ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಹಿನ್ನೆಲೆಯ ಫರತಾಬಾದ್ ಗ್ರಾಮಕ್ಕೆ ಬೇಕಿದೆ ಕಾಯಕಲ್ಪ

ಫರತಾಬಾದ್ ಗ್ರಾಮದಲ್ಲಿ ಒಳಚರಂಡಿ, ಅಶುಚಿತ್ವದ್ದೆ ಸಮಸ್ಯೆ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
Last Updated 9 ಜುಲೈ 2021, 1:59 IST
ಅಕ್ಷರ ಗಾತ್ರ

ಕಲಬುರ್ಗಿ: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾದ ಫರಹತಾಬಾದ್ ಐತಿಹಾಸಿಕ ಮಹತ್ವ ಹೊಂದಿರುವ ಗ್ರಾಮ. ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಈ ಗ್ರಾಮಕ್ಕೆ ಸೌಕರ್ಯಗಳ ಕೊರತೆ ಕಾಡುತ್ತಿದೆ.

ಬಹಮನಿ ಮತ್ತು ನಿಜಾಮರ ಕಾಲದಲ್ಲಿ ಮುಖ್ಯ ತಾಣವಾಗಿದ್ದ ಈ ಗ್ರಾಮದಲ್ಲಿ ಆಗಿನ ಕಾಲದ ಕೋಟೆ, ಬಾವಿ, ಕಾವಲು ಗೋಪುರ (ಹುಡೆ) ಸೇರಿದಂತೆ ಹಲವು ಸ್ಮಾರಕಗಳಿವೆ.

‘ಬಹಮನಿ ಸುಲ್ತಾನ್ ಫಿರೋಜ್ ಷಾನ ರಾಣಿ ಫರೀತಾ ಬೇಗಂನಿಂದ ಈ ಗ್ರಾಮಕ್ಕೆ ಫರಹತಾಬಾದ್ ಎಂಬ ಹೆಸರು ಬಂದಿದೆ. ಗತಕಾಲವನ್ನು ನೆನಪಿಸುವಂಥ ಕುರುಹುಗಳು ಇಲ್ಲಿವೆ. ಆದರೆ, ಪ್ರವಾಸೋದ್ಯಮ ಉತ್ತೇಜಿಸುವಂತಹ ಯಾವ ಕ್ರಮವನ್ನೂ ಸರ್ಕಾರ ಇಲ್ಲಿ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಅಫಜಲಪುರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಈ ಗ್ರಾಮವು 5 ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿರುವ ಫರಹತಾಬಾದ್‌ನಲ್ಲಿ ನಾಡಕಚೇರಿ, ಅಂಗನವಾಡಿ ಕೇಂದ್ರ, ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಮುಂತಾದವು ಇವೆ.

ಆದರೆ, ಸ್ವಚ್ಛತೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಗ್ರಾಮವು ಹಿನ್ನಡೆ ಅನುಭವಿಸುತ್ತಿದೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಬಹುತೇಕ ಚರಂಡಿಗಳಿಗೆ ಸ್ಲ್ಯಾಬ್ ಇಲ್ಲ. ಇದರಿಂದ ಗ್ರಾಮಸ್ಥರು ಕೊಳಚೆ ನೀರಿನ ದುರ್ವಾಸನೆಯಲ್ಲೇ ಬದುಕುವಂತಾಗಿದೆ. ಮಳೆ ಬಂದಾಗಲಂತೂ ಗ್ರಾಮಸ್ಥರ ಪರಿಸ್ಥಿತಿ ಇನ್ನೂ ಸಂಕಷ್ಟಮಯವಾಗುತ್ತದೆ.

‘ಮಳೆಯಾದಾಗ, ಚರಂಡಿಯೊಳಗಿನ ನೀರು ತುಂಬಿ ಹರಿದು ಮನೆಯೊಳಗೆ ನುಗ್ಗುತ್ತದೆ. ಅದನ್ನು ಹೊರಹಾಕುವುದರಲ್ಲೇ ಸಾಕು ಸಾಕಾಗುತ್ತದೆ. ಕೆಲ ಕಡೆ ಒಳಚರಂಡಿಯ ವ್ಯವಸ್ಥೆಯೂ ಇಲ್ಲ. ಅದಕ್ಕೆ ನಾವೇ ಉಪಾಯ ಕಂಡುಕೊಂಡು ರಸ್ತೆಯಲ್ಲಿ ತಗ್ಗು ನಿರ್ಮಿಸಿ, ಕೊಳಚೆ ನೀರು ಹರಿದು ಹೋಗುವಂತೆ ಮಾಡಿದ್ದೇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಗ್ರಾಮದ ಬಹುತೇಕ ಸಿಸಿ ರಸ್ತೆಗಳು ಹದಗೆಟ್ಟಿವೆ. ಇಲ್ಲಿನ ವಾರ್ಡ್ ನಂ.1ರಲ್ಲಿರುವ ರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಅಲ್ಲಿನ ನಿವಾಸಿಗಳು ಕೋರುತ್ತಾರೆ.

‘ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಸಮರ್ಪಕ ನಿರ್ವಹಣೆಯಿಲ್ಲ’ ಎಂದು ಅವರು ಆರೋಪಿಸುತ್ತಾರೆ.

‘ಗ್ರಾಮದ ಅರ್ಧದಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ. ಬಹುತೇಕ ಮನೆಗಳು ಇಕ್ಕಟ್ಟಾಗಿದ್ದು, ಶೌಚಾಲಯ ಕಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಾಗವೂ ಇಲ್ಲ. ಆದ್ದರಿಂದ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡರು.

ಪಾಳು ಬಿದ್ದ ಪುರಾತನ ಕೋಟೆ

ಫರಹತಾಬಾದ್‌ ಗ್ರಾಮದ ವಿವಿಧೆಡೆ ಬಹಮನಿ ಸುಲ್ತಾನರು ಮತ್ತು ನಿಜಾಮರ ಬಾವಿಗಳಿವೆ. ಗ್ರಾಮದ ನಾಲ್ಕು ದಿಕ್ಕುಗಳಲ್ಲೂ ಕಾವಲು ಗೋಪುರಗಳಿವೆ (ಹುಡೆ). ಅವುಗಳ ಪೈಕಿ ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಅಲ್ಲದೆ ಗ್ರಾಮದಲ್ಲಿನ ಪುರಾತನ ಕೋಟೆ ಬಹುತೇಕ ಪಾಳು ಬಿದ್ದಿದೆ.

‘ಐತಿಹಾಸಿಕ ಮಹತ್ವ ಹೊಂದಿರುವ ಇಲ್ಲಿನ ಸ್ಮಾರಕಗಳ ರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು. ಅವುಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲಿನ ಪುರಾತನ ಬಾವಿಗಳನ್ನು ಪುನಶ್ಚೇತನಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಗೆ ಬಳಸುವಂತೆ ಮಾಡಬೇಕು. ಗ್ರಾಮವನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

*ಫರಹತಾಬಾದ್‌ನ ಐತಿಹಾಸಿಕ ಕೋಟೆ, ಕಾವಲು ಗೋಪುರ, ಬಾವಿಗಳನ್ನು ಸಂರಕ್ಷಿಸಬೇಕು. ಗ್ರಾಮವನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಸರ್ಕಾರ ಯೋಜನೆ ರೂಪಿಸಬೇಕು

– ವಿಶ್ವನಾಥ ಸಜ್ಜನ, ಮುಖಂಡ

*ಶೌಚಾಲಯ ಬಳಕೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ರಸ್ತೆ, ಒಳಚರಂಡಿ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ

–ಹುಣಚಪ್ಪಸೀತನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಫರಹತಾಬಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT