ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಸಂತೆ: ಸೋಂಕಿನ ಚಿಂತೆ

ಮನೆ ಬಾಗಿಲಿಗೆ ದಿನಸಿ, ತರಕಾರಿ ತಲುಪಿಸುವ ವ್ಯವಸ್ಥೆಯಾಗಲಿ
Last Updated 30 ಏಪ್ರಿಲ್ 2021, 13:34 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ಜಾರಿಯಾದ ನಂತರ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನಕ್ಕೆ ಸ್ಥಳಾಂತರಗೊಂಡ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಅಂತರ ಕಾಯ್ದುಕೊಳ್ಳದೆ, ಗುಂಪುಗೂಡಿ ಖರೀದಿ ಮಾಡುತ್ತಿರುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ.

ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಕಿರಿದಾಗಿರುವುದರಿಂದ ಅಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಷ್ಟ ಎಂದು ಮನಗಂಡ ಜಿಲ್ಲಾಡಳಿತ ಮತ್ತು ನಗರಸಭೆ, ವಿಶಾಲವಾಗಿರುವ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನಕ್ಕೆ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿತು.

ವ್ಯಾಪಾರಿಗಳು ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲಿ ಎಂಬ ಉದ್ದೇಶದಿಂದ ನಗರಸಭೆ ವತಿಯಿಂದ ಬಿಳಿ ಬಣ್ಣದ ಚೌಕಗಳನ್ನು ಬರೆಸಲಾಯಿತು. ವ್ಯಾಪಾರಿಗಳು ಆ ಚೌಕದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರೂ, ಗ್ರಾಹಕರು ಅಂತರ ಕಾಯ್ದುಕೊಳ್ಳದೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತವೆ ಎಂಬುದು ಪ್ರಜ್ಞಾವಂತ ನಾಗರಿಕರ ಆತಂಕವಾಗಿದೆ.

ಮುನ್ಸಿಪಲ್‌ ಹೈಸ್ಕೂಲ್‌ ಮೈದಾನ ಮತ್ತು ಡಿ.ಸಿ.ಕಚೇರಿ ರಸ್ತೆಯಲ್ಲಿ ಬೆಳಿಗ್ಗೆ 8ರಿಂದ 10ರವರೆಗೆ ಭಾರಿ ಸಂಚಾರ ದಟ್ಟಣೆಯಾಗುತ್ತದೆ. ಅಲ್ಲಿ ಸುಗಮವಾಗಿ ವಾಹನಗಳು ಚಲಿಸಲು ತೊಡಕಾಗುತ್ತಿದೆ. ಪೊಲೀಸರು ಗುಂಪು ಚದುರಿಸಲು ಹರಸಾಹಸ ಪಡುತ್ತಿದ್ದಾರೆ.

‘ಗ್ರಾಹಕರ ಮನೆ ಬಾಗಿಲಿಗೆ ತರಕಾರಿ ಮತ್ತು ದಿನಸಿ ತಲುಪಿಸುವ ವ್ಯವಸ್ಥೆಯನ್ನು ನಗರಸಭೆ ಮಾಡಬೇಕು. ಅದಕ್ಕಾಗಿ ಎಲ್ಲ ಬಡಾವಣೆಗಳಿಗೆ ದಿನಸಿ ಮತ್ತು ತರಕಾರಿ ಗಾಡಿಗಳನ್ನು ನಿಯೋಜಿಸಿ, ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ನೂರಾರು ವ್ಯಾಪಾರಿಗಳು ಮತ್ತು ಸಾವಿರಾರು ಗ್ರಾಹಕರು ಒಂದೇ ಸ್ಥಳದಲ್ಲಿ ಗುಂಪುಗೂಡುವುದನ್ನು ತಪ್ಪಿಸಬಹುದು’ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

‘ಕೋವಿಡ್‌ ಒಂದನೇ ಅಲೆ ಇದ್ದಾಗ ಬಡಾವಣೆಗಳಲ್ಲಿ ತಳ್ಳುವ ಗಾಡಿಗಳಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಮನೆ ಬಾಗಿಲಿಗೆ ಬರುವ ತರಕಾರಿಯನ್ನು ಜನರು ಅಂತರ ಕಾಯ್ದುಕೊಂಡು ಖರೀದಿಸುತ್ತಿದ್ದರು. ಈ ಬಾರಿಯೂ ಬಡಾವಣೆಗಳಲ್ಲಿ ತಳ್ಳುವ ಗಾಡಿ ವ್ಯಾಪಾರಕ್ಕೆ ಅವಕಾಶ ನೀಡಬೇಕು’ ಎಂದುಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಕೋರಿಶೆಟ್ಟರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT