ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಿಡಿಭಾಗ ತಯಾರಿಕಾ ಘಟಕಗಳ ಮೇಲೂ ಕರಿನೆರಳು

ಶೇ 60ರಷ್ಟು ಉತ್ಪಾದನೆ ಸ್ಥಗಿತ, ಶೇ 50ರಷ್ಟು ಉದ್ಯೋಗ ಕಡಿತ ಮಾಡಿದ ಕಾರ್ಖಾನೆಗಳು
Last Updated 26 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಶಿವಮೊಗ್ಗ:ದೇಶ, ವಿದೇಶಗಳ ಹೆಸರಾಂತ ಕಂಪನಿಗಳ ವಾಹನಗಳಿಗೆ ಅಗತ್ಯವಿರುವ ಬಿಡಿಭಾಗಗಳು ಪೂರೈಸುವ ಶಿವಮೊಗ್ಗದ ಹಲವು ಕೈಗಾರಿಕಾ ಘಟಕಗಳು ಶೇ 60ರಷ್ಟು ಉತ್ಪಾದನೆ ಸ್ಥಗಿತಗೊಳಿಸಿವೆ. ಒಂದು ತಿಂಗಳ ಅವಧಿಯಲ್ಲಿ ಶೇ 50ರಷ್ಟು ಸಿಬ್ಬಂದಿ ಮನೆಗೆ ಕಳುಹಿಸಿವೆ.

ಬೆಂಗಳೂರು, ಬೆಳಗಾವಿ ಹೊರತುಪಡಿಸಿದರೆ ವಾಹನಗಳ ಬಿಡಿಭಾಗಗಳ ತಯಾರಿಕೆಯಲ್ಲಿ ಶಿವಮೊಗ್ಗ ಮುಂಚೂಣಿಯಲ್ಲಿದೆ. ಹೆಸರಾಂತ ಕಂಪನಿಗಳಾದ ಅಶೋಕ ಲೇಲ್ಯಾಂಡ್‌, ಟಾಟಾ ಮೋಟರ್ಸ್‌ಗಳ ಲಾರಿ, ಬಸ್‌ಗಳು, ಹಿರೋ ಮೋಟಾರ್ಸ್ ಕಂಪನಿಗಳ ವಾಹನಗಳಿಗೂ ಜಿಲ್ಲೆಯಿಂದಲೇ ಬಿಡಿಭಾಗಗಳನ್ನು ಪೂರೈಸಲಾಗುತ್ತದೆ.

ಮಾಚೇನಹಳ್ಳಿ, ಸಾಗರ ರಸ್ತೆ, ಸವಳಂಗ ರಸ್ತೆಯಲ್ಲಿರುವಪರ್ಫೆಕ್ಟ್‌ ಅಲಯಾನ್ಸ್, ಶಾಂತಲಾ, ವಿಶ್ವೇಶ್ವರಯ್ಯ, ಟೆಕ್ನೋರಿಂಗ್ಸ್, ಪಿರಯ್‌ಲೈಟ್‌, ಮಲ್ನಾಡ್, ಈಶ್ವರಿ, ಪ್ರಗತಿ ಫೌಂಡ್ರಿ, ವಿಜಯ್‌ ಟೆಕ್ನೋಕ್ರಾಟ್‌ ದಿನದ 24 ಗಂಟೆಗಳೂ ಹೆಚ್ಚು ಬಿಡಿಭಾಗಗಳ ತಯಾರಿಕೆಯಲ್ಲಿ ನಿರತವಾಗಿದ್ದವು.ಕಲ್ಚ್ ಪ್ಲೇಟ್‌, ಫೇಸ್‌ ಪ್ಲೇಟ್‌, ಲೈನರ್ಸ್‌ಗಳನ್ನೂ ಇಲ್ಲೇ ಸಿದ್ಧಪಡಿಸಲಾಗುತ್ತದೆ.

ಎರಡು ತಿಂಗಳಿನಿಂದ ಬೇಡಿಕೆ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ಬಹುತೇಕ ಕಾರ್ಖಾನೆಗಳು ಉದ್ಪಾದನೆ ಕಡಿತ ಮಾಡಿವೆ. ಟೆಕ್ನೋರಿಂಗ್ ಸಂಸ್ಥೆ ಶೇ 70ರಷ್ಟು ಉತ್ಪಾದನೆ ಸ್ಥಗಿತಗೊಳಿಸಿದೆ. ಶೇ 50ರಷ್ಟು ಸಿಬ್ಬಂದಿಗೆ ರಜೆ ನೀಡಿದೆ. ಒಂದು ವಾರ ಲೇ ಆಫ್ ಘೋಷಿಸಿತ್ತು. ಪರ್ಫೆಕ್ಟ್‌ ಅಲಯನ್ಸ್ 20 ದಿನಗಳು ಲೇ ಆಫ್ ಆಗಿತ್ತು. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 4,500 ಕಾರ್ಮಿಕರು ಸೇರಿ 10 ಸಾವಿರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಒಂದು ತಿಂಗಳಲ್ಲೇ ಸಾವಿರಾರುಜನರು ಕೆಲಸ ಕಳೆದುಕೊಂಡಿದ್ದಾರೆ.

‘ಬಿಎಸ್‌ 4 ಎಂಜಿನ್‌ ಇರುವ ವಾಹನಗಳನ್ನು ಮಾರ್ಚ್ 31ರ ನಂತರ ನೋಂದಣಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹಾಗಾಗಿ, ಆ ಮಾದರಿ ವಾಹನಗಳ ಮಾರಾಟ ಸಂಪೂರ್ಣ ಕುಸಿದಿದೆ. ವಾಹನ ತಯಾರಿಕಾ ಕಂಪನಿಗಳಿಗೆಬೇಡಿಕೆ ಸಲ್ಲಿಸುತ್ತಿಲ್ಲ. ದಿಢೀರ್ ಬೇಡಿಕೆ ಕುಸಿದ ಪರಿಣಾಮ ಇಂತಹ ಸ್ಥಿತಿ ತಲೆ ದೋರಿದೆ. ನಮ್ಮ ಕಾರ್ಖಾನೆಯಲ್ಲಿ 600 ಕಾರ್ಮಿಕರು ಇದ್ದಾರೆ. ಶೇ 70ರಷ್ಟು ಉತ್ಪಾದನೆ ನಿಲ್ಲಿಸಿದ್ದೇವೆ. ಶೇ 50ರಷ್ಟು ಉದ್ಯೋಗ ಕಡಿತ ಮಾಡಿದ್ದೇವೆ’ ಎಂದು ವಿವರ ನೀಡುತ್ತಾರೆ ಟೆಕ್ನೋರಿಂಗ್ಸ್ ಪಾಲುದಾರ ಭೂಪಾಳಂ ಶರತ್.

ಕಾರುಗಳ ಮಾರಾಟ ಶೇ 80ರಷ್ಟು ಕುಸಿತ: ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಅದಕ್ಕಾಗಿ ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ವಾಯು ಮಾಲಿನ್ಯ ಕಡಿಮೆ ಮಾಡಲು ಬಿಎಸ್ 4 ಎಂಜಿನ್ ಬದಲಿಗೆ ಬಿಎಸ್‌ 6 ಎಂಜಿನ್ ಕಡ್ಡಾಯಗೊಳಿಸಿದೆ. ಡೀಸೆಲ್‌, ಪೆಟ್ರೋಲ್‌ ವಾಹನಗಳ ಬಳಕೆ ನಿಲ್ಲಿಸಲಾಗುತ್ತದೆ ಎಂಬ ವದಂತಿ ಹರಿದಾಡುತ್ತಿರುವ ಕಾರಣ ಕಾರುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟುಹಾಕುತ್ತಿದ್ದಾರೆ. ಹಾಗಾಗಿ,
ಶಿವಮೊಗ್ಗದಲ್ಲಿ ಎಲ್ಲ ಕಂಪನಿಗಳ ಕಾರು ಮಾರಾಟ ಶೇ 80ರಷ್ಟು ಕುಸಿತ ಕಂಡಿದೆ. ಷೋ ರೂಂಗಳ ಮಾಲೀಕರು ಹೊಸ ವಾಹನ ತರಿಸಲು ಹಿಂದೇಟು ಹಾಕುತ್ತಿದ್ದಾರೆ.

‘ವಾಹನಗಳಿಗೆ ಬಿಎಸ್ 6 ಎಂಜಿನ್‌ ಅಳವಡಿಕೆ, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಸಕಾಲಿಕ. ಆದರೆ, ಬದಲಾವಣೆಗೆ ಹೊಂದಿಕೊಳ್ಳಲು ಸಮಯ ಅಗತ್ಯ. ಹಳೇ ವಾಹನಗಳ ನೋಂದಣಿ ಅವಧಿ ವಿಸ್ತರಿಸಿದ್ದರೆ ಇರುವ ಬೇಡಿಕೆ ಪೂರೈಸುತ್ತಲೇ ಹೊಸ ಬಿಡಿಭಾಗಗಳ ಉತ್ಪಾದನೆಗೂ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಆಗ ಉತ್ಪಾದನೆ ಸ್ಥಗಿತ, ಉದ್ಯೋಗ ಕಡಿತದ ಸಮಸ್ಯೆ ಕಾಡುತ್ತಿರಲಿಲ್ಲ. ಶಿವಮೊಗ್ಗದಲ್ಲಿ 250 ಕೈಗಾರಿಕೆಗಳಿದ್ದರೆ ಅವುಗಳ ಮೇಲೆ ಅವಲಂಬಿತವಾಗಿ 1 ಸಾವಿರ ಘಟಕಗಳಿವೆ. ಅವರೆಲ್ಲರಿಗೂ ತೊಂದರೆಯಾಗುತ್ತದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಿಯೋಗ ತೆರಳಿಮಾತುಕತೆ ನಡೆಸಬೇಕಿದೆ’ ಎನ್ನುತ್ತಾರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್.ಅರುಣ್.

ಮರುಪಾವತಿಗೆ ಬ್ಯಾಂಕ್‌ಗಳ ಒತ್ತಡ

ಒಂದು ಕಡೆ ಉತ್ಪಾದನೆ ಸ್ಥಗಿತಗೊಂಡು ಕಾರ್ಖಾನೆಗಳು ಬಾಗಿಲು ಮುಚ್ಚುವ ಹಂತ ತಲುಪಿದ್ದರೆ ಮತ್ತೊಂದು ಕಡೆ ಬ್ಯಾಂಕ್‌ಗಳು ತಾವು ನೀಡಿರುವ ಸಾಲ ಮರುಪಾವತಿಗೆ ಮಾಲೀಕರ ಮೇಲೆ ಒತ್ತಡ ಹಾಕುತ್ತಿವೆ. ಇದು ಕೈಗಾರಿಕಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಉದ್ಯಮಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT