ಭಾನುವಾರ, ಮೇ 9, 2021
19 °C
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಜ್ಜು

ಹುನಗುಂದ ತಾಲ್ಲೂಕು ಆಸ್ಪತ್ರೆ: ವೆಂಟಿಲೇಟರ್, ತಜ್ಞ ವೈದ್ಯರೇ ಇಲ್ಲ!

ಸಂಗಮೇಶ ಹೂಗಾರ Updated:

ಅಕ್ಷರ ಗಾತ್ರ : | |

Prajavani

ಹುನಗುಂದ: ಇಲ್ಲಿನ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಉಪಕರಣ ಇಲ್ಲ. ತಜ್ಞ ವೈದ್ಯರ (ಫಿಜಿಶಿಯನ್) ಕೊರತೆಯ ನಡುವೆಯೇ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಅದೃಷ್ಟವಶಾತ್ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕೋವಿಡ್-19ಗೆ ಸಂಬಂಧಿಸಿದಂತೆ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಆದರೆ ದಿಢೀರನೆ ಸೋಂಕು ಬಾಧಿತಗೊಂಡರೆ ಗಂಭೀರ ಸ್ಥಿತಿಯಲ್ಲಿ ನರಳುವ ರೋಗಿಗಳಿಗೆ ವೆಂಟಿಲೇಟರ್‌ನ ಅಗತ್ಯತೆ ಕಂಡುಬರುತ್ತದೆ. ಆದರೆ ಒಂದೂ ಉಪಕರಣ ಈ ಆಸ್ಪತ್ರೆಯಲ್ಲಿ ಇಲ್ಲ. 

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿಯೇ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಐಸೊಲೇಶನ್ ವಾರ್ಡ್ ಸಜ್ಜುಗೊಳಿಸಲಾಗಿದೆ. ಪ್ರತಿ ಪಾಳಿಗೆ ಮೂರು ಸಿಬ್ಬಂದಿಯಂತೆ ಒಟ್ಟು 9 ಮಂದಿಯನ್ನು ಕೊರೊನಾ ಚಿಕಿತ್ಸೆಗೆಂದು ನೇಮಿಸಲಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ನಾಲ್ವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ವರದಿಯೂ ನೆಗೆಟಿವ್ ಬಂದು  ಆತಂಕ ದೂರಮಾಡಿದೆ.

ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೊರತೆ :

ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಅರವಳಿಕೆ, ಶಸ್ತ್ರ ಚಿಕಿತ್ಸಕರು, ಸ್ತ್ರೀ ರೋಗ ತಜ್ಞ , ದಂತ ವೈದ್ಯರು ಮಾತ್ರ ಇದ್ದು, ಆರು ಮಂದಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ. ಒಬ್ಬ ಮುಖ್ಯ ವೈಧ್ಯಾಧಿಕಾರಿ, 19 ಮಂದಿ ಸ್ಟಾಫ್ ನರ್ಸ್, 9 ಮಂದಿ ಗ್ರೂಪ್ ಡಿ ನೌಕರರು, ಇಬ್ಬರು ಕ್ಷ-ಕಿರಣ ತಜ್ಞರು, ಮೂವರು ಔಷಧ ಸಂಯೋಜಕರು, ಗುತ್ತಿಗೆ ನೌಕರರು ಸೇರಿದಂತೆ ಒಟ್ಟು 70 ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ 44 ಹುದ್ದೆಗಳು ಖಾಲಿ ಇವೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗರೂಕತಾ ಕ್ರಮವಾಗಿ ಹುನಗುಂದ, ಕೂಡಲಸಂಗಮ, ಇಳಕಲ್‌ನಲ್ಲಿ  ಫಿವರ್ ಕ್ಲಿನಿಕ್ ಪ್ರಾರಂಭಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಐದು ಆಂಬುಲೆನ್ಸ್‌ಗಳು ಸಿದ್ಧವಾಗಿವೆ. ಅಗತ್ಯಕ್ಕೆ ಅನುಗುಣವಾಗಿ ಔಷಧಿ, ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯವಿದೆ. ಹೈಡ್ರೋ ಕ್ಲೋರೊಕ್ವಿನ್ ಮತ್ತು ಅಜಿತ್ರೊಮೈಸಿನ್  ಮಾತ್ರೆ ಪೂರೈಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ತಿಳಿಸಿದರು.

ಈಗಾಗಲೇ ವಿದೇಶದಿಂದ 30, ಹೊರ ರಾಜ್ಯದಿಂದ 322, ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 4320 ಜನರನ್ನು ಪರೀಕ್ಷಿಸಲಾಗಿದೆ. ಕೇರಳದ ಕಾಸರಗೋಡಿನಿಂದ ಬಂದವರನ್ನು ಹುನಗುಂದ ಪಟ್ಟಣದ ವಸತಿ ನಿಲಯಗಳಲ್ಲಿ, ಹಾಸನ ಮತ್ತು ಕುಡಚಿಯಿಂದ ಬಂದವರನ್ನು ಅಮೀನಗಡದ ನವಚೇತನ ಶಾಲೆಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಇಳಕಲ್ ಸಮೀಪದ ಹನುಮನಾಳ ಹತ್ತಿರ ಚೆಕ್‌ಪೋಸ್ಟ್ ತೆರೆಯಲಾಗಿದೆ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು