ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನ ಟೀಕೆಯೇ ಹಾಸ್ಯಾಸ್ಪದ; ಡಾ.ಉಮೇಶ ಜಾಧವ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ ಜಾಧವ ವಾಗ್ದಾಳಿ
Published 8 ಏಪ್ರಿಲ್ 2024, 4:44 IST
Last Updated 8 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಕಲಬುರಗಿ: ‘ಕಾಂಗ್ರೆಸ್ಸಿನ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಟೀಕಿಸಿದರು.

ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಡದಾಳ ಮಹಾಶಕ್ತಿ ಕೇಂದ್ರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನಿರುದ್ಯೋಗ ನಿವಾರಣೆಗಾಗಿ ಜವಳಿ ಪಾರ್ಕ್ ತಂದಿದ್ದು, ನೀಲೂರು ಕಳೆ ಸೇತುವೆ ನಿರ್ಮಿಸಿರುವುದು ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಎನಿಸಿಲ್ಲ. . ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ರೈಲ್ವೆ ಖಾತೆಯ ಸಚಿವರಾಗಿದ್ದರೂ ಒಂದು ರೈಲು ಕೊಡಲಾಗದ ದುಃಸ್ಥಿತಿ ಕಾಂಗ್ರೆಸ್ಸಿನದು’ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಮೋದಿಯವರ ಜನಪ್ರಿಯತೆ ಮತ್ತು ರಾಷ್ಟ್ರ ರಕ್ಷಣೆಯ ಕಾರ್ಯವನ್ನು ನೋಡಿ ದೇವೇಗೌಡರೂ ಬೆಂಬಲ ನೀಡಿದ್ದಾರೆ. ಇದು ಮೋದಿ ಅವರ ಜನಪ್ರಿಯತೆಗೆ ಸಾಕ್ಷಿ’ ಎಂದರು.

ಬಿಜೆಪಿ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ, ಯುವ ಮುಖಂಡ ರಿತೇಶ ಗುತ್ತೇದಾರ, ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಧರ ಮಂಗಳೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೀರಣ್ಣ ಪೂಜಾರಿ ತಲ್ಲೂರು, ಪಕ್ಷದ ಮುಖಂಡರಾದ ಅಶೋಕ ಬಗಲಿ, ಶಂಕರಪ್ಪ ಗುಡಿ, ಮಹಾಂತೇಶ ಹುಡಗಿ, ಇಂದಿರಾ ಶಕ್ತಿ, ತಾಲ್ಲೂಕು ಸಂಚಾಲಕರಾದ ಸಿದ್ಧಾಜಿ ಪಾಟೀಲ, ಶಾಂತಪ್ಪ ಕೋಡ್ಲಿ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಉಮೇಶ ಜಾಧವ ಅವರು ಬಡದಾಳ ತೇರಿನ ಮಠದ ಚನ್ನಮಲ್ಲ ಶಿವಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

‘ಜೆಡಿಎಸ್ ಮತ ಬಿಜೆಪಿಗೆ’  

ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ ಗುತ್ತೇದಾರ ಮಾತನಾಡಿ ‘ಭೀಮಾ ತೀರದಲ್ಲಿ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಾಗಿ 13 ದಿನಗಳ ಕಾಲ ಶಿವಕುಮಾರ ನಾಟಿಕಾರ ಉಪವಾಸ ಸತ್ಯಾಗ್ರಹ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗಿಯೂ ನೋಡಲಿಲ್ಲ. ಇವರಿಂದ ಯಾವ ಅಭಿವೃದ್ಧಿಯನ್ನು ಜನತೆ ನಿರೀಕ್ಷಿಸಬಹುದು?’ ಎಂದು ಪ್ರಶ್ನಿಸಿದರು. ‘ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ಜಿಲ್ಲೆಯ ಜೆಡಿಎಸ್‌ನ 2.50 ಲಕ್ಷದಷ್ಟು ಮತಗಳನ್ನು ನೇರವಾಗಿ ಪಡೆಯಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT