ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ವೈದ್ಯಕೀಯ ಕಾಲೇಜು: ಸೆಪ್ಟೆಂಬರ್‌ನಿಂದ ಹೊಸ ಕಟ್ಟಡದಲ್ಲೇ ತರಗತಿ

ಆಗಸ್ಟ್‌ 15ರೊಳಗೆ ಅಗತ್ಯದಷ್ಟು ಕೊಠಡಿ ಲಭ್ಯವಾಗುವ ವಿಶ್ವಾಸ
Published 16 ಜುಲೈ 2023, 5:03 IST
Last Updated 16 ಜುಲೈ 2023, 5:03 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ಹಾವೇರಿ ಮೆಡಿಕಲ್‌ ಕಾಲೇಜಿನ ತರಗತಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ನಗರದ ಹೊರವಲಯದ ದೇವಗಿರಿ–ಯಲ್ಲಾಪುರ ಸಮೀಪ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. 

ಕಾಲೇಜು ಆರಂಭಿಸಲು ಅಗತ್ಯವಿರುವ 2 ತರಗತಿ ಕೊಠಡಿಗಳು, 3 ಪ್ರಯೋಗಾಲಯಗಳು, 2 ಗ್ರಂಥಾಲಯ ಕೊಠಡಿ ಹಾಗೂ 150 ವಿದ್ಯಾರ್ಥಿಗಳಿಗೆ ಅವಶ್ಯವಿರುವ ಹಾಸ್ಟೆಲ್‌ ಕೊಠಡಿಗಳ ನಿರ್ಮಾಣವನ್ನು ಆಗಸ್ಟ್‌ 15ರೊಳಗೆ ಪೂರ್ಣಗೊಳಿಸಲು ಕಾಮಗಾರಿ ಭರದಿಂದ ಸಾಗಿದೆ. ಸೆಪ್ಟೆಂಬರ್‌ ತಿಂಗಳಿಂದ ಎಂಬಿಬಿಎಸ್‌ ಕೋರ್ಸ್‌ನ ಮೊದಲ ಮತ್ತು ಎರಡನೇ ವರ್ಷದ ತರಗತಿಗಳು ಆರಂಭವಾಗುವ ನಿರೀಕ್ಷೆಯಿದೆ. 

ಹಾವೇರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ (ಹಿಮ್ಸ್‌) 2020ರ ಜನವರಿಯಲ್ಲಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತು. 2020ರ ನವೆಂಬರ್‌ನಿಂದ 2022ರ ನವೆಂಬರ್‌ನೊಳಗೆ, ಅಂದರೆ 24 ತಿಂಗಳೊಳಗೆ ಕಟ್ಟಡ ನಿರ್ಮಿಸಲು ಬೆಂಗಳೂರಿನ ಕೆ.ಬಿ.ಆರ್‌. ಇನ್‌ಫ್ರಾಟೆಕ್‌ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು.

ಕಾಮಗಾರಿ ವಿಳಂಬ: ನಿಗದಿತ ಅವಧಿ ಮುಗಿದು 8 ತಿಂಗಳಾಗಿದ್ದು, ಪ್ರಸ್ತುತ ಶೇ 78ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ಅಕ್ಟೋಬರ್‌ ಅಂತ್ಯದೊಳಗೆ ಮುಗಿಯುವ ನಿರೀಕ್ಷೆಯಿದೆ. ಕೋವಿಡ್‌–19, ಮಳೆ ಮತ್ತು ಇತರ ಕಾರಣಗಳಿಂದ ಕಾಮಗಾರಿಯನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಗುತ್ತಿಗೆದಾರರು.

ದೇವಗಿರಿ–ಯಲ್ಲಾಪುರ ಸಮೀಪದ ಸರ್ವೆ ನಂ.13 ಮತ್ತು 19ರ 63 ಎಕರೆ ಜಾಗದಲ್ಲಿ ಕಟ್ಟಡ ಮತ್ತು ರಸ್ತೆ ನಿರ್ಮಾಣಗೊಳ್ಳುತ್ತಿದೆ. ₹478 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಸಿವಿಲ್‌ ಕಾಮಗಾರಿಗೆ ₹365 ಕೋಟಿಯನ್ನು ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ₹195 ಕೋಟಿ, ರಾಜ್ಯ ಸರ್ಕಾರ ₹170 ಕೋಟಿ ಅನುದಾನವನ್ನು ನೀಡಿದೆ. 

150 ವಿದ್ಯಾರ್ಥಿಗಳಿಗೆ ಪ್ರವೇಶಾತಿ: 2022ರ ಅಕ್ಟೋಬರ್‌ನಿಂದ ಪ್ರಥಮ ವರ್ಷದ 150 ಎಂಬಿಬಿಎಸ್‌ ವಿದ್ಯಾರ್ಥಿಗಳು ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಬ್ಯಾಚ್‌ನ 150 ವಿದ್ಯಾರ್ಥಿಗಳು ಆಗಸ್ಟ್‌ನಲ್ಲಿ ಕೌನ್ಸೆಲಿಂಗ್ ಮುಗಿಸಿಕೊಂಡು ಪ್ರವೇಶಾತಿ ಪಡೆಯಲಿದ್ದಾರೆ. 300 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೊಠಡಿ ಮತ್ತು ಇತರ ಸೌಕರ್ಯಗಳನ್ನು ಕಲ್ಪಿಸಲು ‘ಹಿಮ್ಸ್‌’ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. 

‘ರಸ್ತೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಾಂಪೌಂಡ್‌, ಗಾರ್ಡನ್‌ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಹೊಂಗೆ, ನೇರಳೆ, ಬೇವು, ತೇಗ ಸೇರಿದಂತೆ 2800 ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ’ ಎಂದು ಕೆಬಿಆರ್ ಇನ್‌ಫ್ರಾಟೆಕ್‌ ಸಂಸ್ಥೆಯ ಯೋಜನಾ ಮುಖ್ಯಸ್ಥ ಕಿರಣ್‌ಕುಮಾರ್‌ ಮಾಹಿತಿ ನೀಡಿದರು. 

ಜಿಲ್ಲೆಯ ಐವರು ಕಾಂಗ್ರೆಸ್‌ ಶಾಸಕರು ಈಚೆಗೆ ಸಭೆ ನಡೆಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ತಾಕೀತು ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್‌.ವಿಶಾಲ್‌ ಮತ್ತು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಈಚೆಗೆ ಕಟ್ಟಡ ಕಾಮಗಾರಿ ಪರಿಶೀಲಿಸಿ, ಅಗತ್ಯ ಸಲಹೆ–ಸೂಚನೆಗಳನ್ನು ನೀಡಿದ್ದಾರೆ. 

ತರಗತಿ ಆರಂಭಿಸಲು ಅಗತ್ಯವಿರುವಷ್ಟು ಕೊಠಡಿಗಳ ನಿರ್ಮಾಣ ಆಗಸ್ಟ್‌ 15ರೊಳಗೆ ಪೂರ್ಣಗೊಳ್ಳಲಿದ್ದು ಸೆಪ್ಟೆಂಬರ್‌ನಿಂದ ನೂತನ ಕಟ್ಟಡದಲ್ಲಿ ತರಗತಿಗಳು ನಡೆಯಲಿವೆ
– ಡಾ.ಉದಯ ಮುಳಗುಂದ ಡೀನ್‌ ಹಿಮ್ಸ್‌

4 ಅಂತಸ್ತುಗಳ ಭವ್ಯ ಕಟ್ಟಡ

ಹಾವೇರಿ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡವು ನೆಲಮಹಡಿ ಮತ್ತು 3 ಮೇಲ್ಮಹಡಿಗಳನ್ನು ಒಳಗೊಂಡಿದೆ. 374 ಬಾಲಕರಿಗೆ 187 ಕೊಠಡಿ ಹಾಗೂ 374 ಬಾಲಕಿಯರಿಗೆ 187 ಕೊಠಡಿಗಳ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬೋಧಕರಿಗೆ 32 ವಸತಿ ಗೃಹಗಳು ಬೋಧಕೇತರ ಸಿಬ್ಬಂದಿಗೆ 48 ವಸತಿ ಗೃಹಗಳು ನರ್ಸ್‌ಗಳಿಗೆ 72 ವಸತಿ ಗೃಹಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಜತೆಗೆ ಡೀನ್‌ ವಸತಿ ಗೃಹ ಪ್ರಾಂಶುಪಾಲರ ವಸತಿ ಗೃಹ ಹಾಗೂ ಆಡಳಿತ ಕಚೇರಿ ನಿರ್ಮಾಣವಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT