ಶುಕ್ರವಾರ, ಏಪ್ರಿಲ್ 10, 2020
19 °C
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಎಚ್ಚರಿಕೆ

ಪ್ರತಿಷ್ಠೆ ಬಿಟ್ಟು ಕೆಲಸ ಮಾಡದಿದ್ದರೆ ವಿ.ವಿ. ಅಸ್ತಿತ್ವಕ್ಕೆ ಧಕ್ಕೆ: ಡಾ.ಅಶ್ವಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನಮ್ಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಹಾಗೂ ಸಮಾಜ ಕೇಂದ್ರಿತವಾಗಿರಬೇಕು. ಅವರನ್ನೇ ನಿರ್ಲಕ್ಷಿಸಿದರೆ ವಿಶ್ವವಿದ್ಯಾಲಯಗಳು ಆಸ್ತಿತ್ವ ಕಳೆದುಕೊಳ್ಳುತ್ತವೆ. ಜನ ಈಗ ಸರ್ಕಾರಿ ವಿಶ್ವವಿದ್ಯಾಲಯಗಳನ್ನೇ ನೆಚ್ಚಿಕೊಂಡಿಲ್ಲ, ಪರ್ಯಾಯ ವ್ಯವಸ್ಥೆಗಳೂ ಇವೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಕೆಲಸ ಮಾಡಬೇಕು’ ಎಂದು ಉನ್ನತ ಶಿಕ್ಷಣ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಎಚ್ಚರಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಕುಲಪತಿ, ಆಡಳಿತ ಮಂಡಳಿ, ಸಿಂಡಿಕೇಟ್ ಸದಸ್ಯರೊಂದಿಗೆ ಸಚಿವರು ಮಾತುಕತೆ ನಡೆಸಿದರು.

‘ಗುಲಬರ್ಗಾ ವಿ.ವಿ. ಬಗ್ಗೆ ಜನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕು. ಈಗ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಇದ್ದು, ಗುಣಮಟ್ಟ ಕಾಯ್ದುಕೊಳ್ಳಲು ಈ ಸಂಸ್ಥೆಗಳು ಇತರ ಉದ್ಯಮಗಳ ಜತೆ ಸಹಯೋಗಕ್ಕೆ ಸಿದ್ಧವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಎಲ್ಲರೂ ನಮ್ಮ ಬಳಿಯೇ ಬರಲಿ ಎಂದು ಪ್ರತಿಷ್ಠೆ ಮಾಡುವುದು ಸರಿಯಲ್ಲ. ಈ ರೀತಿಯ ದೊಡ್ಡಸ್ತಿಕೆಯಿಂದ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ನಮ್ಮ ಶಿಕ್ಷಣ ವ್ಯವಸ್ಥೆ ಪ್ರಸ್ತುತವಾಗಿರಬೇಕು. ಇಲ್ಲದಿದ್ದರೆ ವ್ಯವಸ್ಥೆಯಲ್ಲಿ ಉಳಿಯುವುದೇ ಕಷ್ಟ. ಈ ನಿಟ್ಟಿನಲ್ಲಿ ಸುಧಾರಣೆಗೆ ಶ್ರಮಿಸೋಣ’ ಎಂದು ಅವರು ಹೇಳಿದರು.

‘ವಿಶ್ವವಿದ್ಯಾಲಯಗಳು ಆನ್‌ಲೈನ್‌ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಕಾಲೇಜುಗಳಿಗೆ ಕನಿಷ್ಠ ಮಾನದಂಡ ರೂಪಿಸಬೇಕು ಮತ್ತು ಖಾಲಿ ಹುದ್ದೆಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಜನರಿಗೆ ಉತ್ತರ ನೀಡುವುದು ಕಷ್ಟವಾಗುತ್ತದೆ. ಎಲ್ಲ ವಿಷಯಗಳಲ್ಲಿ ಉತ್ತರದಾಯಿತ್ವ ಬಹಳ ಮುಖ್ಯ. ಬೇಜವಾಬ್ದಾರಿಯನ್ನು ಜನ ಸಹಿಸುವುದಿಲ್ಲ. ಹಾಗಾಗಿ, ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸೋಣ’ ಎಂದರು.

‘ಈ ಭಾಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣದ ವ್ಯವಸ್ಥೆಯಲ್ಲಿ ಗುಣಮಟ್ಟ ಸುಧಾರಣೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಕರು, ಸಮಾಜ, ರಾಜಕಾರಣಿಗಳು ಎಲ್ಲರೂ ಕೈ ಜೋಡಿಸಿ ಒಟ್ಟಿಗೆ ಕೆಲಸ ಮಾಡಬೇಕು. ವಿ.ವಿ. ಮಾಡುವ ಎಲ್ಲ ಉತ್ತಮ ಕೆಲಸಗಳಿಗೆ ಸರ್ಕಾರದ ನೆರವು ಇರುತ್ತದೆ. ಕಲಬುರ್ಗಿಯಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧವಾಗಿದ್ದು, ಸ್ಟಾರ್ಟ್‌ಅಪ್‌ಗಳ ಸ್ಥಾಪನೆ, ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಡಾ. ಅಶ್ವಥ್ ನಾರಾಯಣ ಭರವಸೆ ನೀಡಿದರು.

ಸಭೆಯಲ್ಲಿ ಲೋಕಸಭೆ ಸದಸ್ಯ ಉಮೇಶ್‌ ಜಾಧವ್, ಶಾಸಕರಾದ ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಪ್ರದೀಪ್, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಉಪಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಬಿ.ಎನ್‌.ಶ್ರೀಧರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು