ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಬಿರುಗಾಳಿ ಬೀಸಿದ ಪರಿಣಾಮ ಲ್ಯಾಂಡ್ ಆಗದೇ ವಾಪಸಾದ ವಿಮಾನ!

Published 2 ಮಾರ್ಚ್ 2024, 5:45 IST
Last Updated 2 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಕಲಬುರಗಿ: ಗುರುವಾರ ರಾತ್ರಿ ಬೆಂಗಳೂರಿನಿಂದ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಬಸವರಾಜ ಮತ್ತಿಮಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ ಸೇರಿದಂತೆ 40 ಪ್ರಯಾಣಿಕರನ್ನು ಹೊತ್ತು ನಗರಕ್ಕೆ ಬಂದಿದ್ದ ಅಲಯನ್ಸ್ ಏರ್ ವಿಮಾನವು ಬಿರುಗಾಳಿ ಬೀಸುತ್ತಿದ್ದುದರಿಂದ ಲ್ಯಾಂಡ್ ಆಗದೇ ವಾಪಸಾಗಿದೆ.

ಕಳೆದ ಗುರುವಾರವಷ್ಟೇ ಅಲಯನ್ಸ್ ಏರ್ ಸಂಸ್ಥೆಯು ತನ್ನ ಸೇವೆಯನ್ನು ಪ್ರಾರಂಭಿಸಿತ್ತು. ಗುರುವಾರ ಸಂಜೆ ಅಲ್ಲಿಂದ ಹೊರಟ ವಿಮಾನ ನಿಲ್ದಾಣಕ್ಕೆ ಸೇಡಂ ಕಡೆಯಿಂದ ಲ್ಯಾಂಡ್ ಆಗಲು ಪ್ರಯತ್ನಿಸಿತು. ಆದರೆ, ಭಾರಿ ಬಿರುಗಾಳಿ ಬೀಸುತ್ತಿದ್ದುದರಿಂದ ಲ್ಯಾಂಡಿಂಗ್ ಸಾಧ್ಯವಾಗದೇ ಕಾಳಗಿ ತಾಲ್ಲೂಕಿನ ರಟಕಲ್‌ ತನಕ ಹೋಗಿ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಯತ್ನಿಸಿತು. ಆದರೆ, ಭಾರಿ ಗಾಳಿ ಬೀಸುತ್ತಿದ್ದುದರಿಂದ ರನ್‌ವೇ ಕೇವಲ 30 ಅಡಿ ಸಮೀಪದಲ್ಲಿದ್ದಾಗಲೂ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ ಎಂಬುದಾಗಿ ಪೈಲಟ್ ಹೇಳಿದರು ಎಂದು ಶರಣಕುಮಾರ್ ಮೋದಿ ಘಟನೆಯನ್ನು ನೆನಪಿಸಿಕೊಂಡರು. 

ನಂತರ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಕೇಳಲಾಯಿತು. ಆದರೆ, ಅಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ಸಿಗಲಿಲ್ಲ. ಮೂರನೇ ಬಾರಿ ಪ್ರಯತ್ನದಲ್ಲಿಯೂ ವಿಫಲವಾದರೆ ವಿಮಾನದಲ್ಲಿನ ಇಂಧನ ಕಡಿಮೆಯಾಗಿ ಬೆಂಗಳೂರು ತಲುಪಲು ಸಾಕಾಗುವುದಿಲ್ಲ ಎಂದು ಅಂದಾಜಿಸಿದ ಪೈಲಟ್ ನೇರವಾಗಿ ಬೆಂಗಳೂರಿಗೆ ಕೊಂಡೊಯ್ದರು. ರಾತ್ರಿ 11ಕ್ಕೆ ಬೆಂಗಳೂರು ತಲುಪಿತು. ಬೇರೆ ಟಿಕೆಟ್ ಖರೀದಿಸಿ ಸ್ಟಾರ್ ಏರ್ ವಿಮಾನದ ಮೂಲಕ ಶುಕ್ರವಾರ ಕಲಬುರಗಿಗೆ ಬಂದೆವು ಎಂದು ಶರಣಕುಮಾರ್ ಮಾಹಿತಿ ನೀಡಿದರು. 

ಗುಲಬರ್ಗಾ ವಿಶ್ವವಿದ್ಯಾಲಯದ ಕಡೆಯಿಂದ ಬ್ರಹ್ಮಕುಮಾರಿಸ್ ಸಂಸ್ಥೆಯ ಮೇಲಿನಿಂದ ವಿಮಾನಗಳು ಲ್ಯಾಂಡ್ ಆಗುತ್ತವೆ. ಆದರೆ, ಬ್ರಹ್ಮಕುಮಾರಿಸ್ ಆವರಣದಲ್ಲಿ ಬೆಟ್ಟ ಹಾಗೂ ಕಾಂಪೌಂಡ್ ಇರುವುದರಿಂದ, ರಾತ್ರಿ ವೇಳೆ ಲ್ಯಾಂಡಿಂಗ್‌ಗೆ ಅನುಮತಿ ನೀಡಿಲ್ಲ. ಹೀಗಾಗಿ, ಸೇಡಂ ಕಡೆಯಿಂದಲೇ ಲ್ಯಾಂಡಿಂಗ್ ಮಾಡಲು ಅವಕಾಶ ನೀಡಲಾಗಿದೆ. ನೈಟ್ ಲ್ಯಾಂಡಿಂಗ್‌ಗೆ ಅಗತ್ಯವಾದ ಉಪಕರಣಗಳನ್ನು ಅಳವಡಿಸಿದ್ದರೂ ವಿಮಾನ ಲ್ಯಾಂಡ್ ಆಗದೇ ಇರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. 

ಅಲಯನ್ಸ್ ಏರ್ ವಿಮಾನ ಲ್ಯಾಂಡಿಂಗ್ ವೇಳೆ ಬಿರುಗಾಳಿ ಬೀಸಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಪೈಲಟ್ ವಿಮಾನವನ್ನು ಮರಳಿ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.
–ಚಿಲಕಾ ಮಹೇಶ್, ವಿಮಾನ ನಿಲ್ದಾಣ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT