ಮಂಗಳವಾರ, ಜನವರಿ 21, 2020
27 °C
ಜಾನಪದ ವಿಶ್ವವಿದ್ಯಾಲಯ: 3 ತಿಂಗಳು ಕಳೆದರೂ ಆರಂಭವಾಗದ ಕೋರ್ಸ್‌

ಅತಂತ್ರ ಸ್ಥಿತಿಯಲ್ಲಿ ‘ಎಂಪಿಎ’ ವಿದ್ಯಾರ್ಥಿಗಳು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ‘ಪ್ರದರ್ಶನ ಕಲೆಯ ಸ್ನಾತಕೋತ್ತರ ಪದವಿ’ (ಮಾಸ್ಟರ್‌ ಆಫ್‌ ಪರ್‌ಫಾರ್ಮಿಂಗ್‌ ಆರ್ಟ್ಸ್‌) ಕೋರ್ಸ್‌ಗೆ ಪ್ರವೇಶಾತಿ ಪಡೆದು ಮೂರು ತಿಂಗಳು ಕಳೆದರೂ, ತರಗತಿ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ವಿಶ್ವವಿದ್ಯಾಲಯವು 2019–20ನೇ ಸಾಲಿನ ನೂತನ ಕೋರ್ಸ್ ‘ಎಂಪಿಎ (ರಂಗ ಕಲೆ)’ ಪ್ರವೇಶಾತಿಗೆ ಪ್ರಕಟಣೆ ನೀಡಿತ್ತು. ಅದರಂತೆ ಆರು ವಿದ್ಯಾರ್ಥಿಗಳು ಜುಲೈ– ಆಗಸ್ಟ್‌ ತಿಂಗಳಲ್ಲಿ ₹4,620 ಶುಲ್ಕ ತುಂಬಿ ಪ್ರವೇಶ ಪಡೆದರು. ಸೆಪ್ಟೆಂಬರ್‌ನಿಂದ ಆರಂಭವಾಗಬೇಕಿದ್ದ ತರಗತಿಗಳು ಇದುವರೆಗೂ ಆರಂಭವಾಗಿಲ್ಲ. ಈ ಬಗ್ಗೆ ಹಲವು ಬಾರಿ ಕುಲಪತಿ ಪ್ರೊ.ಡಿ.ಬಿ.ನಾಯ್ಕ್‌ ಅವರನ್ನು ಭೇಟಿ ಮಾಡಿ, ಕೋರ್ಸ್‌ ಆರಂಭಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

ಜಾನಪದ ರಂಗಭೂಮಿ, ಭಾರತೀಯ ರಂಗಭೂಮಿ, ಕರ್ನಾಟಕ ರಂಗಭೂಮಿ, ಅಭಿನಯದ ಪರಿಚಯ ಸೇರಿದಂತೆ ರಂಗಕಲೆಯ ಬಗ್ಗೆ ಸಮಗ್ರ ಜ್ಞಾನ ನೀಡುವ ಕೋರ್ಸ್ ಇದಾಗಿದೆ. 

‘ಕೋರ್ಸ್‌ ಆರಂಭಿಸಲು ಕನಿಷ್ಠ 10 ವಿದ್ಯಾರ್ಥಿಗಳು ಬೇಕು. 6 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿರುವುದರಿಂದ ವಿಳಂಬವಾಗಿದೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಆರಂಭದಲ್ಲಿ ಸಬೂಬು ಹೇಳಿದರು. ಆದರೆ, ಕೋರ್ಸ್‌ಗೆ ಸೇರಲು ಸಿದ್ಧವಾಗಿರುವ 7 ವಿದ್ಯಾರ್ಥಿಗಳಿಗೆ ಸಿಬ್ಬಂದಿಯೇ ಪ್ರವೇಶ ನಿರಾಕರಿಸುತ್ತಿದ್ದಾರೆ. ಇದರಿಂದ ಒಟ್ಟು 13 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. 

‘ಎಂಪಿಎ ಬದಲಾಗಿ ಎಂ.ಎ– ಜನಪದ ಕಲೆ ಕೋರ್ಸ್‌’ಗೆ ಪ್ರವೇಶ ಪಡೆಯಿರಿ ಅಥವಾ ಮುಂದಿನ ವರ್ಷದವರೆಗೂ ಕಾಯಿರಿ. ಇಲ್ಲದಿದ್ದರೆ ಕಟ್ಟಿರುವ ಶುಲ್ಕ ಹಿಂಪಡೆಯಿರಿ’ ಎಂದು ವಿಶ್ವವಿದ್ಯಾಲಯ ಹೇಳುತ್ತಿರುವುದರಿಂದ ನಮಗೆ ದಿಕ್ಕೇ ತೋಚದಂತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ. 

‘ಬಿ.ಎ.‍‍ (ಡ್ರಾಮಾ), ಬಿ.ಕಾಂ, ಬಿ.ಎಸ್ಸಿ ಓದಿರುವ ನಾವು ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಹಾಗಾಗಿ, ಇಷ್ಟಪಟ್ಟು ಈ ಕೋರ್ಸ್‌ ಆಯ್ಕೆ ಮಾಡಿಕೊಂಡಿದ್ದೇವೆ. ಇದಾದರೆ, ಬಿ.ಇಡಿ ಕಾಲೇಜುಗಳಲ್ಲಿ ‘ಡ್ರಾಮಾ ಟೀಚರ್‌’ ಅಥವಾ ವಿವಿಗಳಲ್ಲಿ ಪ್ರಾಧ್ಯಾಪಕರಾಗಬಹುದು. ರಂಗಕಲೆಯ ಬಗ್ಗೆ ಪಿಎಚ್‌.ಡಿ ಮಾಡಲು ಅನುಕೂಲ ಆಗಲಿದೆ. ಈಗಾಗಲೇ 3 ತಿಂಗಳು ವಿಳಂಬವಾಗಿರುವುದರಿಂದ ಬೇರೆ ಕಡೆಯೂ ಪ್ರವೇಶಾತಿ ಪಡೆಯಲು ಸಾಧ್ಯವಿಲ್ಲ. ಒಂದು ವರ್ಷ ನಿರುಪಯುಕ್ತವಾದರೆ ನಮ್ಮ ಭವಿಷ್ಯವೇನು’ ಎಂದು ‘ಪ್ರಜಾವಾಣಿ’ಯೊಂದಿಗೆ ಎಂಪಿಎ ವಿದ್ಯಾರ್ಥಿಗಳು ಕಷ್ಟ ತೋಡಿಕೊಂಡರು.

‘ಇನ್ನೂ ಅನುಮತಿ ಸಿಕ್ಕಿಲ್ಲ’
‘ಎಂ.ಪಿ.ಎ’ ಕೋರ್ಸ್ ಆರಂಭಿಸಲು ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಹಾಗಾಗಿ ಎಂಪಿಎ ಕೋರ್ಸ್‌ ವಿದ್ಯಾರ್ಥಿಗಳು ಜನಪದ ಕಲೆ ಕೋರ್ಸ್‌ಗೆ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಬೇಕೆಂದರೆ ಪದವಿ ಪ್ರಮಾಣ ಪತ್ರದಲ್ಲಿ ಜನಪದ ಕಲೆಯ ಜತೆಗೆ ಆವರಣದಲ್ಲಿ ‘ಎಂಪಿಎ’ ಎಂದು ಕೊಡುತ್ತೇವೆ.
–ಪ್ರೊ.ಚಂದ್ರಶೇಖರ್‌, ಕುಲಸಚಿವ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು