ಕಲಬುರಗಿ: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್)ಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಯಡವಟ್ಟಿನಿಂದಾಗಿ ಕೆಸೆಟ್ ಆಕಾಂಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ.
ಕೆಸೆಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದರೂ ಅರ್ಜಿ ಡೌನ್‌ಲೋಡ್ ಆಗುತ್ತಿಲ್ಲ. ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಲು ಯತ್ನಿಸಿದರೆ, ‘ಶುಲ್ಕ ಪಾವತಿಯಾಗಿಲ್ಲ, ಶುಲ್ಕ ಪಾವತಿಸಿ’ ಎಂದು ಪರದೆಯ ಮೇಲೆ ತೋರಿಸುತ್ತಿದೆ. ಅರ್ಜಿ ಸಲ್ಲಿಕೆ ಆರಂಭ ಆದಾಗಿನಿಂದಲೂ ಈ ಸಮಸ್ಯೆಯಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಪ್ರಾಧಿಕಾರದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ತಾಂತ್ರಿಕ ಸಿದ್ಧತೆಯು ಅರೆಬರೆಯಾಗಿದ್ದು, ಆಕಾಂಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ.
ಅರ್ಜಿ ಸಲ್ಲಿಕೆ ವೇಳೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಇರುವಂತೆ ತಂದೆ ಅಥವಾ ಪತಿ ಹೆಸರು ಬರೆದರೆ ಅರ್ಜಿಯಲ್ಲಿ ಮಾನ್ಯವಾಗುತ್ತಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ನಂಬರ್ ನಮೂದಿಸಿದ ಬಳಿಕ, ತಂದೆಯ ಅಥವಾ ಪತಿಯ ಹೆಸರು ಸರಿಹೊಂದುತ್ತಿಲ್ಲ ಎಂದು ಅರ್ಜಿ ತಿರಸ್ಕೃತಗೊಳ್ಳುತ್ತದೆ. ಹೀಗಾಗಿ ಅರ್ಜಿಯನ್ನು ಸಲ್ಲಿಸುವುದೇ ಹರಸಾಹಸವಾಗಿದೆ ಎಂದು ಆಕಾಂಕ್ಷಿಗಳು ಅಳಲು ತೊಂಡಿಕೊಂಡರು.
ಜುಲೈ 13ರಂದು ಅಧಿಸೂಚನೆ ಹೊರಡಿಸಿತ್ತು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜುಲೈ 22ರಿಂದ ಅವಕಾಶ ನೀಡಿತ್ತು. ಆದರೆ, ಕೆಇಎ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಇದ್ದುದರಿಂದ, ಮತ್ತೆ ಅರ್ಜಿ ಸಲ್ಲಿಕೆಯನ್ನು ಅವಧಿಯನ್ನು ಜುಲೈ 29ಕ್ಕೆ ಮುಂದೂಡಿತ್ತು. ಆಗಸ್ಟ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರದಾಡುವಂತಾಗಿದೆ.
ಹಿಂದೆಯೂ ನಿಗಮ ಮಂಡಳಿ ನೇಮಕ ಸೇರಿದಂತೆ ಹಲವು ನೇಮಕಗಳ ಪರೀಕ್ಷೆಗಳಲ್ಲಿ ಕೆಇಎ ಲೋಪಗಳನ್ನು ಮಾಡಿತ್ತು. ಕಳೆದ ಬಾರಿ ಕೆಸೆಟ್ ಪರೀಕ್ಷೆ ಕೇಂದ್ರಗಳಿಗೆ ಸಂಬಂಧಿಸಿದಂತೆ ಕೆಇಎ ಕೈಗೊಂಡ ನಿರ್ಧಾರಗಳಿಂದಾಗಿ ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು. ಪದವಿ ಶಿಕ್ಷಕರ ನೇಮಕಾತಿಯ ವೇಳೆಯಲ್ಲಿಯೂ ವಿವಾಹಿತ ಮಹಿಳೆಯರ ಜಾತಿ ಪ್ರಮಾಣ ಪತ್ರದ ವಿಷಯದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸುವ ನೇಮಕಾತಿಗಳಲ್ಲಿ ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇದೆ. ಇದರಿಂದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲಿಂದ ಮೇಲೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಕೆಇಎ ಅಧಿಕಾರಿಗಳು ಪರೀಕ್ಷೆಗಳನ್ನು ನಡೆಸುವುದಕ್ಕಿಂತ ಮುಂಚೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಅವರ ತಪ್ಪು ನಡೆಗಳಿಂದ ನಾವು ಸಂಕಷ್ಟ ಅನುಭವಿಸುವುದು ತಪ್ಪುತ್ತದೆ ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.