ಪರಿಶೀಲನೆ ಆಗಿದ್ದು ಬರೀ ಶೇ12ರಷ್ಟು!
ಇನ್ನು ಆಸ್ತಿಗಳ ಡಿಜಿಟಲೀಕರಣದ ಬೆನ್ನಲ್ಲೆ ಅವುಗಳ ಖುದ್ದು ಪರಿಶೀಲನಾ ಕಾರ್ಯವೂ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗ ಡಿಜಿಟಲೀಕರಣ ಮಾಡಲಾದ 102015 ಸ್ವತ್ತುಗಳ ಪೈಕಿ 11901 ಆಸ್ತಿಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು ಶೇ 11.64ರಷ್ಟು ಪ್ರಗತಿ ಸಾಧಿಸಿದೆ. ಇದರೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯು ರಾಜ್ಯದ ನಗರ ಪಾಲಿಕೆಗಳ ಈ ಪರಿಶೀಲನಾ ರ್‍ಯಾಂಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ದಾವಣಗೆರೆ ಪಾಲಿಕೆ ಮೊದಲ ಸ್ಥಾನ ಬಳ್ಳಾರಿ ಮಹಾನಗರ ಪಾಲಿಕೆ ಎರಡನೇ ಹಾಗೂ ಶಿವಮೊಗ್ಗ ನಗರ ಪಾಲಿಕೆ ಮೂರನೇ ಸ್ಥಾನದಲ್ಲಿವೆ. ‘ಪಾಲಿಕೆ ವ್ಯಾಪ್ತಿಯಲ್ಲಿ ಡಿಜಿಟಲೀಕರಣಗೊಂಡಿರುವ ಸಂಪೂರ್ಣ ಆಸ್ತಿಗಳ ವೆರಿಫಿಕೇಷನ್ ( ಪರಿಶೀಲನೆ) ನವೆಂಬರ್ ತಿಂಗಳಾಂತ್ಯಕ್ಕೆ ಮುಗಿಸುವಂತೆ ಪೌರಾಡಳಿತ ನಿರ್ದೇಶನಾಲಯದ ಇತ್ತೀಚಿನ ಸಭೆಯಲ್ಲಿ ಸೂಚಿಸಲಾಗಿದೆ’ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಪ್ರಭಾರ ಉಪ ಆಯುಕ್ತ ಪ್ರಲ್ಹಾದ ಬಿ.ಕೆ. ತಿಳಿಸಿದ್ದಾರೆ.