ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮೇವು, ನೀರು ಅರಸಿ ಗೋಪಾಲಕರ ಗುಳೆ!

Published 23 ಮೇ 2024, 6:38 IST
Last Updated 23 ಮೇ 2024, 6:38 IST
ಅಕ್ಷರ ಗಾತ್ರ

ಹಾವೇರಿ: ‘ನಮ್ಮ ಕಡೆ ಮಳೆ ಬೆಳೆ ಇಲ್ಲ, ಭೀಕರ ಬರಗಾಲ ಬಿದ್ದಿದೆ. ದನಕರುಗಳಿಗೆ ಮೇಯಿಸಲು ಮೇವಿಲ್ಲ, ಕುಡಿಸಲು ನೀರಿಲ್ಲ. ತುಂಗಭದ್ರಾ ನದಿ ದಂಡೆಯಲ್ಲಿ ನೀರು–ಮೇವು ಅರಸುತ್ತಾ ದನಕರುಗಳೊಂದಿಗೆ ಅಲೆದಾಡುತ್ತಿದ್ದೇವೆ’ ಎಂದು ಕೊಪ್ಪಳ ಜಿಲ್ಲೆಯ ನಾಗೇಶನಹಳ್ಳಿಯ ಗೋಪಾಲಕ ಮಾರುತೇಶ ಗೊಲ್ಲರ್‌ ಸಮಸ್ಯೆ ತೋಡಿಕೊಂಡರು. 

ಕೊಪ್ಪಳ ಜಿಲ್ಲೆಯ ನಾಗೇಶನಹಳ್ಳಿ, ಕಾಮನೂರು ಮತ್ತು ಬೊಮ್ಮಸಾಗರ ತಾಂಡದ ಮೂರು ಕುಟುಂಬಗಳ 10 ಮಂದಿಯ ಗೋಪಾಲಕರ ತಂಡ ಬರೋಬ್ಬರಿ 900 ದನಕರುಗಳೊಂದಿಗೆ ಹಾವೇರಿ ಜಿಲ್ಲೆಗೆ ವಲಸೆ ಬಂದು, ರಾಣೆಬೆನ್ನೂರು ತಾಲ್ಲೂಕಿನ ಹಿರೇಬಿದರಿಯ ಗದ್ದೆ ಬಯಲಿನಲ್ಲಿ ಬೀಡುಬಿಟ್ಟಿದ್ದಾರೆ. ಭತ್ತ ಕೊಯ್ಲು ಆದ ಗದ್ದೆಗಳಲ್ಲಿ ಸಿಗುವ ಹಸಿರು ಚಿಗುರು ಮತ್ತು ತುಂಗಭದ್ರಾ ನದಿಯ ಹಳ್ಳಗಳಲ್ಲಿ ನಿಂತ ಮಳೆ ನೀರು ದನಗಳ ಹಸಿವು ಮತ್ತು ಬಾಯಾರಿಕೆ ಕೊಂಚ ನೀಗಿಸಿವೆ.

‘ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಕೊಪ್ಪಳ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ಅರಣ್ಯ, ಹುಲ್ಲುಗಾವಲು, ಗೋಮಾಳಗಳಿಗೆ ಹೋಗಿ ದನಗಳನ್ನು ಮೇಯಿಸುತ್ತಿದ್ದೆವು. ಈ ಬಾರಿ ‘ಭತ್ತದ ನಾಡು’ ಕೊಪ್ಪಳದಲ್ಲಿ ಭತ್ತದ ಕ್ಷೇತ್ರ ಕಡಿಮೆಯಾಗಿ ಮೇವಿನ ತತ್ವಾರ ಉಂಟಾಗಿದೆ. ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯದೆ ಬೆಳೆಗಳು ಒಣಗಿವೆ. ದನಕರುಗಳು ಬೊಗಸೆ ನೀರಿಗೆ, ಹಿಡಿ ಮೇವಿಗೆ ಗೋಳಿಡುತ್ತಿವೆ. ಹೀಗಾಗಿ ಮೊದಲ ಬಾರಿಗೆ ಹಾವೇರಿ ಜಿಲ್ಲೆಯತ್ತ ವಲಸೆ ಬಂದಿದ್ದೇವೆ’ ಎಂದು ಗೋಪಾಲಕರು ಸಂಕಷ್ಟ ತೋಡಿಕೊಂಡರು. 

‘ಮಕ್ಕಳು ಮರಿ ಕಟ್ಟಿಕೊಂಡು ಊರು ಬಿಟ್ಟು ಊರಿಗೆ ಬಿಸಿಲಿನಲ್ಲಿ ತಿರುಗುವ ನಮಗೆ ಹೊತ್ತು ಹೊತ್ತಿಗೆ ಊಟ–ನೀರು ಸಿಗುತ್ತಿಲ್ಲ. ಮಕ್ಕಳಿಗೆ ಶಾಲೆ ಓದಿಸಲು ರೊಕ್ಕ ಸಾಲೋದಿಲ್ಲ. ಬೇಸಿಗೆಯಲ್ಲಿ ದನಕರುಗಳಿಗೆ ನೀರು–ಮೇವು ಸಿಗುತ್ತಿಲ್ಲ. ಪಶುಗಳಿಗೆ ಉಚಿತ ಔಷಧ, ಟೆಂಟ್‌ ಸೇರಿದಂತೆ ಸರ್ಕಾರ ಯಾವುದೇ ನೆರವು ನೀಡುತ್ತಿಲ್ಲ’ ಎಂದು ಗೋಪಾಲಕಿ ವೆಂಕಮ್ಮ ಗೊಲ್ಲರ್‌ ಅಳಲು ತೋಡಿಕೊಂಡರು.  

ಸಾಮರಸ್ಯದ ಗುಳೆ:

ಗೊಲ್ಲರು, ಕುರುಬರು ಮತ್ತು ಲಂಬಾಣಿ ಜನಾಂಗದ ಮೂರು ಕುಟುಂಬಗಳು ಒಗ್ಗಟ್ಟಾಗಿ ನೂರಾರು ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲಿ ದನಕರುಗಳೊಂದಿಗೆ ವಲಸೆ ಬಂದಿದ್ದಾರೆ. ಗದ್ದೆ ಬಯಲಿನಲ್ಲಿ ಎರಡು ಡೇರೆ ಹಾಕಿಕೊಂಡಿರುವ ಇವರ ಮಧ್ಯೆ ಜಾತಿ ತಾರತಮ್ಯವಿಲ್ಲ. ಮಹಿಳೆಯರು ಸೌದೆ ಒಲೆಯಲ್ಲಿ ತಯಾರಿಸಿದ ಅಡುಗೆಯನ್ನು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ನಂತರ ಎಲ್ಲರೂ ದನ ಕಾಯಲು ಹೋಗುತ್ತಾರೆ. ಈ ಸಾಮರಸ್ಯದ ಬದುಕು ನೋಡಿ ರಾಣೆಬೆನ್ನೂರು ತಾಲ್ಲೂಕಿನ ಹಿರೇಬಿದರಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. 

ಆಕಳು ಮಾರುವುದಿಲ್ಲ:

‘ನಮ್ಮಲ್ಲಿ 3 ಹೋರಿಗಳಿದ್ದು, 850ಕ್ಕೂ ಹೆಚ್ಚು ಆಕಳು ಮತ್ತು ಕರುಗಳಿವೆ. ಜವಾರಿ ತಳಿಯ ಈ ದನಕರುಗಳು ಬಿಳಿ ಬಣ್ಣದಿಂದ ಕೂಡಿದ್ದು, ಗಟ್ಟಿಮುಟ್ಟಾಗಿವೆ. ಹೀಗಾಗಿ ನಮ್ಮಲ್ಲಿರುವ ಹೋರಿಗಳನ್ನು ರೈತರು ಕೃಷಿ ಕೆಲಸಕ್ಕೆ ಖರೀದಿಸುತ್ತಾರೆ. ಆದರೆ, ಯಾರಿಗೂ ನಾವು ಆಕಳನ್ನು ಮಾರುವುದಿಲ್ಲ. ಸಾಯೋವರೆಗೂ ನಮ್ಮ ಜತೆಯಲ್ಲೇ ಇರುತ್ತವೆ. ನೀರು, ಮೇವು ಸಿಗುವ ಕಡೆ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ರೈತರ ಹೊಲಗಳಲ್ಲಿ ದನಕರುಗಳನ್ನು ಒಂದೆಡೆ ಕೂಡುತ್ತೇವೆ. ಸಗಣಿ, ಗಂಜಳದಿಂದ ಕೃಷಿ ಭೂಮಿ ಫಲವತ್ತಾಗುತ್ತದೆ. ರೈತರು ಕೊಡುವ ದುಡ್ಡು ನಮ್ಮ ಬದುಕಿಗೆ ಆಸರೆಯಾಗಿದೆ’ ಎಂದು ಗೋಪಾಲಕ ಕೃಷ್ಣ ಲಮಾಣಿ ಹೇಳಿದರು.  

ಹಾವೇರಿ ಜಿಲ್ಲೆಗೆ ಬಂದಿರುವ ದನಕರುಗಳಿಗೆ ಮೇವು ನೀರು ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು. ಗೋಪಾಲಕರಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ
– ರಘುನಂದನ ಮೂರ್ತಿ ಹಾವೇರಿ ಜಿಲ್ಲಾಧಿಕಾರಿ
‘ಚಿರತೆ’ ದನಗಳ ಸೋದರಮಾವ!
‘ಚಿರತೆ ದಾಳಿಗೆ ಪ್ರತಿವರ್ಷ 15ರಿಂದ 20 ದನಗಳು ಬಲಿಯಾಗುತ್ತವೆ. ಕುರಿಗಳಿಗೆ ತೋಳ ಹೇಗೋ ಅದೇ ರೀತಿ ದನಗಳಿಗೆ ಚಿರತೆ ಸೋದರಮಾವನಿದ್ದಂತೆ. ಹೀಗಾಗಿ ಪ್ರತಿವರ್ಷ ಸೋದರ ಮಾವನ ಪಾಲನ್ನು ಕೊಡುತ್ತೇವೆ’ ಎಂದು ಗೋಪಾಲಕ ಮಾರುತೇಶ ಗೊಲ್ಲರ್‌ ಮಾರ್ಮಿಕವಾಗಿ ತಿಳಿಸಿದರು.  ‘ನಾವು ಶಾಲೆ ಮೆಟ್ಟಿಲು ಹತ್ತಿದವರಲ್ಲ ನಮ್ಮ ಮಕ್ಕಳು 8ರಿಂದ 10ನೇ ತರಗತಿವರೆಗೆ ಓದಿ ನಂತರ ಶಾಲೆ ಬಿಡುತ್ತಾರೆ. ದನಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿದ್ದೇವೆ. ಕಾಯಿಲೆಬಿದ್ದರೆ ನಾವೇ ಔಷಧ ಇಂಜೆಕ್ಷನ್‌ ತಂದು ಹಾಕುತ್ತೇವೆ. ದನ ಕಾಯುವುದು ನಮ್ಮ ಕುಲಕಸುಬು. ಜವಾರಿ ತಳಿಗಳ ಸಂರಕ್ಷಣೆ ನಮ್ಮ ಹೊಣೆಯಾಗಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT