ಭಾನುವಾರ, ಜೂನ್ 7, 2020
22 °C
ಆಟವಾಡುವ ವಯಸ್ಸಲ್ಲಿ ಸಂಸಾರ ಭಾರ ಹೊತ್ತ ಎಳೆಯ ಹೆಗಲು

ಚಿಂಚೋಳಿ | ಅಜ್ಜಿ, ತಂಗಿ ಸಾಕಲು ಬಾಲಕ ಭಿಕ್ಷಾಟನೆ, ಶಾಲೆಯಿಂದ ದೂರ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಕಾಯಿಲೆಯಿಂದ ನರಳುತ್ತಿರುವ ಅಜ್ಜಿ ಮತ್ತು ಮಾತು ಬಾರದ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ, 13 ವರ್ಷದ ಈ ಪೋರನ ಹೆಗಲೇರಿದೆ. ಇದಕ್ಕಾಗಿ ಬಾಲಕ ಭಿಕ್ಷಾಟನೆಗೆ ಇಳಿದಿದ್ದಾನೆ. ಆಟವಾಡಿ, ಪಾಠ ಓದಿಕೊಂಡು ನಲಿಯಬೇಕಾದ ವಯಸ್ಸಲ್ಲಿ, ಬಲಿಯದ ತೋಳುಗಳು ಸಂಸಾರ ಭಾರ ಹೊತ್ತಿವೆ!

ತಾಲ್ಲೂಕಿನ ಲಿಂಗಾನಗರ ತಾಂಡಾದ ಬಾಲಕ ರಾಹುಲ ವಿಠಲ ನಾಯಕ್‌ ಭಿಕ್ಷೆ ಬೇಡಿ, 77 ವರ್ಷದ ಅಜ್ಜಿ ಹಸಲಿಬಾಯಿ ಹಣಮು ನಾಯಕ್, 10 ವರ್ಷದ ತಂಗಿ ಕುಸುಮಾ ಅವರನ್ನು ಸಲಹುತ್ತಿದ್ದಾನೆ.

ಕಾಯಿಲೆ ಬಿದ್ದ ಅಜ್ಜಿಯ ದೈನಂದಿನ ಕ್ರಿಯೆಗಳಿಗೂ, ಶುಚಿತ್ವಕ್ಕೂ ಇದೇ ಬಾಲಕ ಕೈ ಜೋಡಿಸಬೇಕು. ಯಾವತ್ತು ಅನ್ನದ ಭಿಕ್ಷೆ ಸಿಗುವುದಿಲ್ಲವೋ ಅವತ್ತು ತಾನೇ ಅನ್ನ ಮಾಡಬೇಕು. ಪಾತ್ರೆ ತೊಳೆಯಲು, ಬಟ್ಟೆ ತೊಳೆಯಲು ತಂಗಿಯ ಪುಟ್ಟ ಕೈಗಳು ನೆರವಿಗೆ ಮುಂದಾಗುತ್ತವೆ.

ಐದಾರು ತಿಂಗಳಿಂದ ಆಟ– ಪಾಠದಿಂದ ದೂರ ಉಳಿದ ಬಾಲಕ, ಕೇವಲ ರೋಗಿಗಳ ಚಾಕರಿಯಲ್ಲೇ ನರಳುತ್ತಿದ್ದಾನೆ. ಅಕ್ಕಪಕ್ಕದ ನಿವಾಸಿಗಳು ಕಂಡು ಮಮ್ಮಲ ಮರಗುತ್ತಾರೆ. ಕೆಲವರು ತಿನ್ನಲು ಅನ್ನ ಕೊಟ್ಟು ಹಸಿವು ಇಂಗಿಸಿದ್ದಾರೆ. ಆದರೆ, ಸಹಾಯಕ್ಕೆ ಚಾಚಿದ ಕೈಗಳು ಕಡಿಮೆ.

ಕರುಣಾಜನಕ ಕಥೆ: ಮೂರು ವರ್ಷದ ಹಿಂದೆ ತಂದೆ ವಿಠಲ ನಾಯಕ, 5 ತಿಂಗಳ ಹಿಂದೆ ತಾಯಿ ಕಮಲಿಬಾಯಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಜ್ಜ ಹಣಮು ನಾಯಕ್ 5 ವರ್ಷದ ಹಿಂದೆ ಮೃತಪಟ್ಟಿದ್ದಾರೆ.

ಅಜ್ಜಿ ಹಸಲಿಬಾಯಿ ಹಣಮು ನಾಯಕ್ 4 ವರ್ಷದಿಂದ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರೆ, ತಂಗಿ ಕುಸುಮಾಗೆ ಮಾತು ಬರುವುದಿಲ್ಲ. ಇವರಿಗಾಗಿ ಬಾಲಕ ರಾಹುಲ ಅಂಗನವಾಡಿ, ಸರ್ಕಾರಿ ಶಾಲೆ, ರೇಷನ್ ಅಂಗಡಿ ಮೊದಲಾದ ಕಡೆ ಭಿಕ್ಷೆ ಬೇಡುತ್ತಾನೆ.

‘ಎರಡು ಕೊಠಡಿಗಳ ಪುಟ್ಟ ಸೂರೇ ಅವರ ಆಸ್ತಿ. ಜಮೀನು ಇಲ್ಲ. ಅಜ್ಜಿಗೆ ವಿಧವಾ ವೇತನ ಬರುತ್ತಿದೆ. ಆದರೆ, ಪಡಿತರ ಚೀಟಿ ಇಲ್ಲ. ತೆಲಂಗಾಣದಲ್ಲಿ ಸಂಬಂಧಿಕರಿದ್ದಾರೆ. ಆಗಾಗ್ಗೆ ಬಂದು ದವಸಧಾನ್ಯ ನೀಡುತ್ತಾರೆ’ ಎಂದು ತಾಂಡಾದ ಮುಖಂಡರಾದ ಸುರೇಶ ಜಾಧವ ಮತ್ತು ಹರೀಶ್ಚಂದ್ರ ಚವ್ಹಾಣ ಹೇಳುತ್ತಾರೆ.

ತಾಯಿ ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ನೋಡಿಕೊಳ್ಳಲು ಬಾಲಕ ಶಾಲೆ ಬಿಟ್ಟ. ಆಗ 6ನೇ ತರಗತಿಯಲ್ಲಿದ್ದ ರಾಹುಲ.

‘ಶಾಲೆಗೆ ಹೋಗುವುದು ನನಗಿಷ್ಟ. ಶಾಲೆಗೆ ಹೋದರೆ ಅಜ್ಜಿ, ತಂಗಿಯನ್ನು ನೋಡಿಕೊಳ್ಳುವವರು ಯಾರು?’ ಎಂದು ಬಾಲಕ ಪ್ರಶ್ನಿಸುತ್ತಾನೆ.

ನೆರವು ನೀಡಲು ಇಚ್ಛಿಸುವವರು ಈ ಬಾಲಕನನ್ನು ಖುದ್ದಾಗಿ ಭೇಟಿ ಮಾಡಬಹುದು.

ಮಾಹಿತಿಗಾಗಿ, ಸುರೇಶ ಜಾಧವ (9640372946) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು