ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಹಾಯಕ ಕೃಷಿ ನಿರ್ದೇಶಕ

Published 25 ಮೇ 2023, 6:58 IST
Last Updated 25 ಮೇ 2023, 6:58 IST
ಅಕ್ಷರ ಗಾತ್ರ

ಹಾವೇರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಜೂನ್ ಮೊದಲನೇ ವಾರದಲ್ಲಿ ಪ್ರಾರಂಭವಾಗುವ ಸೂಚನೆಯಿದ್ದು, ಹಾವೇರಿ ತಾಲ್ಲೂಕಿನ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇರುವುದಿಲ್ಲ ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಹೇಳಿದರು.

ಮುಂಗಾರು ಹಂಗಾಮಿನಲ್ಲಿ ಹಾವೇರಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಮುಸುಕಿನ ಜೋಳ 42,000 ಹೆಕ್ಟೇರ್, ಸೋಯಾಬೀನ್ 4100 ಹೆಕ್ಟೇರ್, ಶೇಂಗಾ 950 ಹೆಕ್ಟೇರ್, ಭತ್ತ 300 ಹೆಕ್ಟೇರ್ ಹಾಗೂ ಇತರೆ ಬೆಳೆಗಳು ಸೇರಿ ಒಟ್ಟಾರೆ 56,000 ಹೆಕ್ಟೇರ್ ಬಿತ್ತನೆಯಾಗುವ ಗುರಿ ಹೊಂದಲಾಗಿದೆ. ಅವಶ್ಯಕವಿರುವ ರಸಗೊಬ್ಬರಗಳನ್ನು ಮಾರಾಟ ಪರವಾನಗಿ ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು, ರೈತ ಉತ್ಪಾದಕ ಕಂಪನಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುಕ ತಾಲ್ಲೂಕಿನಲ್ಲಿ ಯೂರಿಯಾ 2,552 ಮೆಟ್ರಿಕ್ ಟನ್, ಡಿ.ಎ.ಪಿ1,250 ಮೆಟ್ರಿಕ್ ಟನ್, ಪೋಟ್ಯಾಷ್ 5,365 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ರಸಗೊಬ್ಬರ 1,830 ಮೆಟ್ರಿಕ್ ಟನ್‌ಗಳನಷ್ಟು ವಿವಿಧ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಇರುತ್ತದೆ.

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಹಾವೇರಿ, ಕರ್ಜಗಿ ಹಾಗೂ ಗುತ್ತಲ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಯಾಯಿತಿ ದರದಲ್ಲಿ ವಿತರಿಸಲಾಗುವ ಬಿತ್ತನೆ ಬೀಜಗಳ ಪ್ಯಾಕೆಟಗಳ ಮೇಲೆ ಬಾರ್‌ಕೋಡ್ ಅಳವಡಿಸಲಾಗಿದೆ. ಸೂಪರ್ ಮಾರ್ಕೆಟ್‌ ಮಾದರಿಯಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳ ಪಾಕೇಟ್ ಮೇಲಿನ ಬಾರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಕೆ.ಕಿಸಾನ ಪೋರ್ಟಲ್‌ನಲ್ಲಿ ಎಂ.ಐ.ಎಸ್ ಮಾಡಿ ಬಿಲ್ ಸೃಜಿಸಲಾಗುವುದು ಹಾಗೂ ರಶೀದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಬಾರಿ ಸ್ಕ್ಯಾನ್ ಮಾಡಿ ವಿತರಿಸುವ ವ್ಯವಸ್ಥೆ ಇರುವುದರಿಂದ ಯಾವುದೇ ಕಾರಣಕ್ಕೂ ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಖರೀದಿಸಲು ಸಾಧ್ಯವಾಗುವುದಿಲ್ಲ. ಖರೀದಿಸಿದ ರೈತರ ಮೊಬೈಲ್‌ಗೆ ತಕ್ಷಣವೇ ಎಸ್.ಎಂ.ಎಸ್ ಸಂದೇಶ ರವಾನೆಯಾಗುತ್ತದೆ. ರೈತರು ತಾವು ಖುದ್ದು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಖರೀದಿಸಬೇಕು. ರೈತರು ಕಡ್ಡಾಯವಾಗಿ ಎಫ್ಐಡಿ ಸಂಖ್ಯೆ ಹೊಂದಿರಬೇಕು. ಎಲ್ಲಾ ವರ್ಗದ ರೈತರಿಗೆ ಗರಿಷ್ಟ ಎರಡು ಹೆಕ್ಟೇರ್ ವರೆಗೆ ಮಾತ್ರ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಬಿತ್ತನೆಗೆ ಸೂಚನೆಗಳು: ಬಿತ್ತುವ ಮುನ್ನ ಬೀಜಗಳನ್ನು ಕ್ಲೋರ್ ಪೈರಿಫಾಸ್ ಮತ್ತು ಕಾರ್ಬಂಡೈಜಿಂ ಅಥವಾ ಅಜಾಡಿರಕ್ಟನ್ ಮತ್ತು ಟ್ರೈಕೋಡಮಾಕಗಳಿಂದ ಬೀಜೋಪಚರಿಸಬೇಕು. ಶೇಂಗಾ, ಸೂರ್ಯಕಾಂತಿ, ಹತ್ತಿ, ಹೆಸರು, ಅಲಸಂದಿ ಇತ್ತಾದಿ ಬೆಳೆಗಳ ಸುತ್ತ ನಾಲ್ಕು ಸಾಲು ಗೋವಿನಜೋಳ ಬಿತ್ತನೆ ಮಾಡಬೇಕು.

ಹತ್ತಿ ಬಿತ್ತುವವರು ಜೂನ್ ಮೊದಲುವಾರ(ರೋಹಿಣಿ ಮಳೆ)ದೊಳಗೆ ಬಿತ್ತನೆ ಮಾಡಲೇಬೇಕು. ನಂತರ ಬಿತ್ತನೆ ಮಾಡಿದರೆ ಇಳುವರಿ ತುಂಬಾ ಕಡಿಮೆಯಾಗುತ್ತದೆ. ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಮಳೆ ಕಡಿಮೆ ಆಗುವ ಮುನ್ಸೂಚನೆ ಇರುವುದರಿಂದ ರಸಗೊಬ್ಬರಗಳನ್ನು ಮಿತವಾಗಿ ಬಳಸಬೇಕು. ಪೋಷಕಾಂಶಗಳ ಸಿಂಪಡಣೆ ಅನಿವಾರ್ಯವಾಗಿದ್ದು, ಈ ಕಾರ್ಯವನ್ನು ಬೆಳೆಯು 20 ರಿಂದ 25 ದಿನಗಳು ಇರುವಾಗಲೇ ಆರಭಿಸಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT