ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಕೃಷಿಯಲ್ಲಿ ಖುಷಿ ಕಂಡ ಮೇಷ್ಟ್ರು

ನಾಗೇಂದ್ರಯ್ಯ ಹಿರೇಮಠರಿಗೆ ಧಾರವಾಡದ ಕೃಷಿ ವಿವಿಯಿಂದ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ಯ ಗೌರವ
Last Updated 30 ಜೂನ್ 2022, 19:30 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ನಿವೃತ್ತ ಪ್ರೌಢಶಾಲಾ ಸಹ ಶಿಕ್ಷಕ ನಾಗೇಂದ್ರಯ್ಯ ಅಜ್ಜಯ್ಯ ಹಿರೇಮಠ ತಮ್ಮ 70ರ ಹರೆಯದಲ್ಲಿಯೂ ಕೃಷಿಯಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇವರ ಸಾಧನೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ 2016–17ರಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಹರಿಹರದ ಎಂಆರ್‌ಬಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಳಿಕ ಗ್ರಾಮದಲ್ಲಿ ವಾಸವಾಗಿದ್ದು ತಮ್ಮ 4 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಸಾಂಪ್ರದಾಯಿಕ ಕೃಷಿಗೆ ಆದ್ಯತೆ ನೀಡಿದ್ದಾರೆ.

ಎರೆಹುಳು ಗೊಬ್ಬರ, ಕೂಲಿ ಕಾರ್ಮಿಕ ರಹಿತ ಬೇಸಾಯಕ್ಕೆ ಒತ್ತು ನೀಡಿದ್ದಾರೆ. ಕಳೆದ ವರ್ಷ ಒಂದೂವರೆ ಎಕರೆ ಜಮೀನಿನಲ್ಲಿ ದೇಸಿ ಭತ್ತದ ತಳಿಗಳಾದ ಬರ್ಮಾಬ್ಲ್ಯಾಕ್‌, ಸಿದ್ರಾಸನ್‌, ರಾಜಮುಡಿ, ದೊಡ್ಡ ಬೀರುನೆಲ್ಲಿ ಬೆಳೆದಿದ್ದಾರೆ. ಈ ಪೈಕಿ ರಾಜಮುಡಿ ಕೆಂಪು ಅಕ್ಕಿಯಾಗಿದ್ದು ಇದನ್ನು ಕ್ಯಾನ್ಸರ್‌, ಮಧುಮೇಹ ರೋಗ ನಿಯಂತ್ರಣಕ್ಕಾಗಿ ಹೆಚ್ಚು ಬಳಸುತ್ತಾರೆ.

ರಾಜಮುಡಿಗೆ ಭಾರಿ ಬೇಡಿಕೆ
ರಾಜಮುಡಿ ಅಕ್ಕಿಯನ್ನು ವಿದೇಶಗಳಿಗೂ ರಪ್ತು ಮಾಡಲಾಗುತ್ತದೆ. ಪ್ರತಿ ಎಕರೆಗೆ 25 ಕ್ವಿಂಟಲ್‌ ಇಳುವರಿ ಬಂದಿದ್ದು,ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಪಾಲಿಶ್‌ ಮಾಡದೆ ಈ ಅಕ್ಕಿಯನ್ನು ಬಳಸಿದ್ದಲ್ಲಿ ಹೇರಳವಾಗಿ ಪೋಷಕಾಂಶಗಳು ಲಭ್ಯವಾಗಲಿವೆ. ಪ್ರತಿ ಕ್ವಿಂಟಲ್‌ಗೆ ಭತ್ತಕ್ಕೆ ₹5,000 ರಂತೆ, ಅಕ್ಕಿ ಪ್ರತಿ ಕೆ.ಜಿಗೆ ₹80ರಂತೆ ಮಾರಾಟವಾಗುತ್ತದೆ ಎಂದು ನಾಗೇಂದ್ರಯ್ಯ ಹಿರೇಮಠ ಮಾಹಿತಿ ನೀಡಿದರು.

ಸೋಲಾರ್ ಅಳವಡಿಕೆ
ಹೊಲದಲ್ಲಿ ಸೋಲಾರ್‌ ಅಳವಡಿಸಿದ್ದು ಬೆಳಕು ಹಾಗೂ ಟಿ.ವಿ.ಗಳನ್ನು ವೀಕ್ಷಣೆಗೆ ಬಳಸಲಾಗುತ್ತದೆ. ಕೃಷಿ ಹೊಂಡ ನಿರ್ಮಿಸಿದ್ದು, ಅದರ ಸುತ್ತಲೂ ರೇಷ್ಮೆ ಸೊಪ್ಪು ಹಾಗೂ ಚೊಗಚೆ ಬೆಳೆಯಲಾಗಿದೆ. ಜಾನುವಾರುಗಳ ಹಾಲು ಉತ್ಪಾದನೆಗೆ ಬಳಸಲಾಗುತ್ತದೆ. ಕಳೆದ ವರ್ಷ ವೆಲ್ಲೆಟ್‌ ಬೀನ್ಸ್‌ ಬೆಳೆಯಲಾಗಿದ್ದು, ಅದು ಸೂರ್ಯನ ಕಿರಣಗಳು ಭೂಮಿಗೆ ತಾಗದಂತೆ ತಡೆಯುತ್ತವೆ. ಇದರಿಂದ ಕಳೆ ಬೆಳೆಯಲು ಅವಕಾಶ ಸಿಗದಂತಾಗುತ್ತದೆ. 300 ಗ್ರಾಂನಿಂದ ಈಗ 50 ಕೆ.ಜಿ. ವೆಲ್ಲೆಟ್‌ ಬೀನ್ಸ್‌ ಬೆಳೆಯಲಾಗಿದೆ ಎಂದು ಅವರು ವಿವರಿಸಿದರು.

ವಿಜ್ಞಾನ ಶಿಕ್ಷಕರಾಗಿದ್ದ ಅವರು ದೇಸಿ ತಳಿಗಳಾದ ದೊಡ್ಡ ಭತ್ತ, ರಾಗಿ, ನವಣಿಯನ್ನು ಸಂರಕ್ಷಣೆ ಮಾಡಿದ್ದಾರೆ. ಸಹಾಯಕ್ಕೆ ಒಬ್ಬರನ್ನು ಮಾತ್ರ ಬಳಸಿಕೊಂಡು ಎಲ್ಲಾ ಕೆಲಸಗಳನ್ನು ತಾವೇ ಮಾಡುತ್ತಿದ್ದಾರೆ. ಹರಿಹರದಲ್ಲಿ ತಾವಿದ್ದ ಮನೆಯನ್ನು ಪ್ರತಿಭಾನ್ವಿತ ಬಡ ಮಕ್ಕಳಿಗೆ ಉಳಿದುಕೊಳ್ಳಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವರ್ಷಕ್ಕೆ ₹3 ಲಕ್ಷ ಆದಾಯ
150 ಅಡಿಕೆ ಹಚ್ಚಿದ್ದು ಅವುಗಳಲ್ಲಿ 80 ಫಲ ನೀಡುತ್ತಿವೆ. ಇದರಿಂದ ನಿರಂತರ ಆದಾಯ ಹೆಚ್ಚಲಿದೆ. ಈಗ ಅದರಲ್ಲಿ ಕಾಳು ಮೆಣಸು ಹಾಗೂ ಎಲೆ ಬಳ್ಳಿ ಹಾಕಲಾಗಿದೆ. 200 ಬಾಳೆ ಗಿಡಗಳನ್ನು ಹಚ್ಚಲಾಗಿದೆ. ಪ್ರತಿ ವರ್ಷ ಎಲ್ಲಾ ಖರ್ಚು ತೆಗೆದು ₹3 ಲಕ್ಷ ಆದಾಯ ಬರುತ್ತದೆ.

ಡೀಸೆಲ್‌ ಪಂಪ್‌ ಬಳಸಿ ಹನಿ ಹಾಗೂ ತುಂತುರು ನೀರಾವರಿ ಅಳವಡಿಸಲಾಗಿದೆ. ಜೀವನಕ್ಕೆ ಬೇಕಾಗುವ ಪದಾರ್ಥಗಳನ್ನು ತಮ್ಮ ಹೊಲದಲ್ಲಿಯೇ ಕಂಡುಕೊಂಡಿದ್ದು, ಆದಾಯ ಹೆಚ್ಚಿಸಿಕೊಂಡಿದ್ದಾರೆ. ಆಧುನಿಕತೆಯ ತಾಂತ್ರಿಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿರುವುದು ನಾಗೇಂದ್ರಯ್ಯ ಹಿರೇಮಠರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT