ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಬದುಕಿ: ಎಸ್.ಎಚ್.ರೇಣುಕಾದೇವಿ

Last Updated 10 ಜನವರಿ 2020, 14:59 IST
ಅಕ್ಷರ ಗಾತ್ರ

ಹಾವೇರಿ: ‘ಎಚ್‌ಐವಿ ಸೋಂಕಿತರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು, ಆತ್ಮಸ್ಥೈರ್ಯದಿಂದ ಬದುಕಬೇಕು. ಭೂಮಿ ಮೇಲೆ ಎಲ್ಲರಿಗೂ ಸಮಾನವಾಗಿ ಜೀವಿಸುವ ಅವಕಾಶವಿದೆ’ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್.ಎಚ್.ರೇಣುಕಾದೇವಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಶುಕ್ರವಾರ ನಡೆದ ಎಚ್ಐವಿಮತ್ತು ಏಡ್ಸ್ ಕಾಯ್ದೆ 2017ರ ರಾಜ್ಯ ನಿಯಮಗಳ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಅಲ್ಪಾಯುಷಿಗಳು ಎಂಬ ನಕಾರಾತ್ಮಕ ಭಾವನೆ ಬಿಟ್ಟು, ಜೀವನದಲ್ಲಿ ಸಕಾರಾತ್ಮಕ ಯೋಚನೆಗಳನ್ನು ಅಳವಡಿಸಿಕೊಳ್ಳಬೇಕು. ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆತ್ಮ ವಿಶ್ವಾಸದಿಂದ ಬದುಕಬೇಕು. ಎಲ್ಲರೊಂದಿಗೆ ಒಂದಾಗಿ ಜೀವನವನ್ನು ನಡೆಸಬೇಕು ಎಂದರು.

ಜೀವನದ ಬಗ್ಗೆ ಸಂಕಲ್ಪ ಮಾಡಿದರೆ ಹೆಚ್ಚು ಸಾಧನೆಯನ್ನು ಮಾಡಬಹುದು. ಆ ನಿಟ್ಟಿನಲ್ಲಿ ಮುಂದಾಗಬೇಕು. ಸಮಾಜದಲ್ಲಿ ತಾವೂ ಒಂದು ಭಾಗವಾಗಿದ್ದೀರಿ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸೋಂಕಿತರಲ್ಲಿ ಸಮಸ್ಯೆ ಕಂಡುಬಂದರೆ ಸರಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಂ ದೊಡ್ಡಮನಿ ಮಾತನಾಡಿ, ಸೋಂಕಿತರು ಎಂಬ ಭಾವನೆ ದೂರ ಮಾಡುವ ಉದ್ದೇಶದಿಂದ ಸರ್ಕಾರ ಎನ್‌ಜಿಓಗಳ ಮೂಲಕ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಒಳ್ಳೆಯ ಹವ್ಯಾಸಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಮಾತನಾಡಿ, ಎಚ್ಐವಿಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಇದೊಂದು ಮಹಾಮಾರಿಯಾಗಿ ಹಬ್ಬುತ್ತಿದೆ. ಇವರನ್ನು ಸಮಾಜ ಸಾಮಾನ್ಯರಂತೆ ಕಾಣಬೇಕು. ಜೀವನದಲ್ಲಿ ಹಿಂಜರಿಕೆ ಸ್ವಭಾವವನ್ನು ಬಿಟ್ಟು ಮುಖ್ಯ ವಾಹಿನಿಗೆ ಬರಬೇಕು. ಕೀಳಾಗಿ ಕಾಣುವವರ ವಿರುದ್ಧ ಧ್ವನಿ ಎತ್ತಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಧೈರ್ಯದಿಂದ ಬಾಳಬೇಕು ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವಕೀಲರಾದ ಕೆ.ಎಲ್ ಅಂಗರಗಟ್ಟಿ ಅವರು ಎಚ್.ಐ.ವಿ ಮತ್ತು ಏಡ್ಸ್ ಕಾಯ್ದೆ 2017ರ ರಾಜ್ಯ ನಿಯಮಗಳ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಶ್ರೀವಿದ್ಯಾ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಪಿ.ಎಂ. ಬೆನ್ನೂರ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್‌. ನೀಲೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT