ಶನಿವಾರ, ಆಗಸ್ಟ್ 20, 2022
21 °C
ಬೇಕಿದೆ ಕಾಯಕಲ್ಪ

PV Web Exclusive | ಕಲಬುರ್ಗಿ ತೊಗರಿ ಮಂಡಳಿಗೇ ‘ಅಪೌಷ್ಟಿಕತೆ’!

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈ ಭಾಗದಲ್ಲಿ ಬೆಳೆಯುವ ತೊಗರಿ ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಕಲಬುರ್ಗಿಯ ಈ ಸ್ವಾದಿಷ್ಟ ತೊಗರಿಗೆ ಭೌಗೋಳಿಕ ಸೂಚಿ (ಜಿಐ)ಯೂ ಲಭಿಸಿ ವರ್ಷ ಗತಿಸಿದೆ. ಆದರೆ, ತೊಗರಿ ಬೆಳೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಸ್ಥಾಪಿಸಿರುವ ‘ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ’ ಇನ್ನೂ ‘ಅಪೌಷ್ಟಿಕತೆ’ಯಿಂದ ಬಳಲುತ್ತಿದೆ!

ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮತ್ತು ಕಲಬುರ್ಗಿ ಜಿಲ್ಲೆಯೊಂದರಲ್ಲೇ 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ಹೀಗಾಗಿ ಕಲಬುರ್ಗಿಯನ್ನು ತೊಗರಿಯ ಕಣಜ ಎಂದೇ ಕರೆಯಲಾಗುತ್ತಿದೆ. ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂ ಪ್ರಮಾಣ ಇಲ್ಲಿಯ ಭೂಮಿಯಲ್ಲಿ ಹೆಚ್ಚು. ಹೀಗಾಗಿ ಇಲ್ಲಿ ಬೆಳೆಯುವ ತೊಗರಿಗೆ ವಿಶೇಷ ಬೇಡಿಕೆ.

ಕಲಬುರ್ಗಿ ಕೇಂದ್ರ ಸ್ಥಾನವಾಗಿಸಿ ರಾಜ್ಯ ಸರ್ಕಾರ ‘ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ’ಯನ್ನು ಸ್ಥಾಪಿಸಿ 17 ವರ್ಷ ಆಗಿದೆ. ಏತನ್ಮಧ್ಯೆ ಈ ಮಂಡಳಿಯನ್ನು ‘ಕರ್ನಾಟಕ ದ್ವಿದಳಧಾನ್ಯ ಅಭಿವೃದ್ಧಿ ಮಹಾಮಂಡಳಿ’ಯನ್ನಾಗಿ ಪರಿವರ್ತಿಸುವುದಾಗಿಯೂ ರಾಜ್ಯ ಸರ್ಕಾರ ವರ್ಷದ ಹಿಂದೆ ಘೋಷಿಸಿತ್ತು. ಆದರೆ, ಮಹಾಮಂಡಳಿಯಾಗಿ ಪರಿವರ್ತನೆಯಾಗುವುದು ಹಾಗಿರಲಿ, ಮಂಡಳಿಗೆ ‘ನೆಲೆ’ಕಲ್ಪಿಸುವ ಕೆಲಸವೂ ಆಗಿಲ್ಲ.

ಕಲಬುರ್ಗಿ ಎಪಿಎಂಸಿಯ ಬಾಡಿಗೆ ಗೋದಾಮಿನಲ್ಲಿ ಮಂಡಳಿಯ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ಸಿಬ್ಬಂದಿ ನೇಮಕವಾಗಿಲ್ಲ. ಎರವಲು ಸೇವೆಯ ಸಿಬ್ಬಂದಿ ಇದ್ದಾರೆ. ಕೆಲಸವೇ ಇಲ್ಲದ ಕಾರಣ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚು ದಿನ ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಮಂಡಳಿ ಸ್ಥಾಪನೆಯಾಗಿದ್ದು 2002ರಲ್ಲಿ. ಕಂಪನಿ ಕಾಯ್ದೆ ಅನ್ವಯ ಇದನ್ನು ಸ್ಥಾಪಿಸಿದ ರಾಜ್ಯ ಸರ್ಕಾರ ₹5 ಕೋಟಿ ಷೇರು ಬಂಡವಾಳ ನೀಡಿತ್ತು. ರೈತರಿಂದ ಷೇರು ಸಂಗ್ರಹಿಸುವ ಕೆಲಸವಾಗಲಿಲ್ಲ. ಬದಲಿಗೆ ಸರ್ಕಾರ ನೀಡಿರುವ ಷೇರು ಬಂಡವಾಳವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದು, ಅದರಿಂದ ಬರುವ ಬಡ್ಡಿಯಲ್ಲಿಯೇ ಸಿಬ್ಬಂದಿ ವೇತನ, ಕಚೇರಿ ಬಾಡಿಗೆಯನ್ನು ಪಾವತಿಸಲಾಗುತ್ತಿದೆ.

ತೊಗರಿ ಖರೀದಿ ಬಿಟ್ಟರೆ ಬೇರೆ ಯೋಜನೆಗಳು ಮಂಡಳಿಯಲ್ಲಿ ಇಲ್ಲ. ದರ ಕುಸಿದಾಗ ಮಾತ್ರ ಮಂಡಳಿಗೆ ಕೆಲಸ. ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಆರಂಭಿಸಿದರೆ ಈ ಮಂಡಳಿಗೂ ಖರೀದಿಸುವ ಹೊಣೆ ವಹಿಸುತ್ತದೆ. ಅದರಿಂದ ದೊರೆಯುವ ಕಮಿಷನ್‌ ಮಾತ್ರ ಮಂಡಳಿಯ ಆದಾಯದ ಮೂಲ.


ಕಲಬುರ್ಗಿಯಲ್ಲಿರುವ ಕರ್ನಾಟಕ ತೊಗರಿ ಅಭಿವೃದ್ಧಿಮಂಡಳಿ ನಿಯಮಿತ

ಕೈಗೂಡದ ಯೋಜನೆ: ಕಲಬುರ್ಗಿ ಹೊರವಲಯದ ಕೋಟನೂರ (ಡಿ)ಯಲ್ಲಿರುವ ಕೃಷಿ ಇಲಾಖೆಯ ಬೀಜೋತ್ಪಾದನಾ ಕೇಂದ್ರದಲ್ಲಿ ಆರು ಎಕರೆ ಜಮೀನನ್ನು ಸರ್ಕಾರ ಮಂಡಳಿಗೆ ನೀಡಿದೆ. ಇಲ್ಲಿ ಮಂಡಳಿಯ ಆಡಳಿತ ಮತ್ತು ತರಬೇತಿ ಭವನ, ಸಂಶೋಧನಾ ಘಟಕ, ಗೋದಾಮು ನಿರ್ಮಾಣಕ್ಕೆ ₹11 ಕೋಟಿ ಮೊತ್ತದ ಪ್ರಸ್ತಾವ ತಯಾರಿಸಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ –ಎಚ್‌ಕೆಆರ್‌ಡಿಬಿ (ಈಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ)ಗೆ ಎರಡು ವರ್ಷಗಳ ಹಿಂದೆ ಸಲ್ಲಿಸಲಾಗಿತ್ತು. ‘ನಿಮ್ಮ ಆಡಳಿತ ಭವನವನ್ನು ನೀವೇ ನಿರ್ಮಿಸಿಕೊಳ್ಳಿ. ಅಭಿವೃದ್ಧಿ ಚಟುವಟಿಕೆಗೆ ಮಾತ್ರ ಅನುದಾನ ಕೇಳಿ’ ಎಂದು ಈ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು.

ಸಂಶೋಧನಾ ಕೇಂದ್ರ, ಬೀಜೋತ್ಪಾದನೆಯ ಫಾರ್ಮ್‌ ಮತ್ತಿತರ ಅಭಿವೃದ್ಧಿ ಚಟುವಟಿಕೆಗಾಗಿ ₹7.21 ಕೋಟಿ ಅನುದಾನ ನೀಡುವಂತೆ ತೊಗರಿ ಮಂಡಳಿ ಪರಿಷ್ಕೃತ ಪ್ರಸ್ತಾವವನ್ನು ಒಂದೂವರೆ ವರ್ಷದ ಹಿಂದೆ ಎಚ್‌ಕೆಆರ್‌ಡಿಬಿಗೆ ಸಲ್ಲಿಸಿತ್ತು. ‘ಇದರಲ್ಲಿ ಮೂರನೇ ಒಂದು ಭಾಗದಷ್ಟು ಅನುದಾನವನ್ನು ನೀವು ಭರಿಸಿದರೆ ಉಳಿದ ಅನುದಾನ ನಾವು ಕೊಡುತ್ತೇವೆ’ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅವರು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ, ಮುಂದಿನ ಪ್ರಕ್ರಿಯೆ ನಡೆಯಲೇ ಇಲ್ಲ.

‘ಮಂಡಳಿಯ ಹಣದಲ್ಲಿಯೇ ಆಡಳಿತ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ತೊಗರಿ ಮಂಡಳಿಯ ಮಾಜಿ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ ಅವರು.

‘ಕೆಲವರಿಗೆ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಬಿಟ್ಟರೆ ಮಂಡಳಿಯಿಂದ ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಕೆಎಂಎಫ್‌ ಮಾದರಿಯಲ್ಲಿ ಇದನ್ನು ಅಭಿವೃದ್ಧಿ ಪಡಿಸಬೇಕು’ ಎಂಬುದು ತೊಗರಿ ಬೆಳೆಗಾರರ ಒತ್ತಾಯ.

‘ತೊಗರಿ ಅಭಿವೃದ್ಧಿ ಮಂಡಳಿಯ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದು. ಇದರಿಂದ ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲಾಗುವುದು’ ಎಂದು ಕೆಲ ದಿನಗಳ ಹಿಂದೆ ಕಲಬುರ್ಗಿಗೆ ಬಂದಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ. ಆದರೆ, ಆ ಕೆಲಸ ಇನ್ನಷ್ಟೇ ಆರಂಭಗೊಳ್ಳಬೇಕಿದೆ.


ಕರುಣಾಕರ ಶೆಟ್ಟಿ

‘ತೊಗರಿ ಅಭಿವೃದ್ಧಿ ಮಂಡಳಿಯನ್ನು ಸರ್ಕಾರ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನಾಗಿ ಮರುನಾಮಕರಣ ಮಾಡಿ ಬೆಳಗಾವಿ ವಿಭಾಗಕ್ಕೂ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಪ್ರಾಂತೀಯ ಕಚೇರಿ ಪ್ರಾರಂಭಿಸಲಾಗುವುದು’ ಎಂದು  ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರುಣಾಕರ ಶೆಟ್ಟಿ ಪ್ರತಿಕ್ರಿಯಿಸಿದರು.

‘2019–20ನೇ ಸಾಲಿನಲ್ಲಿ ಮಂಡಳಿಯು  ರೈತರಿಂದ 3.15 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿದ್ದು, ₹192 ಕೋಟಿ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಿದೆ. ಭೌಗೋಳಿಕ ಸೂಚಿ ಮಾನ್ಯತೆ ಅಡಿ ತೊಗರಿಯನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಭೌಗೋಳಿಕೆ ಸೂಚಿಕೆ

ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ತೊಗರಿ ಅಭಿವೃದ್ಧಿ ಮಂಡಳಿಯ ಸತತ ಎರಡು ವರ್ಷದ ಪ್ರಯತ್ನದ ನಂತರ 2019ರ ಆಗಸ್ಟ್‌ 14ರಂದು ‘ಜಿಯಾಗ್ರಫಿಕಲ್‌ ಇಂಡಿಕೇಶನ್‌ ರಿಜಿಸ್ಟ್ರಿ’ಯು ಕಲಬುರ್ಗಿ ತೊಗರಿಗೆ ಭೌಗೋಳಿಕ ಸಂಕೇತ ‘ಜಿಐ’ ನೀಡಿದೆ.

ಪ್ರತಿಕ್ರಿಯೆ


ವೀರಶೆಟ್ಟಿ ಪಾಟೀಲ

ತೊಗರಿ ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲ ಆಗುತ್ತಿಲ್ಲ. ಮಂಡಳಿಯು ರೈತರಿಗೆ ಸೂಕ್ತ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಖರೀದಿ ಕೇಂದ್ರಗಳನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ರೈತರಿಗೆ ಪ್ರೋತ್ಸಾಹಧನ, ತರಬೇತಿ ನೀಡಬೇಕು
-ವೀರಶೆಟ್ಟಿ ಪಾಟೀಲ ಅಣವಾರ, ತೊಗರಿ ಬೆಳೆಗಾರ, ಕಲಬುರ್ಗಿ ಜಿಲ್ಲೆ


ಅಜಮೋದ್ದಿನ್

ಇಂದಿನ ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಸಾಕಷ್ಟು ಖರ್ಚು ಮಾಡಿ ತೊಗರಿ ಬೆಳೆದಿದ್ದೇವೆ. ಕೂಲಿಕಾರರ ಕೂಲಿ ಹಣವೂ ಹೆಚ್ಚಾಗಿದೆ. ಹೆಚ್ಚು ಮಳೆಯಾಗಿ ಕೆಲವು ಕಡೆ ಬೆಳೆ ಹಾನಿಯಾಗಿದೆ. ಹೀಗಾಗಿ ತೊಗರಿಗೆ ₹6,500 ಬೆಂಬಲ ಸಿಕ್ಕರೆ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಗಮನ ಹರಿಸಬೇಕು.
-ಅಜಮೋದ್ದಿನ್ ಯಳವಂತಿ, ರೈತ, ಮರತೂರು, ಕಲಬುರ್ಗಿ ಜಿಲ್ಲೆ

ಇಚ್ಛಾಶಕ್ತಿ ಕೊರತೆಯಿಂದಾಗಿ ತೊಗರಿ ಅಭಿವೃದ್ಧಿ ಮಂಡಳಿಯ ಕಟ್ಟಡ ನಿರ್ಮಾಣ ಆಗಿಲ್ಲ. ಅಲ್ಲದೆ, ಮಂಡಳಿಯ ನೈಜ ಕಾರ್ಯಕ್ರಮಗಳು ಅನುಷ್ಠಾನ ಆಗಿಲ್ಲ. ಕಲಬುರ್ಗಿಯ ತೊಗರಿಗೆ ಭೌಗೋಳಿಕ ಮಾನ್ಯತೆ ಸಿಕ್ಕು ಒಂದು ವರ್ಷವಾದರೂ ಅದರ ಉಪಯೋಗ ಆಗಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು
-ಬಸವರಾಜ ಇಂಗಿನ, ಅಧ್ಯಕ್ಷರು, ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘ


ಬಸವರಾಜ ಇಂಗಿನ

ಮಂಡಳಿಯ ಆಡಳಿತ ಭವನ, ರೈತ ತರಬೇತಿ ಕೇಂದ್ರ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಸರ್ಕಾರ ಈಗಾಗಲೇ ಆರು ಎಕರೆ ಜಮೀನು ನೀಡಿದೆ. ಕಟ್ಟಡ ಕಾಮಾಗಾರಿಗೆ ಮಂಡಳಿಯ ಅಧ್ಯಕ್ಷರೂ ಆಗಿರುವ ಸಚಿವ ಬಿ.ಸಿ.ಪಾಟೀಲ ಅವರು ಶೀಘ್ರ ಚಾಲನೆ ನೀಡಲಿದ್ದಾರೆ.
-ಕರುಣಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು