ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗಳ ಖರ್ಚು– ವೆಚ್ಚಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು, ಅದೇ ಮಾಹಿತಿಯನ್ನು ಸದ್ಯದಲ್ಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಲು ತಯಾರಿ ನಡೆಸಿದ್ದಾರೆ.

ನೂತನ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಅವರು ಚುನಾವಣೆ ಆರಂಭದಿಂದ ಅಂತ್ಯದವರೆಗೆ ₹ 32.69 ಲಕ್ಷ ಖರ್ಚು ಮಾಡಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ₹ 18.38 ಲಕ್ಷ ವೆಚ್ಚ ಮಾಡಿದ್ದಾರೆ.

ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ 30 ದಿನದೊಳಗೆ ಖರ್ಚು–ವೆಚ್ಚಗಳ ಬಗ್ಗೆ ಲೆಕ್ಕ ನೀಡಲು ಅಭ್ಯರ್ಥಿಗಳಿಗೆ ಗಡುವು ನೀಡಲಾಗಿತ್ತು. ನಿಗದಿತ ದಿನದೊಳಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಅಭ್ಯರ್ಥಿಗಳು ತಮ್ಮ ಲೆಕ್ಕ ಪತ್ರಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಅಭ್ಯರ್ಥಿಗಳ ಲೆಕ್ಕ ಪತ್ರಗಳನ್ನು ಸಂಗ್ರಹಿಸಿದ್ದ ಚುನಾವಣೆ ವೆಚ್ಚ ನಿಗಾ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ ಅವರು ಲೆಕ್ಕದ ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ಇದೇ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವೀಕ್ಷಕರ ಅಧ್ಯಕ್ಷತೆಯಲ್ಲಿ ಸಭೆ: ಅಭ್ಯರ್ಥಿಗಳ ಖರ್ಚು–ವೆಚ್ಚದ ದಾಖಲೆಗಳ ಅಂತಿಮ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಭೆ ಜರುಗಿತು.

ಕೇಂದ್ರ ಚುನಾವಣಾ ಆಯೋಗದ ಚುನಾವಣಾ ವೆಚ್ಚ ವೀಕ್ಷಕರೂ ಆಗಿರುವ ಐಆರ್ಎಸ್ ಅಧಿಕಾರಿ ಡಿ.ಎಂ. ನಿಂಜೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಜರಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಅವರ ಏಜೆಂಟರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ನೋಡಲ್ ಅಧಿಕಾರಿ ವಸಂತಕುಮಾರ ನೇತೃತ್ವದ ತಂಡ, ಚುನಾವಣೆ ಸಂದರ್ಭದಲ್ಲಿ ಕಾಲ ಕಾಲಕ್ಕೆ ಅಭ್ಯರ್ಥಿಗಳ ಖರ್ಚು–ವೆಚ್ಚಗಳ ಲೆಕ್ಕದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಹಾಗೂ ಏಜೆಂಟರ ಬಳಿಯೂ ಪ್ರತ್ಯೇಕವಾಗಿ ದಾಖಲೆಗಳಿದ್ದವು.

ಎರಡೂ ಕಡೆಯ ದಾಖಲೆಗಳನ್ನು ಹೋಲಿಕೆ ಮಾಡಿ ಪರಿಶೀಲನೆ ನಡೆಸಲಾಯಿತು. ಕೆಲ ಅಭ್ಯರ್ಥಿಗಳ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇಂಥ ಅಭ್ಯರ್ಥಿಗಳು, ಅಧಿಕಾರಿಗಳ ಲೆಕ್ಕವನ್ನು ಒಪ್ಪಿಕೊಂಡು ಆಯೋಗಕ್ಕೆ ಸಲ್ಲಿಸಲು ಸಮ್ಮತಿ ಸೂಚಿಸಿದರು.

‘ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ ಎಣಿಕೆ ದಿನದಿಂದ 30 ದಿನದೊಳಗಾಗಿ ಅಭ್ಯರ್ಥಿಗಳು ಚುನಾವಣಾ ವೆಚ್ಚದ ದಾಖಲೆಗಳನ್ನು ಸಲ್ಲಿಸಬೇಕು. ನಿಗದಿತ ಸಮಯದೊಳಗೆ ಎಲ್ಲ ಅಭ್ಯರ್ಥಿಗಳು ವೆಚ್ಚದ ಮಾಹಿತಿ ಸಲ್ಲಿಸಿದ್ದಾರೆ. ವೆಚ್ಚ ಪರಿಶೀಲನೆ ಕಾರ್ಯ ನಡೆಸಲಾಗಿದ್ದು, ಸದ್ಯದಲ್ಲೇ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಪಠಾಣ ಈಗಾಗಲೇ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಅವರು ಪರಾಭವಗೊಂಡಿದ್ದರು.

‘ಪ್ರತಿಯೊಂದರ ಲೆಕ್ಕ ಸಂಗ್ರಹ’

‘ಅಭ್ಯರ್ಥಿಗಳ ಓಡಾಟ ಕರಪತ್ರಗಳ ಮುದ್ರಣ ಕಾರ್ಯಕ್ರಮ – ಸಮಾವೇಶಗಳ ಆಯೋಜನೆ ಹಾಗೂ ಇತರೆ ಎಲ್ಲ ಖರ್ಚುಗಳ ಲೆಕ್ಕವನ್ನು ಪಡೆದುಕೊಂಡು ವರದಿ ಸಿದ್ಧಪಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ‘ಚುನಾವಣೆ ಪ್ರಚಾರಕ್ಕೆ ಹಾಗೂ ಇತರರ ಓಡಾಟಕ್ಕೆ ಅನುಮತಿ ಪಡೆದಿದ್ದ ವಾಹನಗಳ ವೆಚ್ಚದ ದಾಖಲೆ ಪಡೆಯಲಾಗಿದೆ. ಚುನಾವಣೆ ಪರಿಕರಗಳ ಬಳಕೆ ಬಗ್ಗೆಯೂ ಲೆಕ್ಕ ಸಂಗ್ರಹಿಸಲಾಗಿದೆ’ ಎಂದರು.

ಕೆಆರ್ಎಸ್ ಪಕ್ಷಕ್ಕೆ ಎರಡನೇ ಸ್ಥಾನ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದಿಂದ ರವಿಕೃಷ್ಣಾ ರೆಡ್ಡಿ ಅವರು ಅಭ್ಯರ್ಥಿಯಾಗಿದ್ದರು. ಇವರು ತಮ್ಮ ಚುನಾವಣೆಗೆಂದು ₹ 23.17 ಲಕ್ಷ ಖರ್ಚು ಮಾಡಿದ್ದಾರೆ. ‘ಕೆಆರ್ಎಸ್ ಪಕ್ಷದವರು ಹೆಚ್ಚು ವಾಹನಗಳನ್ನು ಬಳಸಿದ್ದಾರೆ. ಜೊತೆಗೆ ಇತರೆ ರೀತಿಯಲ್ಲೂ ಖರ್ಚು ಮಾಡಿದ್ದಾರೆ. ನಮ್ಮ ಬಳಿಯ ದಾಖಲೆ ಪ್ರಕಾರ ಇವರ ಖರ್ಚು ₹ 23.17 ಲಕ್ಷ ಆಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ತಾವು ಸುಮಾರು ₹ 8 ಲಕ್ಷ ಮಾತ್ರ ಖರ್ಚು ಮಾಡಿದ್ದಾಗಿ ಕೆಆರ್ಎಸ್ ಪಕ್ಷದವರು ವಾದಿಸಿದ್ದರು. ಆದರೆ ದಾಖಲೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು. ನಮ್ಮ ಬಳಿಯ ಲೆಕ್ಕವನ್ನು ಅವರಿಗೆ ತೋರಿಸಲಾಯಿತು. ಅಂತಿಮವಾಗಿ ಅವರು ನಮ್ಮ ಲೆಕ್ಕವನ್ನೇ ಒಪ್ಪಿಕೊಂಡರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.