ಸೋಮವಾರ, ಆಗಸ್ಟ್ 8, 2022
23 °C
ಚಾರಣದ ಜತೆಗೆ ಜ್ಞಾನದ ಹೂರಣ...

ಚಂದ್ರಂಪಳ್ಳಿ ಸೀಮೆಯ ವನ್ಯಜೀವಿ ಧಾಮ ಮಾರ್ಗದಲ್ಲಿ ಮಾಹಿತಿ ಫಲಕ, ಸೆಲ್ಫಿ ವಲಯ!

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮವಾಗಿರುವ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಬಳಿಯ ವನ್ಯಧಾಮ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

134 ಚದರ ಕಿ.ಮೀ ವಿಸ್ತೀರ್ಣದ ವನ್ಯಧಾಮದಲ್ಲಿ ಅರಣ್ಯ ಅಧಿಕಾರಿಗಳು ನಾಲ್ಕು ಚಾರಣದ ಮಾರ್ಗಗಳನ್ನು ಗುರುತಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪ್ರೇಕ್ಷಣೀಯ ತಾಣವಾಗಿರುವ ಚಂದ್ರಂಪಳ್ಳಿಯಿಂದ ಜಲಾಶಯದಿಂದ ಗೊಟ್ಟಮಗೊಟ್ಟದವರೆಗೆ ಚಾರಣದ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಿದೆ.

ಸುಮಾರು 9 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಎರಡು ಎತ್ತರದ ಪರ್ವತಗಳನ್ನು ಹತ್ತುವ ಮತ್ತು ಇಳಿಯುವ ಜತೆಗೆ ಗಿಡಮರಗಳ ಬಳ್ಳಿಗಳಿಂದ ಸೂಸುವ ಪರಿಮಳ ಮತ್ತು ಜುಳು ಜುಳು ಹರಿಯುವ ಕೊತ್ವಾಲಾ ನಾಲಾದ ಅನುಭೂತಿ ಪಡೆಯಬಹುದಾಗಿದೆ.

ಈ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಸಾಕು, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೌಗೋಳಿಕ ಮಾಹಿತಿ ಲಭಿಸುವಂತೆ ಹಲವಾರು ಕಡೆಗಳಲ್ಲಿ ಫಲಕಗಳು ಅಳವಡಿಸಿದ್ದು ಚಾರಣಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಮಾರ್ಗದುದ್ದಕ್ಕೂ ಆರಂಭದಿಂದ ಕೊನೆಯವರೆಗೆ ಅಲ್ಲಲ್ಲಿ ನಾಮಫಲಕಗಳು ಅಳವಡಿಸಿ ಅಲ್ಲಿ ಕಾಣಸಿಗುವ ವನ್ಯಜೀವಿಗಳ, ಸಸ್ಯಗಳ ಹೆಸರು ಮತ್ತು ಚಿತ್ರಗಳು ಅವುಗಳ ಬಗೆಗೆ ಕಿರು ಮಾಹಿತಿ ನಮೂಸಿದ್ದು ಚಾರಣಿಗರ ಜ್ಞಾನದ ವಿಕಾಸಕ್ಕೂ ಸಹಕಾರಿಯಾಗಿದೆ.

ಪಿ.ಯು, ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿಜ್ಞಾನ ಮತ್ತು ಭೂಗೋಳ ವಿಷಯಗಳ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವುಳ್ಳ ಕಲಾ ವಿಭಾಗದವರಿಗೂ ಇದು ಉಪಯುಕ್ತ. ಮಾರ್ಗದಲ್ಲಿ ಮೂರು ಕಡೆ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಬಹುದು.

ವನ್ಯಧಾಮದ ವಿವಿಧೆಡೆ ಇನ್ನೂ 200 ಫಲಕಗಳನ್ನು ಅಳವಡಿಸಲು ವನ್ಯಧಾಮದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಫಲಕಗಳಲ್ಲಿ ಅಳವಡಿಸಿದ ಮಾಹಿತಿ, ಪ್ರಾಣಿ ಪಕ್ಷಿಗಳು ಮತ್ತು ಸಸ್ಯಗಳು ಹಾಗೂ ಸರಿಸೃಪ, ಪಾತರಗಿತ್ತಿ, ಚಿಟ್ಟೆ(ಕೀಟ)ಗಳ ಚಿತ್ರಗಳೊಂದಿಗೆ ಮಾಹಿತಿ ಓದಿಕೊಂಡು ಮುಂದೆ ಸಾಗುತ್ತಿದ್ದರೆ ಚಾರಣಿಗರಿಗೆ ದಣಿವು ಆಗುವುದಿಲ್ಲ. ಕಲ್ಲು, ಮಣ್ಣು, ಮಣ್ಣಿನ ವಿಧಗಳು ಹಾಗೂ ಸಸ್ಯಗಳ ಮಾಹಿತಿಯ ಕಣಜ ಚಾರಣ ಮಾರ್ಗದಲ್ಲಿ ಸೃಷ್ಟಿಸಿರುವುದು ಬೇರೆ ಅರಣ್ಯಗಳಲ್ಲಿ ಕಾಣ ಸಿಗದು ಎನ್ನುತ್ತಾರೆ ಚಾರಣಕ್ಕೆ ಬಂದಿದ್ದ ವಿಜಯಪುರ ಜಿಲ್ಲೆಯ ಪ್ರವಾಸಿ, ವಕೀಲ ಮಲ್ಲಪ್ಪ ಹುಡೇದ.

ಸಚಿವರಿಂದ ಇಂದು ಆ್ಯಪ್ ಬಿಡುಗಡೆ

ಚಿಂಚೋಳಿ ವನ್ಯಜೀವಿ ಧಾಮದ ಚಾರಣ ಮಾರ್ಗದ ಕುರಿತು ಅರಣ್ಯ ಇಲಾಖೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಚಾರಣಿಗರು ಚಾರಣ ನಡೆಸುವಾಗ, ಈ ಆ್ಯಪ್ ಮೂಲಕ ತಾವು ಎಲ್ಲಿದ್ದೇವೆ? ಸುತ್ತಲಿನ ವೈಶಿಷ್ಟ್ಯವೇನು? ಸಮೀಪದಲ್ಲಿ ಲಭ್ಯವಿರುವ ಸಸ್ಯ ಪ್ರಕಾರಗಳು, ಪ್ರಾಣಿಗಳ ಮಾಹಿತಿ ಒಳಗೊಂಡಿದೆ. ಇದು ಕೇವಲ ಚಂದ್ರಂಪಳ್ಳಿಯಿಂದ ಗೊಟ್ಟಂಗೊಟ್ಟ ಮಾರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ಸಚಿವ ಉಮೇಶ ಕತ್ತಿ ಇದೇ 27ರಂದು ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ಭವಿಷ್ಯದಲ್ಲಿ ಇಲ್ಲಿನ ಕುಸ್ರಂಪಳ್ಳಿ ಗೊಟ್ಟಂಗೊಟ್ಟ, ಮಂಡಿಬಸವಣ್ಣ ಕ್ಯಾಂಪ್‌ನಿಂದ ಶೇರಿ ಭಿಕನಳ್ಳಿ, ಚಂದ್ರಂಪಳ್ಳಿಯಿಂದ ಶೇರಿ ಭಿಕನಳ್ಳಿ, ಶೇರಿ ಭಿಕನಳ್ಳಿಯಿಂದ ಗೊಟ್ಟಂಗೊಟ್ಟ ಮಾರ್ಗಗಳು ಚಾರಣಕ್ಕೆ ಸೂಕ್ತವಾಗಿದೆ. ಭವಿಷ್ಯದಲ್ಲಿ ಇವುಗಳಲ್ಲಿ ಕೆಲವೊಂದು ಸಫಾರಿ ಮಾರ್ಗಗಳಾಗಿಯೂ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು