148.57 ಹೆಕ್ಟೇರ್ ಬೆಳೆ ಹಾನಿ
‘ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯಕುಮಾರ ದಾನಮ್ಮನವರ ತಿಳಿಸಿದ್ದಾರೆ. ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿರುವ ಅವರು ‘ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆಯಿಂದ ವರದಿ ಸಿದ್ಧಪಡಿಸಲಾಗಿದೆ. 102.80 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ ಬೆಳೆ ಹಾಗೂ 45.47 ಹೆಕ್ಟೇರ್ ಪ್ರದೇಶದಲ್ಲಿದ್ದ ತೋಟಗಾರಿಕೆ ಬೆಳೆ ಹಾನಿಯಾಗಿದೆ’ ಎಂದಿದ್ದಾರೆ. ‘ಬೆಳೆ ಪರಿಹಾರ ತಂತ್ರಾಂಶದಲ್ಲಿ 121.17 ಹೆಕ್ಟೇರ್ ಪ್ರದೇಶದ ಹಾನಿಗೆ ಸಂಬಂಧಪಟ್ಟ ಮಾಹಿತಿ ದಾಖಲಿಸಲಾಗಿದೆ. ಉಳಿದ 27.40 ಹೆಕ್ಟೇರ್ ಪ್ರದೇಶದ ಹಾನಿ ಮಾಹಿತಿಯನ್ನು ಕೆಲ ಕಾರಣಗಳಿಂದಾಗಿ ನಮೂದಿಸಲು ಸಾಧ್ಯವಾಗಿಲ್ಲ. ಪರಿಹಾರ ವಿತರಣೆಯೂ ಬಾಕಿಯಿದೆ’ ಎಂದು ತಿಳಿಸಿದ್ದಾರೆ.