ಶುಕ್ರವಾರ, ಜನವರಿ 24, 2020
21 °C

‘ಸಂವಿಧಾನ ತಿದ್ದಲು ಯತ್ನಿಸಿದರೆ ಕ್ರಾಂತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ‘ಸಂವಿಧಾನವನ್ನು ಬದಲಾಯಿಸಲು ಮುಂದಾದರೆ ದೇಶದಲ್ಲಿ ಕ್ರಾಂತಿಕಾರಿ ಚಳವಳಿ ಭುಗಿಲೇಳುತ್ತದೆ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಡಾ.ಶಿವಗಂಗಾ ರುಮ್ಮಾ ಎಚ್ಚರಿಸಿದರು. 

ಪಟ್ಟಣದ ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ‘ದಲಿತರ ಮುಂದಿನ ಸವಾಲುಗಳು ಹಾಗೂ ವಂಚಿತ ಸವಲತ್ತುಗಳು’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದಲಿತರಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ದಲಿತರ ಉದ್ಧಾರ ಆಗುತ್ತಿಲ್ಲ. ದಲಿತ ಸಮುದಾಯದ ಜನರಿಗೆ ಇನ್ನು ಕೂಡ ಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ . ಸಂವಿಧಾನವು ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರವನ್ನು ಒತ್ತಾಯಿಸುವ ಹಕ್ಕನ್ನು ದಲಿತ ಸಮುದಾಯಕ್ಕೆನೀಡಿದೆ. ಇಂತಹ ಶ್ರೇಷ್ಠ ಸಂವಿಧಾನವನ್ನ ಬದಲಾಯಿಸುವ ಬಗ್ಗೆ ಇತ್ತೀಚೆಗೆ ಕೆಲ ರಾಜಕೀಯ ನಾಯಕರು ಮಾತಾಡಿದ್ದಾರೆ. ಇದನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ’ ಎಂದರು.

ಕೋಳಕೂರ, ಮುದುವಾಳ, ಹರನೂರ, ಶಾಖಾಪೂರ, ಯಾತನೂರ, ಬೇಲೂರ, ಹೆಗ್ಗಿನಾಳ ಸೇರಿದಂತೆ ಸುಮಾರು 20 ಗ್ರಾಮಗಳ ನೂರಾರು ಜನ ಸಮಾವೇಶದಲ್ಲಿ ಭಾಗವಹಿಸಿದ್ದರು. ದಲಿತ ಹಕ್ಕುಗಳ ತಾಲ್ಲೂಕು ಸಮಿತಿ ಸಹ ಸಂಚಾಲಕ ಪರಶುರಾಮ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ನಡುವಿನಕೇರಿ ಕೋಳಕೂರ ವಂದಿಸಿದರು.

ವೇದಿಕೆಯಲ್ಲಿ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಸಂಚಾಲಕ ಸುದಾಂ ದನ್ನಿ, ರೈತ ಸಂಘದ ಹಿರಿಯ ಮುಖಂಡರಾದ ವೆಂಕುಬರಾವ ವಾಗಣಗೇರಿ, ಸುಭಾಷ ಹೊಸಮನಿ, ಸಿದ್ದರಾಮ ಹರವಾಳ, ಕಸ್ತೂರಿಬಾಯಿ ಬಡಿಗೇರ, ಮರೇಮ್ಮ ಹರಿಜನ ಉಪಸ್ಥಿತರಿದ್ದರು.

ತಾಲೂಕು ಸಮಿತಿ ಆಯ್ಕೆ:

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ತಾಲೂಕು ಸಮಿತಿಯನ್ನ ನೇಮಕ ಮಾಡಲಾಯಿತು. ಸಂಚಾಲಕರಾಗಿ ಪೀರಪ್ಪ ಮಾದರ, ಸಹ ಸಂಚಾಲಕರಾಗಿ ಪರುಶುರಾಮ ಬಡಿಗೇರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಚಂದಮ್ಮ ಸೊನ್ನ, ಪಾರ್ವತಿ ಕೆಲ್ಲೂರ, ಮರೇಮ್ಮ ಹರನೂರ ಸೇರಿದಂತೆ ಒಟ್ಟು 13 ಜನರ ತಾಲೂಕು ಸಮಿತಿಯನ್ನ ಆಯ್ಕೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)