿ ಸಾಕಷ್ಟು ಲೋಪಗಳು ಉಂಟಾಗುತ್ತಿವೆ.

ಜಿಲ್ಲಾ ಕೇಂದ್ರವಾದ ಹಾವೇರಿಗೆ ಒಂದೇ ಜಲ ವಾಹನ ನೀಡಲಾಗಿದೆ. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಇದೊಂದೇ ಜಲವಾಹನ ಆಸರೆಯಾಗಿದೆ. ನಗರ ಹಾಗೂ ಗ್ರಾಮಗಳಲ್ಲಿ ಒಂದೇ ಬಾರಿ ಬೆಂಕಿ ಅವಘಡ ಸಂಭವಿಸಿದರೆ, ಒಂದು ಕಡೆ ಮಾತ್ರ ವಾಹನ ತೆರಳುತ್ತಿದೆ. ಅಲ್ಲಿ ಬೆಂಕಿ ನಂದಿಸಿ, ಮತ್ತೊಂದು ಕಡೆ ಹೋಗುವಷ್ಟರಲ್ಲಿ ಎಲ್ಲವೂ ಸುಟ್ಟು ಭಸ್ಮವಾಗುತ್ತಿದೆ.

ಮಳೆಗಾಲ ಹಾಗೂ ಚಳಿಗಾಲ ಮುಕ್ತಾಯಗೊಂಡು ಬೇಸಿಗೆ ಆರಂಭವಾಗುವ ಕಾಲ ಸನಿಹದಲ್ಲಿದೆ. ಬೇಸಿಗೆ ಸಂದರ್ಭದಲ್ಲಿ ಬೆಂಕಿ ಅವಘಡಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂಥ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿ ಜಲವಾಹನಗಳ ಅಗತ್ಯವಿದ್ದು, ಈ ಬಗ್ಗೆ ಜಿಲ್ಲೆಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ವ್ಯಾಪಾರ ಸ್ಥಳ, ಸಾರ್ವಜನಿಕ ಸ್ಥಳ, ಮನೆ, ಅಂಗಡಿ, ಗೋದಾಮು, ಅರಣ್ಯ ಪ್ರದೇಶ, ಕೃಷಿ ಬೆಳೆಗಳಿಗೆ ಬೆಂಕಿ ತಗುಲುವ ಸಂಭವ ಹೆಚ್ಚಿರುತ್ತದೆ. ಪ್ರಾಣ ಹಾನಿಯೂ ಉಂಟಾಗಬಹುದು. ಇಂಥ ಬೆಂಕಿ ಅವಘಡಗಳು ಉಂಟಾಗುವ ಸಂದರ್ಭದಲ್ಲಿ, ಅದನ್ನು ತಡೆಯಲು ಸುಸಜ್ಜಿತ ಸೌಲಭ್ಯಗಳ ಅಗತ್ಯವಿದೆ. ಆದರೆ, ಜಿಲ್ಲೆಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಸೌಲಭ್ಯಗಳ ಕೊರತೆ ಹೆಚ್ಚಿರುವುದರಿಂದ ಬೆಂಕಿ ನಂದಿಸುವುದು ದೊಡ್ಡ ಸವಾಲಾಗಿದೆ.

43 ಎಕರೆ ಕೃಷಿ ಬೆಳೆ ಹಾನಿ:

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿಯ ಚಾಕಾಪುರದಲ್ಲಿ ಇತ್ತೀಚೆಗೆ 28 ಎಕರೆ ಗೋವಿನ ಜೋಳ ಹಾಗೂ 15 ಎಕರೆ ಸೋಯಾಬಿನ್ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಕ್ರಮೇಣ ಹೆಚ್ಚಾಗಿ ಇಡೀ ಬೆಳೆಯನ್ನು ಸುಟ್ಟು ಹಾಕಿದೆ.

ಹೊಲದಲ್ಲಿ ಬೆಂಕಿ ಹರಡುತ್ತಿದ್ದ ಸಂದರ್ಭದಲ್ಲಿಯೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ವಾಹನ ಹೋಗುವುದು ತಡವಾಗಿದ್ದರಿಂದ, ಹೊಲದಲ್ಲಿದ್ದ ಎಲ್ಲ ಬೆಳೆಯೂ ಸುಟ್ಟು ಹೋಯಿತೆಂದು ಸ್ಥಳೀಯರು ದೂರುತ್ತಿದ್ದಾರೆ. ಈ ಒಂದು ಘಟನೆ ಉದಾಹರಣೆ ಮಾತ್ರ. ಇಂಥ ಹಲವು ಘಟನೆಗಳು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಆಗುತ್ತಿದ್ದು, ಅದಕ್ಕೆ ಪರಿಹಾರ ಮಾತ್ರ ಸಿಗುತ್ತಿಲ್ಲ.

‘ಅಗ್ನಿಶಾಮಕ ದಳದಲ್ಲಿ ಸಿಬ್ಬಂದಿ ಕೊರತೆಯಿದ್ದರೂ, ಲಭ್ಯವಿರುವ ಸಿಬ್ಬಂದಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಜಲವಾಹನಗಳ ಕೊರತೆಗೆ ಅವರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಜಮೀನಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು. ವಾಹನ ಬೇರೆ ಕರೆ ಇರುವುದರಿಂದ, ತಡವಾಗಿ ಬರುವುದಾಗಿ ಸಿಬ್ಬಂದಿ ಹೇಳಿದ್ದರು. ಅವರು ಬರುವಷ್ಟರಲ್ಲಿ ಬೆಳೆ ಸಂಪೂರ್ಣ ಸುಟ್ಟು ಹೋಯಿತು’ ಎಂದು ಶಿಗ್ಗಾವಿ ತಾಲ್ಲೂಕಿನ ರೈತರೊಬ್ಬರು ಹೇಳಿದರು.

‘ಬರುವ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಬಿಸಿಲು ಹೆಚ್ಚಾದಾಗ, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭಗಳನ್ನು ಎದುರಿಸಲು ಅಗ್ನಿಶಾಮಕ ದಳಕ್ಕೆ ರಾಜ್ಯ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.

ಕನಿಷ್ಠ ಜ್ಞಾನವಿಲ್ಲದ ಜನಪ್ರತಿನಿಧಿಗಳು–ಅಧಿಕಾರಿಗಳು:

ಜಿಲ್ಲೆಯಲ್ಲಿರುವ ತಾಲ್ಲೂಕಿಗೊಂಡು ಜಲ ವಾಹನ ನೀಡಲಾಗಿದ್ದು, ಅವುಗಳಿಗೆ ವ್ಯಾಪ್ತಿಯನ್ನೂ ನಿಗದಿಪಡಿಸಲಾಗಿದೆ. ತನ್ನದೇ ತಾಲ್ಲೂಕಿನಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದ್ದು, ತೀರಾ ಅನಿವಾರ್ಯ ಸಂದರ್ಭದಲ್ಲಿ ಅಕ್ಕ–ಪಕ್ಕದ ತಾಲ್ಲೂಕಿನಲ್ಲಿ ಸೇವೆ ಒದಗಿಸಲಾಗುತ್ತಿದೆ.

ಆದರೆ, ಒಂದು ತಾಲ್ಲೂಕಿಗೆ ಒಂದು ವಾಹನ ನೀಡಿರುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿರುವುದಾಗಿ ಜನರು ದೂರುತ್ತಿದ್ದಾರೆ. ಬೆಂಕಿ ನಂದಿಸಲು ಯಾವೆಲ್ಲ ವ್ಯವಸ್ಥೆ ಇರಬೇಕು ? ಜಲ ವಾಹನಗಳು ಎಷ್ಟು ಬೇಕು ? ಎಂಬ ಕನಿಷ್ಠ ಜ್ಞಾನವೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ಜನರ ಆಕ್ರೊಶಕ್ಕೆ ಕಾರಣವಾಗಿದೆ.

‘ಹಾವೇರಿ ಜಿಲ್ಲಾ ಕೇಂದ್ರಕ್ಕೆ ಒಂದೇ ಜಲ ವಾಹನವಿದೆ. ಹಾವೇರಿ ನಗರ ಹಾಗೂ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೂ ಇದೇ ಮೀಸಲು. ತಾಲ್ಲೂಕಿನ ಗಡಿ ಭಾಗ ದೊಡ್ಡದಾಗಿದ್ದು, ಎಲ್ಲ ಕಡೆಯೂ ಓಡಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ತಾಲ್ಲೂಕಿನ ಸಂಗೂರಿನಲ್ಲಿ ಬೆಂಕಿ ಅವಘಡ ಸಂಭವಿಸಿದರೆ, ಅಲ್ಲಿಗೆ ಜಲವಾಹನ ಹೋಗುತ್ತದೆ. ಅದೇ ಸಮಯದಲ್ಲಿ ಅಗಡಿ, ಕರ್ಜಗಿ ಹಾಗೂ ಸುತ್ತಮುತ್ತ ಅವಘಡ ಸಂಭವಿಸಿದರೆ ಯಾವ ವಾಹನ ಕಳುಹಿಸುತ್ತಾರೆ ? ಸಂಗೂರಿನಲ್ಲಿ ಬೆಂಕಿ ಆರಿಸಿ ಅಗಡಿ–ಕರ್ಜಗಿ ಹೋಗುವಷ್ಟರಲ್ಲಿ ಎಲ್ಲವೂ ಸುಟ್ಟು ಹೋಗಿರುತ್ತದೆ’ ಎಂದು ರೈತ ಬಾಳಣ್ಣ ಗುರುಲಿಂಗಣ್ಣನವರ ಅಳಲು ತೋಡಿಕೊಂಡರು.

‘ಹಾವೇರಿ ತಾಲ್ಲೂಕು ಮಾತ್ರವಲ್ಲದೇ, ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಇದೇ ಪರಿಸ್ಥಿತಿಯಿದೆ. ಹೆಚ್ಚುವರಿ ವಾಹನಗಳನ್ನು ಸೇವೆಗೆ ನೀಡದಿದ್ದರೆ, ಜಿಲ್ಲೆಯ ಜನರು ನಿರಂತರವಾಗಿ ನಷ್ಟ ಅನುಭವಿಸಲಿದ್ದಾರೆ’ ಎಂದು ಅವರು ಹೇಳಿದರು.

ರೈತರ ಸಭೆಯಲ್ಲಿ ಪ್ರಸ್ತಾಪ:

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಇತ್ತೀಚೆಗೆ ರೈತರ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿಯೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ ರೈತ ಸಂಘದ ಮುಖಂಡರು, ರೈತರು ಅನುಭವಿಸುತ್ತಿದ್ದ ಕಷ್ಟಗಳನ್ನು ತೆರೆದಿಟ್ಟಿದ್ದರು.

‘ತಾಲ್ಲೂಕಿಗೊಂದು ಜಲವಾಹನ ನೀಡಿರುವುದರಿಂದ, ಗ್ರಾಮಗಳಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಎಲ್ಲ ಕಡೆಯೂ ವಾಹನ ಲಭ್ಯವಾಗುತ್ತಿಲ್ಲ. ಹೆಚ್ಚುವರಿ ವಾಹನಗಳನ್ನು ತರಿಸಬೇಕು. ಜಿಲ್ಲೆಯ ಪ್ರತಿ ಹೋಬಳಿಗೊಂದು ವಾಹನ ನಿಲ್ಲಿಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ, ‘ಲಭ್ಯವಿರುವ ವಾಹನಗಳನ್ನು ದಿನಾಂಕವಾರು ವೇಳಾಪಟ್ಟಿ ಪ್ರಕಾರ ಹೋಬಳಿಗಳಲ್ಲಿ ನಿಲುಗಡೆ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ತಾತ್ಕಾಲಿಕ ಕ್ರಮವಾಗಿ ತಾಲ್ಲೂಕಿನ ವಾಹನಗಳನ್ನೇ ಕೆಲ ಹೋಬಳಿಗಳಲ್ಲಿ ವೇಳಾಪಟ್ಟಿ ಪ್ರಕಾರ ನಿಲುಗಡೆ ಮಾಡಲಾಗುತ್ತಿದೆ. ಆದರೆ, ಹೋಬಳಿಯಲ್ಲಿ ವಾಹನಗಳು ನಿಂತ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಏನಾದರೂ ಅವಘಡಗಳಾದರೆ ಏನು ಮಾಡುವುದೆಂಬ ಚಿಂತೆ ಸಿಬ್ಬಂದಿಯನ್ನು ಕಾಡುತ್ತಿದೆ.

ಅರಣ್ಯ ಪ್ರದೇಶದಲ್ಲೂ ಆತಂಕ

ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಅರಣ್ಯ ಪ್ರದೇಶವಿದ್ದು ಮೇಲಿಂದ ಮೇಲೆ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಇತ್ತೀಚೆಗೆ ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಬಳಿಯ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕರೆ ಮಾಡಿದ ಸಾಕಷ್ಟು ಸಮಯದ ನಂತರ ವಾಹನ ಸ್ಥಳಕ್ಕೆ ಹೋಗಿತ್ತು. ಆದರೆ ಒಂದೇ ವಾಹನ ಇದ್ದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಒಂದೇ ವಾಹನವಿದ್ದರೂ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ನೀರು ಖಾಲಿಯಾದಾಗ ತುಂಬಿಕೊಂಡು ಬರಲು ಕಿ.ಮೀ.ಗಟ್ಟಲೇ ದೂರದ ಸ್ಥಳಕ್ಕೆ ಹೋಗಿ ಬಂದಿದ್ದರಿಂದ ಅಲ್ಲಿಯೇ ಸಮಯ ವ್ಯರ್ಥವಾಯಿತು. ಬೇಸಿಗೆ ಹತ್ತಿರವಾಗುತ್ತಿದ್ದು ಇಂಥ ಸಂದರ್ಭದಲ್ಲಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಅರಣ್ಯ ಪ್ರದೇಶ ಕಾಪಾಡಲು ಹೆಚ್ಚುವರಿ ಜಲವಾಹನಗಳ ಅಗತ್ಯವಿರುವುದಾಗಿ ಜನರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಾವೇರಿ ಡಿಸಿಎಫ್ ಅಬ್ದುಲ್ ಅಜೀಜ್ ‘ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೆ ನಮ್ಮ ಇಲಾಖೆಯ ಸಿಬ್ಬಂದಿಯೇ ನಂದಿಸುತ್ತಾರೆ. ಬೆಂಕಿ ಪ್ರಮಾಣ ಹೆಚ್ಚಿದ್ದರೆ ಮಾತ್ರ ಅಗ್ನಿಶಾಮಕ ದಳದ ಸಿಬ್ಬಂದಿ ಬರುತ್ತಾರೆ. ಜಿಲ್ಲೆಯಲ್ಲಿ ವಾಹನಗಳ ಕೊರತೆ ಇರುವ ಮಾಹಿತಿ ಇದೆ. ಹೆಚ್ಚುವರಿ ವಾಹನಗಳನ್ನು ಒದಗಿಸುವ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.

ಎರಡು ತಿಂಗಳಿನಲ್ಲಿ 292 ಅವಘಡ

ಹಾವೇರಿ ಜಿಲ್ಲೆಯಲ್ಲಿ 2025ರ ಜನವರಿ 1ರಿಂದ ಫೆ. 28ರವರೆಗೆ 292 ಕಡೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿವೆ. ಶಿಗ್ಗಾವಿಯಲ್ಲಿ ಮೂವರು ಹಾಗೂ ರಾಣೆಬೆನ್ನೂರಿನಲ್ಲಿ ಒಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಬಂದ 292 ಕರೆಗಳಿಗೆ ಸ್ಪಂದಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಲಭ್ಯವಿದ್ದ 7 ವಾಹನಗಳಲ್ಲಿಯೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಆದರೆ ವಾಹನಗಳ ಕೊರತೆಯಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ.

ಜಲ ವಾಹನಗಳ ಕೊರತೆ ಸೇರಿ ಹಲವು ಸಮಸ್ಯೆಗಳ ಇತ್ಯರ್ಥಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ.
ವಿನಾಯಕ, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ

ಜಿಲ್ಲೆಗೆ ಹೆಚ್ಚುವರಿ ಜಲವಾಹನಗಳನ್ನು ನೀಡುವಂತೆ ಸಿ.ಎಂ ಹಾಗೂ ಗೃಹಸಚಿವರನ್ನು ಕೋರಿದ್ದೇನೆ. ಉಳಿದ ಸಮಸ್ಯೆಗಳನ್ನೂ ಪರಿಹರಿಸುವಂತೆ ವಿನಂತಿಸಿದ್ದೇನೆ.
ರುದ್ರಪ್ಪ ಲಮಾಣಿ, ಹಾವೇರಿ ಶಾಸಕ

ಸೂಕ್ತ ಸಮಯಕ್ಕೆ ಜಲವಾಹನ ಬರದಿದ್ದರಿಂದ ರೈತರ ಬೆಳೆ ನಾಶವಾಗುತ್ತಿದೆ. ಹೋಬಳಿಗೊಂದು ಅಗ್ನಿಶಾಮಕ ವಾಹನ ನೀಡಬೇಕು.
ಹನುಮಂತಪ್ಪ ಹುಚ್ಚಣ್ಣನವರ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.