ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಹೊಟ್ಟೆಪಾಡಿಗಾಗಿ ಪ್ರತಿ ವರ್ಷ ಗುಳೆ!

ಕಬ್ಬು ಕಟಾವಿಗಾಗಿ ಬಳ್ಳಾರಿಯಿಂದ ವಲಸೆ ಬರುವ ಲಂಬಾಣಿ ಕುಟುಂಬಗಳು
Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹಾವೇರಿ: ತುತ್ತಿನ ಚೀಲ ತುಂಬಿಸಿಕೊಳ್ಳುವ ಉದ್ದೇಶದಿಂದ ಲಂಬಾಣಿ ಸಮುದಾಯದ 70ರಿಂದ 80 ಕುಟುಂಬಗಳು ಬಳ್ಳಾರಿ ಜಿಲ್ಲೆಯಿಂದ ಹಾವೇರಿ ಜಿಲ್ಲೆಗೆ ಪ್ರತಿ ವರ್ಷ ಗುಳೇ ಬರುತ್ತವೆ.

ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು ತಾಲ್ಲೂಕುಗಳ ತಾಂಡಾ ನಿವಾಸಿಗಳು ‘ಕಬ್ಬು ಕಟಾವು’ ಮಾಡಲೆಂದೇ ಪ್ರತಿವರ್ಷ ಹಾವೇರಿ ತಾಲ್ಲೂಕಿನ ಸಂಗೂರ ಗ್ರಾಮಕ್ಕೆ ಚಕ್ಕಡಿಗಳಲ್ಲಿ ಕುಟುಂಬದೊಡನೆ ವಲಸೆ ಬರುತ್ತಾರೆ. ಇಲ್ಲಿಯ ಕರ್ನಾಟಕ ಸಹಕಾರ ಸಕ್ಕರೆ ಕಾರ್ಖಾನೆ ಸಮೀಪದ ಖಾಲಿ ಜಾಗದಲ್ಲಿ ತಾಡಪತ್ರಿಯ ಗುಡಿಸಲು ಹಾಕಿಕೊಂಡಿದ್ದಾರೆ.

ಶೌಚಾಲಯ, ಒಳಚರಂಡಿ, ಬೀದಿದೀಪ ಮುಂತಾದ ಮೂಲಸೌಕರ್ಯಗಳು ಇಲ್ಲವೇ ಇಲ್ಲ. ಮಕ್ಕಳು, ಮಹಿಳೆಯರು ಕೂಡ ಪುರುಷರಿಗೆ ಸರಿಸಮನಾಗಿ ದುಡಿಯುತ್ತಾರೆ. ನವೆಂಬರ್‌ನಿಂದ ಫೆಬ್ರುವರಿಯವರೆಗೆ ಕಟಾವು ಮುಗಿಸಿ ತಮ್ಮ ಊರುಗಳತ್ತ ತೆರಳುತ್ತಾರೆ.

‘ಹಾವೇರಿ ಜಿಲ್ಲೆಯಲ್ಲಿ ಹಾನಗಲ್‌, ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 13 ಸಾವಿರ ಹೆಕ್ಟೇರ್‌ಗಳಿಂದ 7 ಲಕ್ಷ ಟನ್‌ ಕಬ್ಬು ಉತ್ಪಾದನೆಯಾಗುತ್ತದೆ. ಕ‌ಬ್ಬು ಕಟಾವು ಮಾಡಲು ಇಲ್ಲಿ ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಕಾರ್ಖಾನೆಯ ‘ಗ್ಯಾಂಗ್‌ಮನ್‌’ಗಳು ಬಳ್ಳಾರಿ ಜಿಲ್ಲೆಯಿಂದ ಲಂಬಾಣಿ ಜನರನ್ನು ಕರೆಸುತ್ತಾರೆ’ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ.

‘ದೀಪಾವಳಿ ಮುಗಿದ ನಂತರ ಚಕ್ಕಡಿ, ಜೊತೆ ಎತ್ತುಗಳೊಂದಿಗೆ ಹಾವೇರಿಗೆ ಬರುತ್ತೇವೆ. ಕುಳೇನೂರು, ಸಂಗೂರ, ವೆಂಕಟಾಪುರ, ವರ್ದಿ ಮುಂತಾದ ಗ್ರಾಮಗಳಲ್ಲಿ ಕುಟುಂಬದವರೆಲ್ಲ ಸೇರಿಕೊಂಡು ಕಬ್ಬು ಕಡಿದು, ಚಕ್ಕಡಿಗೆ ತುಂಬಿ ಕಾರ್ಖಾನೆಗೆ ಸಾಗಿಸುತ್ತೇವೆ. ಒಂದು ಟನ್‌ ಕಟಾವು ಮತ್ತು ಸಾಗಣೆಗೆ ₹ 500 ಸಿಗುತ್ತದೆ. ದಿನವೂ 4 ಟನ್‌ ಗಳಷ್ಟು ಸಾಗಿಸುತ್ತೇವೆ. ನಾಲ್ಕು ತಿಂಗಳಲ್ಲಿ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ದುಡಿಯುತ್ತೇವೆ’ ಎನ್ನುತ್ತಾರೆ ಲಾಲ್ಯಾನಾಯಕ್‌.

‘ಇಲ್ಲಿಗೆ 8–10 ವರ್ಷಗಳಿಂದ ಬರುತ್ತಿದ್ದೇವೆ. ದುಡಿದ ಹಣದಿಂದ ತಾಂಡಾಗಳಲ್ಲಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಕಾಳು–ಕಡಿ ಬೆಳೆಯುತ್ತೇವೆ. ಉಳಿದದ್ದು ಮಕ್ಕಳ ವಿದ್ಯಾಭ್ಯಾಸ, ಮದುವೆ ಹಾಗೂ ಜೀವನ ನಿರ್ವಹಣೆಗೆ ಮೀಸಲು. ಮಳೆಗಾಲದಲ್ಲಿ ಸಾಗುವಳಿ ಮಾಡಿಕೊಂಡು, ಎತ್ತುಗಳಿಗೆ ಮೇವು ಸಿದ್ಧಮಾಡಿಕೊಳ್ಳುತ್ತೇವೆ. ಚಳಿಗಾಲದಲ್ಲಿ ಈ ಕಡೆಗೆ ಬರುತ್ತೇವೆ. ಕೆಲವರು ಮಂಡ್ಯ, ಮೈಸೂರು ಕಡೆ ಹೋಗುತ್ತಾರೆ’ ಎಂದು ಕೂಡ್ಲಿಗಿ ತಾಲ್ಲೂಕು ಬಂಡೆಬಸಾಪುರ ತಾಂಡಾದ ಸಂತೋಷಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT