ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಟ್ಟೀಹಳ್ಳಿ | ಸ್ಮಾರಕ ದೇವಸ್ಥಾನ; ಪರವಾನಗಿಗೆ ಅಲೆದಾಟ

ಪ್ರಾಚೀನ ಪುರಾತತ್ವ ಇಲಾಖೆಯ ನಿಯಮ ಅವೈಜ್ಞಾನಿಕ: ನಿವಾಸಿಗಳ ಆರೋಪ
Published 16 ಜೂನ್ 2024, 6:05 IST
Last Updated 16 ಜೂನ್ 2024, 6:05 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಪಟ್ಟಣದ ಕೋಟೆ ಭಾಗದಲ್ಲಿರುವ ಕದಂಬೇಶ್ವರ ಸ್ಮಾರಕ ದೇವಸ್ಥಾನ ಕೇಂದ್ರ ಸರ್ಕಾರದ ಪ್ರಾಚೀನ ಪುರಾತತ್ವ ಇಲಾಖೆ ಅಡಿಯ ಲ್ಲಿದ್ದು, ಇಲಾಖೆಯ ಹಲವು ನಿರ್ಬಂಧ ಗಳಿಂದಾಗಿ ತೊಂದರೆ ಉಂಟಾಗಿರುವು ದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈ ಭಾಗದಲ್ಲಿ ಹಲವು ಮನೆಗಳಿದ್ದು, ಬಹುತೇಕ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಅದೇ ಜಾಗದಲ್ಲಿ ಹೊಸ ಮನೆ ಕಟ್ಟಲು ಹಾಗೂ ಮನೆ ದುರಸ್ತಿ ಮಾಡಲು ಪರವಾನಗಿಗಾಗಿ ಬೆಂಗಳೂರಿನ ಪುರಾತತ್ವ ಕಚೇರಿಗೆ ಅಲೆಯಬೇಕಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕೋಟೆ ಭಾಗದಲ್ಲಿ ನೀರು, ರಸ್ತೆ, ವಿದ್ಯುತ್ ಹೀಗೆ ಎಲ್ಲ ಮೂಲ ಸೌಕರ್ಯಗಳು ಉತ್ತಮವಾಗಿದ್ದರೂ ನಿವಾಸಿಗಳು ಬೇರೆಡೆ ವಲಸೆ ಹೋಗುವಂತಾಗಿದೆ. ಇಲ್ಲಿ ಹೆಚ್ಚಾಗಿ ಪುರಾತನ ಮನೆಗಳಿದ್ದು, ಮಳೆ ಬಂದರೆ ಸೋರುತ್ತವೆ. ಗೋಡೆಗಳು ಬೀಳುವುದು ಸಾಮಾನ್ಯವಾಗಿದೆ. ಹೀಗೆ ಪ್ರತಿಬಾರಿ ಮನೆಗಳು ಹಾಳಾದ ಸಂದರ್ಭದಲ್ಲಿ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ತೆಗೆದುಕೊಂಡು ಮನೆ ದುರಸ್ತಿ ಮಾಡಿಸಿಕೊಳ್ಳಲು ಜನರು ಪ‍ರದಾಡುತ್ತಿದ್ದಾರೆ.

ಅಲ್ಲದೆ ಇಲಾಖೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಯಾವುದೇ ಕಚೇರಿಯಿ ಲ್ಲದೆ ಪ್ರತಿ ಬಾರಿ ಬೆಂಗಳೂರಿನ ಪುರಾತತ್ವ ಕಚೇರಿಯಿಂದ ಪರವಾನಗಿ ತೆಗೆದುಕೊಳ್ಳುವುದು, ಅಲ್ಲದೆ ಅವರು ಕೇಳುವ ಹಲವಾರು ಕಾಗದ ಪತ್ರಗಳನ್ನು ಹೊಂದಿಸುವುದೇ ತಲೆನೋವಾಗಿದೆ.

ಇಲ್ಲಿರುವ ಸ್ವಂತ ಮನೆಗಳನ್ನು ಮಾರಾಟ ಮಾಡಲು ಹೋದರೂ ಸ್ಮಾರಕದ ಹತ್ತಿರ ಇರುವ ಕಾರಣಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ.  ಖರೀದಿಗೂ ಯಾರು ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

‘ರಟ್ಟೀಹಳ್ಳಿ ಪಟ್ಟಣದ ಕೋಟೆ ಭಾಗದಲ್ಲಿ ನನ್ನ ಸ್ವಂತ ಮನೆಯಿದ್ದು, ಮನೆ ಸಂಪೂರ್ಣವಾಗಿ ಬಿದ್ದುಹೋಗಿದೆ. ಅದನ್ನು ದುರಸ್ತಿ ಮಾಡಿಸಲು ಇಲಾಖೆಯಿಂದ ಹತ್ತು ಹಲವಾರು ಕಾಗದ ಪತ್ರಗಳನ್ನು ಕೇಳುತ್ತಿದ್ದಾರೆ. ಅದೂ ಬೆಂಗಳೂರು ಕಚೇರಿಗೆ ಹೋಗಿ ಪರವಾನಗಿ ತರಲು ಸಾಧ್ಯವಾಗುತ್ತಿಲ್ಲ. ಆಸ್ತಿ ಮಾರಾಟ ಮಾಡಬೇಕೆಂದರೂ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ’ ಎಂದು ಸಂತೋಷ ಮನ್ನೋಪಂತರ ಹೇಳಿದರು.

‘ಕೋಟೆಯಲ್ಲಿರುವ ಮನೆ ಬೀಳುವ ಹಂತ ತಲುಪಿದೆ. ಮಳೆಗಾಲದಲ್ಲಿ ಮನೆ ಸೋರುತ್ತದೆ. ಮನೆಯಲ್ಲಿ ಮಕ್ಕಳೊಂದಿಗೆ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ. ಮನೆ ರಿಪೇರಿ ಮಾಡಿಸಬೇಕಿದೆ. ಪುರಾತತ್ವ ಇಲಾಖೆಯ ಪರವಾನಗಿ ತೆಗೆದುಕೊಳ್ಳಲು ಕಾಗದ ಪತ್ರಗಳನ್ನು ಹೊಂದಿಸುವುದೇ ದೊಡ್ಡ ತಲೆನೋವಾಗಿದೆ’ ಎಂದು ರಾಜು ಉಪ್ಪಾರ ಅಳಲು ತೋಡಿಕೊಂಡರು.

‘ಪಟ್ಟಣದ ಕೋಟೆ ಭಾಗದಲ್ಲಿ ಪ್ರಾಚೀನ ಪುರಾತತ್ವ ಇಲಾಖೆಯ ಸ್ಮಾರಕವಿದ್ದು, ಪುರಾತತ್ವ ಇಲಾಖೆಯಿಂದ ಪರವಾನಗಿ ಪಡೆದ್ದಲ್ಲಿ ಮಾತ್ರ ಅವರ ಮಾರ್ಗಸೂಚಿಯಂತೆ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಕಟ್ಟಡ ನಿರ್ಮಿಸಲು ಪರವಾನಗಿ ನೀಡಲಾಗುತ್ತದೆ‘ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಹೇಳಿದರು.

‘ಹೊಸ ಕಟ್ಟಡ ನಿರ್ಮಿಸಲು ಪರವಾನಗಿಯಿಲ್ಲ’

‘ಪ್ರಾಚೀನ ಪುರಾತತ್ವ ಇಲಾಖೆ ನಿಬಂಧನೆ ಪ್ರಕಾರ ಸ್ಮಾರಕದಿಂದ 100 ಮೀಟರ್‌ವರೆಗೆ ಯಾವುದೇ ಹೊಸ ಕಟ್ಟಡ ನಿರ್ಮಿಸಲು ಪರವಾನಗಿಯಿಲ್ಲ. ಇರುವ ಮನೆಯನ್ನು ದುರಸ್ತಿ ಮಾಡಿಸಲು ಪುರಾತತ್ವ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಇನ್ನೂ 100 ಮೀಟರ್‌ದಿಂದ 300 ಮೀಟರ್‌ ಅಂತರದಲ್ಲಿ ಮನೆ ನಿರ್ಮಿಸಲು, ಅಥವಾ ದುರಸ್ತಿಗೊಳಿಸಲು ನಿಬಂಧನೆಗಳೊಂದಿಗೆ ಪರವಾನಗಿ ನೀಡಲಾಗುವುದು. ಇದು ಸರ್ಕಾರದ ಆದೇಶ’ ಎಂದು ಧಾರವಾಡ ವೃತ್ತದ ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT