ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ ವಿಧಾನಸಭೆ ಚುನಾವಣೆ: ‘ಕೈ’ ಕೋಟೆಯಲ್ಲಿ ‘ಕಮಲ’ಕ್ಕೆ ಅರಳುವ ತವಕ

Last Updated 2 ಫೆಬ್ರುವರಿ 2023, 4:26 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಚಿತ್ತಾಪುರದಲ್ಲಿ ಆಗುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸತೊಡಗಿವೆ. ಸತತ ಎರಡು ಬಾರಿ ಆಯ್ಕೆಯಾಗಿರುವ ಹಾಲಿ ಶಾಸಕ ಪ್ರಿಯಾಂಕ್ ಖರ್ಗ ಅವರು ಪುನಃ ಆಯ್ಕೆಯಾಗುವ ಉಮೇದಿನಲ್ಲಿ ಇದ್ದರೆ, ಬಿಜೆಪಿ ನಾಯಕರು ಸಮರ್ಥ ಪೈಪೋಟಿ ನೀಡಿ ಗೆಲ್ಲುವ ತವಕದಲ್ಲಿ ಇದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನು ಮಣಿಸಿ, ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯವರು ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಸಕಲ ಸಿದ್ಧತೆ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಮಲದ ನಾಯಕರು ಇದ್ದಾರೆ.

2009ರ ಉಪಚುನಾವಣೆಯಲ್ಲಿ ಗೆದ್ದು, 2013 ಮತ್ತು 2018ರಲ್ಲಿ ಸೋತರೂ ಪ್ರಿಯಾಂಕ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯ ಮಾಜಿ ಶಾಸಕ ವಾಲ್ಮೀಕಿ ನಾಯಕ್ ನಿಧನರಾಗಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿ ಇರುವ ಇತರೆ ಹಿಂದುಳಿದ ಸಮುದಾಯಗಳ(ಒಬಿಸಿ) ಮತಗಳನ್ನು ಸೆಳೆದು, ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡುವ ಪ್ರಯತ್ನಗಳು ನಡೆದಿವೆ.

ಕಾಂಗ್ರೆಸ್‌ ಪ್ರಾಬಲ್ಯ: 1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಜಯಾ ರಾಘವೇಂದ್ರ ರಾವ್ ಗೆಲುವು ಸಾಧಿಸಿ, ಕಾಂಗ್ರೆಸ್‌ನ ಭದ್ರ ಕೋಟೆಗೆ ಅಡಿಪಾಯ ಹಾಕಿದರು. ಈವರೆಗೆ ಕ್ಷೇತ್ರದಲ್ಲಿ ಒಂದು ಉಪಚುನಾವಣೆ ಸೇರಿ 13ಕ್ಕೂ ಹೆಚ್ಚು ಚುನಾವಣೆ ನಡೆದಿವೆ. ಇದರಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದೆ.

1983, 1985ರಲ್ಲಿ ಜನತಾ ಪಕ್ಷ ಹಾಗೂ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ವಿಧಾನಸೌಧ ಪ್ರವೇಶಿಸಿದ್ದರು. 2008ರಲ್ಲಿ ಮೀಸಲು ಕ್ಷೇತ್ರ ಆದಾಗ ಗುರುಮಠಕಲ್‌ನಿಂದ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿ, ಬಿಜೆಪಿಯ ವಾಲ್ಮೀಕಿ ವಿರುದ್ಧ ಜಯ ಸಾಧಿಸಿದ್ದರು.

2009ರ ಲೋಕಸಭೆ ಚುನಾವಣೆಯಲ್ಲಿ ದೆಹಲಿ ರಾಜಕಾರಣಕ್ಕೆ ತೆರಳಿದ ಖರ್ಗೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನ ಆಡಳಿತರೂಢ ಬಿಜೆಪಿಯ ಅಭ್ಯರ್ಥಿ ವಾಲ್ಮೀಕ ನಾಯಕ ವಿರುದ್ಧ ಪ್ರಥಮ ಬಾರಿಗೆ ಪ್ರಿಯಾಂಕ್ ಖರ್ಗೆ ಸ್ಪರ್ಧಿಸಿ ಸೋತರು. 2013 ಮತ್ತು 2018ರಲ್ಲಿ ವಾಲ್ಮೀಕಿ ಅವರನ್ನು ಪರಾಭವಗೊಳಿಸಿದ ಪ್ರಿಯಾಂಕ್, ಚಿತ್ತಾಪುರ ‘ಕೈ’ ಪಾಳೆಯದ ಭದ್ರ ಕೋಟೆ ಎಂಬುದನ್ನು ಮತ್ತೆ ಸಾಬೀತು ಮಾಡಿದರು.

ಚದುರಿದ ಜೆಡಿಎಸ್: 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು 40,871 ಮತಗಳಿಂದ ಗೆಲವು ಸಾಧಿಸಿ, ಕ್ಷೇತ್ರದಲ್ಲಿ ದಳಕ್ಕೆ ನೆಲೆ ತಂದುಕೊಟ್ಟಿದ್ದರು. ಈ ಬಳಿಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಗಮನದಿಂದ ವಿಶ್ವನಾಥ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡಿಯಾಗಿ, ನಂತರ ಬಿಜೆಪಿಯ ಕದ ತಟ್ಟಿದರು. ಹೀಗಾಗಿ, ಜನತಾ ಪಕ್ಷದ ಬಹುತೇಕರು ಚದುರಿ ಹೋಗಿದ್ದಾರೆ.

ಬಿಜೆಪಿ ಟಿಕೆಟ್‌ಗೆ ಹೆಚ್ಚು ಆಕಾಂಕ್ಷಿಗಳು!
ವಾಲ್ಮೀಕ್‌ ನಾಯಕ್ ನಿರ್ಗಮನದ ಬಳಿಕ ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ ಜೋರಾಗಿದೆ. 6ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ.

ವಾಲ್ಮೀಕ್ ಪುತ್ರ ವಿಠಲ್ ನಾಯಕ, ವಾಲ್ಮೀಕ್‌ ಸ್ನೇಹಿತ ಅರವಿಂದ ಚವ್ಹಾಣ್, ಮಣಿಕಂಠ ರಾಠೋಡ, ಸುರೇಶ ರಾಠೋಡ, ದೇವೀಂದ್ರನಾಥ್ ನಾದ್, ಬಸವರಾಜ ಬೆಣ್ಣೂರುಕರ್ ಸೇರಿ ಹಲವರು ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಪಿ.ರಾಜೀವ, ನಾರಾಯಣಸ್ವಾಮಿ ಅವರ ಹೆಸರೂ ಆಗಾಗ ಪ್ರಸ್ತಾಪ ಆಗುತ್ತಿವೆ. ಜೆಡಿಎಸ್‌, ಎಎಪಿ ಮತ್ತು ಬಿಎಸ್‌ಪಿಯಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT