ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಭಾಗದಲ್ಲಿ 14 ಚಿನ್ನದ ಪದಕ ಪಡೆದ ರುಕ್ಮಿಣಿ; ಬಡತನದಲ್ಲಿ ಅರಳಿದ ಪ್ರತಿಭೆ

Published 20 ಜೂನ್ 2023, 5:39 IST
Last Updated 20 ಜೂನ್ 2023, 5:39 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕೆ ನೀಡಲಾಗುವ 14 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದ ಜೇವರ್ಗಿ ತಾಲ್ಲೂಕಿನ ಚಿಗರಳ್ಳಿಯ ರುಕ್ಮಿಣಿ ಹಣಮಂತರಾಯ ಬಡತನದಲ್ಲಿ ಅರಳಿದ ಪ್ರತಿಭೆ.

ತಂದೆ ಹಣಮಂತರಾಯ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಸಿಪಾಯಿಯಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಮಗಳ ಕೊರಳಲ್ಲಿದ್ದ ಚಿನ್ನದ ಪದಕಗಳನ್ನು ಕಂಡ ತಂದೆ ಹಾಗೂ ತಾಯಿಗೆ ಆನಂದ ಭಾಷ್ಪ ತಂತಾನೇ ಸುರಿದವು. ನಂತರ ಮಾತನಾಡಿದ ರುಕ್ಮಿಣಿ, ‘ನನ್ನ ಅಣ್ಣ ಹೆಚ್ಚು ಓದಲಿಲ್ಲ. ನೀನಾದರೂ ಓದು ಎಂದು ನನಗೆ ಪ್ರೋತ್ಸಾಹ ನೀಡಿದರು. ಕಲಬುರಗಿಯಲ್ಲೇ ಹಾಸ್ಟೆಲ್‌ನಲ್ಲಿದ್ದುಕೊಂಡು ಅಧ್ಯಯನ ಮಾಡಿದ್ದಕ್ಕೆ ಇಷ್ಟು ಪದಕಗಳು ಬಂದಿವೆ. ಹೈಸ್ಕೂಲ್ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೇ ನೇಮಕಾತಿ ಪತ್ರ ಬರಬೇಕಿದೆ’ ಎಂದರು.

ಮಗಳ ಸಾಧನೆ ಕುರಿತು ಮಾತನಾಡಿದ ಹಣಮಂತರಾಯ, ‘ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಸಿಪಾಯಿ ಕೆಲಸ ಸಿಕ್ತು. 2 ವರ್ಷದ ಹಿಂದೆ ರಿಟೈರ್ ಆಗೀನ್ರಿ. ಮಗಳು ಓದ್ಯಾಳ್ರಿ. ನಮ್ಮ ಹೆಸರು ತಂದಾಳ. ಅದಕ್ಕ ಹೆಮ್ಮೆ ಅನಸ್ತದ’ ಎಂದು ಪ್ರತಿಕ್ರಿಯಿಸಿದರು.

ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ್‌ ಮೂಲದ ಆದಿತಿ ರೆಡ್ಡಿ ಮುಂದೆ ಪಿಎಚ್.ಡಿ ಮಾಡುವುದಾಗಿ ತಿಳಿಸಿದರು.

ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದ ಯಾದಗಿರಿ ಜಿಲ್ಲೆ ಸುರಪುರದ ಬಿ.ರಾಜಶ್ರೀ, ತಮ್ಮ ಸಾಧನೆಗೆ ತಂದೆ–ತಾಯಿ ಕಾರಣ. ಪದಕಗಳನ್ನು ಅಜ್ಜನಿಗೆ ಅರ್ಪಿಸುವುದಾಗಿ ತಿಳಿಸಿದರು. ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ ಎಂದು ಹೇಳಿದರು.

ಎಂಬಿಎ ವಿಭಾಗದಲ್ಲಿ ಪ್ರಿಯಾಂಕಾ ವೀರಭದ್ರಪ್ಪ ಅವರು ಎಂಟು ಚಿನ್ನದ ಪದಕ, ರಾಜ್ಯಶಾಸ್ತ್ರ ವಿಭಾಗದಲ್ಲಿ ರಾಯಚೂರಿನ ಲಕ್ಷ್ಮಿ ಲಕ್ಷ್ಮಣ ಆರು ಚಿನ್ನದ ಪದಕ, ಸಮಾಜ ಕಾರ್ಯ ವಿಭಾಗದಲ್ಲಿ ಅಂಬಿಕಾ ಶಿವಾನಂದ ಆರು ಚಿನ್ನದ ಪದಕ, ಕಂಪ್ಯೂಟರ್ ಸೈನ್ಸ್‌ ವಿಭಾಗದಲ್ಲಿ ಅಮೀನಾ ಅಂಜುಮ್ ಆರು ಚಿನ್ನದ ಪದಕ, ರಸಾಯನವಿಜ್ಞಾನ ವಿಭಾಗದಲ್ಲಿ ಶ್ರಾವಣಿ ಕೃಷ್ಣಾರೆಡ್ಡಿ ಐದು ಚಿನ್ನದ ಪದಕ, ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಅಕ್ಕಮಹಾದೇವಿ ಅವರು ಐದು ಚಿನ್ನದ ಪದಕ ಹಾಗೂ ಬಿ.ಕಾಂ.ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದಕ್ಕೆ ಭಾಗ್ಯವಂತಿ ಅವರಿಗೆ ಐದು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT