ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಆರ್‌ಎಫ್ ನಿಯಮದಂತೆ ಬರ ಪರಿಹಾರ ನೀಡಿ: ರೈತ ಸಂಘ

Published 21 ಮೇ 2024, 14:15 IST
Last Updated 21 ಮೇ 2024, 14:15 IST
ಅಕ್ಷರ ಗಾತ್ರ

ಸವಣೂರು: ಎನ್‌ಡಿಆರ್‌ಎಫ್ ನಿಯಮದಡಿಯಲ್ಲಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ಕೈಗೊಂಡು ತಹಶೀಲ್ದಾರ್ ಭರತ್‌ರಾಜ್.ಕೆ.ಎನ್ ಅವರಿಗೆ ಮನವಿ ಸಲ್ಲಿಸಲಾಯಿತು.

‘ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಪ್ರಸಕ್ತ ವರ್ಷ ಅನಾವೃಷ್ಟಿಯ ಸುಳಿಯಲ್ಲಿ ಸಿಲುಕಿ ರೈತರು ನಷ್ಟ ಅನುಭವಿಸಿದ್ದಾರೆ. ಸಾಲ ಹೊರೆ ತೀರಿಸಲಾಗದೇ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಹೋರಾತ್ರಿ ಧರಣಿ ಕೈಗೊಂಡಾಗ ಸರ್ಕಾರ ಮಣಿದು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ಸುಮಾರು ತಿಂಗಳುಗಳು ಗತಿಸಿದರೂ, ರೈತನ ಕಷ್ಟಕ್ಕೆ ಸ್ಪಂದಿಸದೇ ಸರ್ಕಾರ ಚುನಾವಣೆ ಗುಂಗಲ್ಲಿ ಕಳೆದು ಹೋಗಿದೆ’ ಎಂದು ರೈತರು ದೂರಿದರು.

‘ಈಚೆಗೆ ರಾಜ್ಯ ಸರ್ಕಾರ ಕಾಟಾಚಾರಕ್ಕೆ ₹2 ಸಾವಿರ ಬರ ಪರಿಹಾರವನ್ನು ಕೆಲವೇ ರೈತರ ಖಾತೆಗೆ ಜಮಾ ಮಾಡಿ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿದೆ. ಕೇಂದ್ರ ಸರ್ಕಾರ ಬೆಳೆಹಾನಿ ಪರಿಹಾರವನ್ನು ಪ್ರತಿ ಹೆಕ್ಟೇರ್‌ಗೆ ₹8.5 ಸಾವಿರ ಬಿಡುಗಡೆ ಮಾಡಿದೆ. ಅದರಲ್ಲಿ ರಾಜ್ಯ ಸರ್ಕಾರ ₹2 ಸಾವಿರವನ್ನು ಕಡಿತ ಮಾಡಿ ₹6.5 ಸಾವಿರ ಜಮಾ ಮಾಡುತ್ತಿದೆ. ಬರಗಾಲದ ಛಾಯೆಯ ಸುಳಿಯಲ್ಲಿ ಸಿಲುಕಿದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಸಂದಿಗ್ದ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ನೀಡುತ್ತಿರುವ ಪರಿಹಾರದಲ್ಲಿ ಕೃಷಿ ಚಟುವಟಿಕೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರವನ್ನು ರೈತರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಚುನಾವಣೆ ಸಂದರ್ಭದಲ್ಲಿ ಬರ ಪರಿಹಾರಕ್ಕಾಗಿ ರೈತರು ಮನವಿ ಸಲ್ಲಿಸುತ್ತಿಲ್ಲ ಎಂದು ಹೇಳುತ್ತಿರಿ. ಆದರೆ, ಜಿಲ್ಲೆಯಲ್ಲಿ ಒಂದೇ ದಿನಕ್ಕೆ 18 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹25ಸಾವಿರ ಬರ ಪರಿಹಾರ ನೀಡುಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲೆಗೆ ಭೇಟಿ ನೀಡಿದಾಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದಾಗ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವದನ್ನು ರೈತ ಸಂಘ ಖಂಡಿಸುತ್ತದೆ. ಎನ್‌ಡಿಆರ್‌ಎಫ್ ನಿಯಮದಂತೆ ಕೇಂದ್ರ ಸರ್ಕಾರ ನೀಡಿದ ಬರ ಪರಿಹಾದ ಜೋತೆಗೆ ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ ರೈತರ ಖಾತೆಗೆ ಜಮಾ ಮಾಡಬೇಕು. ಇಲ್ಲದಿದ್ದರೇ ತಾಲ್ಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ತಾಲ್ಲೂಕಿನ ರೈತರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಿರಂತರ ಧರಣಿ ಕೈಗೊಳ್ಳಲಾಗುತ್ತದೆ’ ಎಂದು ಮನವಿಯಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ತಾಲ್ಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ಅಬ್ದುಲ್‌ಖಾದರ ಬುಡಂದಿ, ಮಾಲತೇಶ ಪರಮ್ಮನವರ, ಮಲ್ಲೇಶ ಬಾರ್ಕಿ, ನಾಗಪ್ಪ ಹಡಪದ, ಶೇಖರಗೌಡ ಪಾಟೀಲ, ರಾಜಶೇಖರ ಕುಳೇನೂರ, ಬಸವರಾಜ ಮತ್ತೂರ, ಶಂಕ್ರಪ್ಪ ತಳವಾರ, ಲೋಕೇಶ ಕದಂ, ಶೇಖಪ್ಪ ಹಡಪದ, ಅಡಿವೆಪ್ಪ ಮರೆಮ್ಮನವರ, ಅಣ್ಣಪ್ಪ ಗಾಣಗೇರ, ಶಿವಪ್ಪ ಗೊಲ್ಲರ ಸೇರಿದಂತೆ ತಾಲ್ಲೂಕಿನ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT