ಸೋಮವಾರ, ನವೆಂಬರ್ 30, 2020
19 °C
ಕೋವಿಡ್‌ ಮರಣ ಪ್ರಮಾಣದಲ್ಲೂ ಕುಸಿತ: ತಪಾಸಣೆ, ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

ಹಾವೇರಿ: ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಳೆದ ಹದಿನೈದು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮರಣ ಪ್ರಮಾಣವೂ ಶೇ 1.83ಕ್ಕೆ ಇಳಿಕೆಯಾಗಿರುವುದು ಸಮಾಧಾನದ ಸಂಗತಿ.

ಗುಣಮುಖರಾದವರ ಶೇಕಡಾವಾರು ಪ್ರಮಾಣ ಜುಲೈ ತಿಂಗಳಲ್ಲಿ –ಶೇ 70, ಆಗಸ್ಟ್‌ನಲ್ಲಿ ಶೇ 61, ಸೆಪ್ಟೆಂಬರ್‌ನಲ್ಲಿ ಶೇ 78 ಹಾಗೂ ಅಕ್ಟೋಬರ್‌ನಲ್ಲಿ ಶೇ 93ಕ್ಕೆ ಏರಿಕೆಯಾಗಿದೆ. ಅದೇ ರೀತಿ ಮರಣ ಪ್ರಮಾಣ ಜುಲೈನಲ್ಲಿ ಶೇ 2.42, ಆಗಸ್ಟ್‌ನಲ್ಲಿ– ಶೇ 2.28, ಸೆಪ್ಟೆಂಬರ್‌ನಲ್ಲಿ ಶೇ 1.87 ಹಾಗೂ ಅಕ್ಟೋಬರ್‌ನಲ್ಲಿ ಶೇ 1.83ಕ್ಕೆ ಇಳಿಕೆಯಾಗಿದೆ. 

ಗರಿಷ್ಠ ದಾಖಲೆ: ಮೂರು ತಿಂಗಳ ಹಿಂದೆ ಅಂದರೆ, ಜುಲೈ‌ 21ರಂದು ಜಿಲ್ಲೆಯಲ್ಲಿ ಒಟ್ಟು 495 ಸೋಂಕಿತರಿದ್ದರು. ಒಂದೇ ತಿಂಗಳಲ್ಲಿ (ಆ.21ರಂದು) ಸೋಂಕಿತರ ಸಂಖ್ಯೆ ಬರೋಬ್ಬರಿ 2883ಕ್ಕೆ ಏರಿಕೆಯಾಗಿತು. ನಿತ್ಯ ಸೋಂಕಿತರ ಸಂಖ್ಯೆ ಶತಕ ದಾಟಿ ಕೆಲವೊಮ್ಮೆ ಇನ್ನೂರರ ಗಡಿ ತಲುಪಿದ್ದೂ ಉಂಟು. ಸೆಪ್ಟೆಂಬರ್‌ 6ರಂದು ಒಂದೇ ದಿನ 300 ಮಂದಿಗೆ ಕೋವಿಡ್‌‌ ದೃಢಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಗರಿಷ್ಠ ದಾಖಲೆ ಎನಿಸಿದೆ. 

ಟೆಸ್ಟ್‌ಗಳ ಹೆಚ್ಚಳ: ‘ಜಿಲ್ಲೆಯಲ್ಲಿ ಜುಲೈ 15ರಿಂದ ಆರ್‌ಟಿಪಿಸಿಆರ್‌ ಟೆಸ್ಟ್‌ (ಲ್ಯಾಬ್‌ ಪರೀಕ್ಷೆ) ಜತೆಗೆ
ರ‍್ಯಾಪಿಡ್‌ ಆಂಟಿಜೆನ್‌‌ ಟೆಸ್ಟ್ (RAT)‌ ಕೂಡ ಆರಂಭವಾಯಿತು. ಜೂನ್ ಮತ್ತು ಜುಲೈ ತಿಂಗಳಲ್ಲಿ ನಿತ್ಯ ಸರಾಸರಿ 200ರಿಂದ 250 ಕೋವಿಡ್‌ ತಪಾಸಣೆ ಮಾಡಲಾಗುತ್ತಿತ್ತು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕಾರಣ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನಿತ್ಯ 900ರಿಂದ 1,000 ಮಂದಿಗೆ ಕೋವಿಡ್‌ ತಪಾಸಣೆಯನ್ನು ಹೆಚ್ಚಳ ಮಾಡಲಾಯಿತು’ ಎಂದು ಕೋವಿಡ್‌ ಟೆಸ್ಟಿಂಗ್‌ ನೋಡಲ್‌ ಅಧಿಕಾರಿ ಡಾ.ನೀಲೇಶ್‌ ಹೇಳಿದರು. 

ಆಗಸ್ಟ್‌  ತಿಂಗಳಲ್ಲಿ ಸಾವಿರ ಟೆಸ್ಟ್‌ಗಳಿಗೆ ಸರಾಸರಿ 150 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಾವಿರ ಟೆಸ್ಟ್‌ಗಳಿಗೆ 55ರಿಂದ 60 ಪಾಸಿಟಿವ್‌ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದ್ದು, ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು. 

4 ಕೋವಿಡ್‌ ಸೆಂಟರ್‌ ಬಂದ್‌: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದ ಕಾರಣ, ಹಾವೇರಿ ನಗರದ ಜಿಲ್ಲಾಸ್ಪತ್ರೆ ಅಂಗಳದಲ್ಲಿ ‘ಡೆಡಿಕೇಟೆಡ್‌ ಕೋವಿಡ್‌ ಆಸ್ಪತ್ರೆ’ (ಡಿಸಿಎಚ್‌) ತೆರೆಯಲಾಗಿತ್ತು. ಜತೆಗೆ ತಾಲ್ಲೂಕು ಕೇಂದ್ರಗಳಲ್ಲಿ 6 ‘ಡೆಡಿಕೇಟೆಡ್‌ ಕೋವಿಡ್‌ ಹೆಲ್ತ್‌ ಸೆಂಟರ್’ಗಳನ್ನೂ ಆರಂಭಿಸಲಾಗಿತ್ತು. 

ಬಸಾಪುರ, ಕರ್ಜಗಿ, ದೇವರಗುಡ್ಡ, ಕಲಕೇರಿ, ಬ್ಯಾಡಗಿ, ಬಾಡಾ ಹಾಗೂ ದೂದಿಹಳ್ಳಿಯಲ್ಲಿ ಒಟ್ಟು 7 ಕೋವಿಡ್‌ ಕೇರ್‌ ಸೆಂಟರ್‌ಗಳು (ಸಿಸಿಸಿ) ‌ಕಾರ್ಯಾರಂಭಗೊಂಡಿದ್ದವು. ಸೋಂಕಿತರ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ನಾಲ್ಕು ಕೇಂದ್ರಗಳನ್ನು ಇತ್ತೀಚೆಗೆ ಬಂದ್‌ ಮಾಡಲಾಗಿದ್ದು, ಪ್ರಸ್ತುತ 3 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೇವರಾಜು ಮಾಹಿತಿ ನೀಡಿದರು. 

ಆಕ್ಸಿಜನ್ ಪೂರೈಕೆಗೆ ಕ್ರಮ: ಡಿ.ಸಿ
‘ಜಿಲ್ಲಾಸ್ಪತ್ರೆಯ ಆವರಣದಲ್ಲಿ 6 ಸಾವಿರ ಕೆ.ಜಿ. ಸಾಮರ್ಥ್ಯದ ಆಕ್ಸಿಜನ್‌ ಟ್ಯಾಂಕ್ ನಿರ್ಮಿಸಲಾಗಿದೆ ಹಾಗೂ ಕುಮಾರಪಟ್ಟಣದ ಗ್ರಾಸಿಂ ಇಂಡಸ್ಟ್ರಿಯ 30 ಟನ್‌ ಸಾಮರ್ಥ್ಯದ ಆಕ್ಸಿಜನ್‌ ಟ್ಯಾಂಕ್ ಅನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ, ಕೊರೊನಾ ಸೋಂಕಿತರಿಗೆ ಅಗತ್ಯವಾಗಿದ್ದ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲೆಗೆ ನೀಡಿದ್ದ ₹5 ಕೋಟಿ ಈಗಾಗಲೇ ಖರ್ಚಾಗಿದೆ. ಮತ್ತೆ ₹2 ಕೋಟಿ ಅನುದಾನ ಬಂದಿದೆ. ಪ್ರತಿ ತಿಂಗಳು ಕೋವಿಡ್‌ ತಪಾಸಣೆಗೆ ₹45 ಲಕ್ಷ ಮತ್ತು ಆಕ್ಸಿಜನ್‌ ಸೌಲಭ್ಯಕ್ಕೆ ₹15 ಲಕ್ಷ ವೆಚ್ಚವಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. 

**
ಕೊರೊನಾ ವಾರಿಯರ್ಸ್‌ಗಳ ಪರಿಶ್ರಮ ಮತ್ತು ಸರ್ವ ಇಲಾಖೆಗಳ ಸಹಕಾರ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಕೋವಿಡ್‌ ಸಂಖ್ಯೆ ಇಳಿಮುಖವಾಗಿದೆ
–ಡಾ.ಜಯಾನಂದ, ಪ್ರಭಾರ ಡಿಎಚ್‌ಒ, ಹಾವೇರಿ

**
ಕೋವಿಡ್‌ ನಿಯಂತ್ರಣಕ್ಕೆ ಕಾರಣಗಳು

* ಮಾಸ್ಕ್‌ ಬಳಕೆಯ ಬಗ್ಗೆ ಜಾಗೃತಿ ಮತ್ತು ದಂಡ

* ಕೋವಿಡ್‌ ಟೆಸ್ಟ್‌ಗಳ ಹೆಚ್ಚಳ 

* ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಶೀಘ್ರ ಪತ್ತೆ

* ಉತ್ತಮ ಚಿಕಿತ್ಸೆ ಮತ್ತು ಹಾಸಿಗೆಗಳ ಹೆಚ್ಚಳ

* ಕೊರೊನಾ ವಾರಿಯರ್ಸ್‌ಗಳ ನಿರಂತರ ಶ್ರಮ

* ‘ಆಯುಷ್‌ ಔಷಧಗಳ ಕಿಟ್‌’ ವಿತರಣೆ


Caption

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು