ಬುಧವಾರ, ಜುಲೈ 6, 2022
23 °C
ರಂಗಾಂತರಾಳ, ಕಾಲೇಜು ರಂಗೋತ್ಸವ, ನಾಟಕೋತ್ಸವ, ಚಿಣ್ಣರ ಮೇಳ ರದ್ದು

ಕಲಬುರ್ಗಿ | ರಂಗಾಯಣ ಚಟುವಟಿಕೆಗೂ ತಟ್ಟಿದ ಕೊರೊನಾ

ಎಲ್‌. ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಏಪ್ರಿಲ್‌, ಮೇ ಬರುತ್ತಿದ್ದಂತೆ ನಗರದಲ್ಲಿ ಹತ್ತಾರು ಬೇಸಿಗೆ ಶಿಬಿರಗಳು ತೆರೆದುಕೊಳ್ಳುತ್ತಿದ್ದವು. ವಿದ್ಯಾರ್ಥಿಗಳಿಗಾಗಿ ಹಾಗೂ ಆಸಕ್ತರಿಗಾಗಿ ನಾಟಕ ಅಭಿನಯ, ನೃತ್ಯ, ಗಾಯನ, ಕವನ ವಾಚನ ಸೇರಿದಂತೆ ಕ್ರೀಡಾ ಚಟುವಟಿಕೆಯ ತರಬೇತಿ ಶಿಬಿರಗಳು ಅನಾವರಣಗೊಳ್ಳುತ್ತಿದ್ದವು. ಆದರೆ, ಕೊರೊನಾದ ಕರಿನೆರಳು ಈ ಎಲ್ಲಾ ತರಬೇತಿ ಶಿಬಿರಗಳ ಮೇಲೆ ಆವರಿಸಿದೆ.

ನಿತ್ಯ ಶಾಲೆ, ಕಾಲೇಜುಗಳಲ್ಲಿ ಪಠ್ಯವಿಷಯಗಳನ್ನು ಆಲಿಸುವುದರಲ್ಲಿ, ಬೋಧಿಸುವುದರಲ್ಲಿಯೇ ತಲ್ಲೀನರಾಗಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಆಸಕ್ತರಿಗೆ ಈ ಬೇಸಿಗೆ ಶಿಬಿರಗಳು ಮನಸ್ಸಿಗೆ ಕೆಲ ಸಮಯ ಆಹ್ಲಾದಕರ ವಾತಾವರಣವನ್ನು ನೀಡಿ ಮತ್ತೆ ಅವರಲ್ಲಿ ಪುನಃಶ್ಚೇತನವನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತಿದ್ದವು. ಆದರೆ, ಕೊರೊನಾ ಭೀತಿಯು ಎಲ್ಲರನ್ನೂ ಮನೆಯೊಳಗೆ ಬಂಧಿಯನ್ನಾಗಿ ಮಾಡಿದೆ. 

ನಗರದ ರಂಗಾಯಣವು ಎಂದಿನಂತೆ ಈ ಬಾರಿ ಕೂಡ ಮಾರ್ಚ್‌, ಏಪ್ರೀಲ್‌ನಲ್ಲಿ ಹಲವು ಸಾಂಸ್ಕೃತಿಕ ಹಾಗೂ ನಾಟಕೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ನಡೆಸಿತ್ತು. ಅದಕ್ಕಾಗಿಯೇ ತೆರೆಮರೆಯಲ್ಲಿಯೇ ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಆದರೆ, ಇದೀಗ ಎಲ್ಲವೂ ರದ್ದು ಮಾಡಿಕೊಂಡು ಮೌನವಾಗಿದೆ.

‘ಪ್ರತಿ ವರ್ಷ ಮಾರ್ಚ್‌, ಏಪ್ರಿಲ್‌ನಲ್ಲಿ ರಂಗಾಯಣದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಾಟಕ ಅಭಿನಯ, ರಂಗ ಗೀತೆಗಳ ಗಾಯನ, ನೃತ್ಯ, ಕತೆ ಹೇಳುವುದು ಹಾಗೂ ಕವನ ವಾಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿಯೂ ‌ನಾಲ್ಕು ದಿನಗಳ ನಾಟಕೋತ್ಸವ, ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರು ತಮ್ಮ ಮನದಾಳವನ್ನು ಹಂಚಿಕೊಳ್ಳಲು ‘ರಂಗಾಂತರಾಳ‘, ‘ಕಾಲೇಜು ರಂಗೋತ್ಸವ‘, ‘ರಂಗ ತರಬೇತಿ‘ ಮತ್ತು ಮಕ್ಕಳಿಗಾಗಿ ‘ಚಿಣ್ಣರ ಮೇಳ‘ವನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದಕ್ಕಾಗಿಯೇ ಕರಪತ್ರಗಳನ್ನು ಮುದ್ರಣ ಮಾಡಿ ಹಂಚುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೊನಾ ಎಲ್ಲವನ್ನೂ ನುಂಗಿಹಾಕಿದೆ‘ ಎಂದು ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಶಿಬಿರದಲ್ಲಿ 150 ರಿಂದ 200 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದರು. ಅತಿ ಕಡಿಮೆ ಶುಲ್ಕವನ್ನು ಪಡೆದು ಸಂಪನ್ಮೂಲ ವ್ಯಕ್ತಿಗಳಿಂದ ಅವರ ಆಸಕ್ತ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿತ್ತು. ಎಲ್ಲರೂ ಖುಷಿಯಿಂದಲೇ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿ, ತಮಾಷೆ ಮಾಡುತ್ತಾ ಕಲಿಯುತ್ತಿದ್ದರು. ಮಾರ್ಚ್‌ 3 ರಿಂದ ಆರಂಭವಾಗುತ್ತಿದ್ದ ಶಿಬಿರದ ಚಟುವಟಿಕೆಗಳು ಮೇ ಅಂತ್ಯದವರಿಗೂ ನಡೆಯುತ್ತಿದ್ದವು‘ ಎಂದು ಹೇಳುತ್ತಾರೆ ಅವರು.

ಏಪ್ರಿಲ್‌ 15 ರಿಂದ 2ನೇ ‘ರಂಗಾಂತರಾಳ‘ ಆರಂಭವಾಗಬೇಕಿತ್ತು. ಇದೇ ಅವಧಿಯಲ್ಲಿ ರಂಗಭೂಮಿಯ ಹಿರಿಯ ಕಲಾವಿದರ ಪರಿಚಯ ಸಂಬಂಧಿಸಿದ ಹಲವು ರಂಗಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೂ ಇತ್ತು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಿಗಾಗಿಯೇ ’ರಂಗ ತರಬೇತಿ‘, ವಿದ್ಯಾರ್ಥಿಗಳಿಗಾಗಿ ’ರಂಗೋತ್ಸವ‘ ‌‌ಶಿಬಿರ ನಡೆಯಬೇಕಿತ್ತು‘. ಅದರೀಗ ಎಲ್ಲವೂ ಹೇಳಿಕೆಗಳಾಗಿ ಉಳಿದಿವೆ. ಕೊರಾನದ ಭೀತಿ ಮುಗಿದ ಮೇಲೆ ಎಂದಿನಂತೆ ರಂಗಾಯಣದ ಎಲ್ಲಾ ಚಟುವಟಿಕೆಗಳ ಮತ್ತೆ ಆರಂಭವಾಗಲಿವೆ‘ ಎನ್ನುತ್ತಾರೆ ಅವರು.

ಆನ್‌ಲೈನ್‌ ಕ್ಯಾಂಪ್‌ 
ನಗರದ ಗೀತಾ ಪರಿವಾರದವರು 15 ವರ್ಷಗಳಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸುತ್ತಾ ಬಂದಿದ್ದಾರೆ. ಶಿಬಿರದಲ್ಲಿ ಮಕ್ಕಳಿಗೆ ಈಜು ಕಲಿಕೆ, ವಾಲಿಬಾಲ್‌, ಫುಟ್ಬಾಲ್‌ ತರಬೇತಿ ನೀಡಲಾಗುತ್ತಿತ್ತು. ಜೊತೆಗೆ ಕತೆ ಹೇಳುವುದು, ಕವನ ಓದುವುದನ್ನು ಹೇಳಿಕೊಡಲಾಗುತಿತ್ತು. ಆದರೆ, ಈ ವರ್ಷ ಇವುಗಳೆಲ್ಲವೂ ಸ್ಥಗಿತಗೊಂಡು ಇದೀಗ ಆನ್‌ಲೈನ್‌ ಕ್ಯಾಂಪ್‌ ಮೂಲಕ ತೆರೆದುಕೊಂಡಿವೆ.

'ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಬೇಸಿಗೆ ಶಿಬಿರವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದುಮಾಡಿ, ಮಾರ್ಚ್‌ನಿಂದ ನಾವು ಆನ್‌ಲೈನ್‌ ಕ್ಯಾಂಪ್‌ ಆರಂಭಿಸಿದ್ದೇವೆ. ಆನ್‌ಲೈನ್ ಮೂಲಕ ಶಿಬಿರಾರ್ಥಿಗಳಿಗೆ ಭಗವದ್ಧೀತೆ ಅಧ್ಯಯನ, ಧಾರ್ಮಿಕ ನೀತಿ ಕತೆಗಳನ್ನು ಹೇಳುವುದು, ಶ್ಲೋಕಗಳನ್ನು ಕಲಿಸುವ ಪ್ರಕ್ರಿಯೆ ಮಾಡುತ್ತಿದ್ದೇವೆ‘ ಎಂದು ನಗರದ ಗೀತಾ ಪರಿವಾರದ ಪ್ರಮುಖರಾದ ಸಂತೋಷ ಭದ್ರಿನಾರಾಯಣ ಸೋಮಾನಿ ಹೇಳಿದರು.

*
ಆರೋಗ್ಯಕರ ಸಮಾಜವಿದ್ದಾಗ ಮಾತ್ರ ಮನರಂಜನೆ ಕೊಡಲು ಸಾಧ್ಯ. ಎಲ್ಲರೂ ಜೀವ ಭಯದಲ್ಲಿರುವಾಗ ಮನರಂಜನೆ ಚಟುವಟಿಕೆಗಳನ್ನು ಆಯೋಜಿಸಲು ಹೇಗೆ ಸಾಧ್ಯ? ಜನ ಜೀವನ ಯತಾಸ್ಥಿತಿಗೆ ಮರಳಿದ ನಂತರ ಎಂದಿನಂತೆ ಎಲ್ಲಾ ರಂಗಚಟುವಟಿಕೆಗಳು ನಡೆಯಲಿವೆ.
–ಪ್ರಭಾಕರ ಜೋಶಿ, ನಿರ್ದೇಶಕರು, ರಂಗಾಯಣ, ಕಲಬುರ್ಗಿ.

*
ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಗಳು. ಆದರೆ, ಈ ಬಾರಿ ರದ್ದಾಗಿವೆ. ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ ಹೌದು. ಮನೆಯಲ್ಲಿಯೇ ಮಕ್ಕಳು ವಿವಿಧ ಸೃಜನಾತ್ಮಕ ಚುಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಇದರಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದೆ. 
–ಶಂಕರಯ್ಯ ಘಂಟಿ,  ಹಿರಿಯ ರಂಗಕರ್ಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು