ಶನಿವಾರ, ಮಾರ್ಚ್ 6, 2021
27 °C
ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ. ಚನ್ನೇಗೌಡ

‘ಕುವೆಂಪು ಕೃತಿಗಳಲ್ಲಿ ಸಮಗ್ರತೆ ಅನುಭೂತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರು ಯಥೇಚ್ಛ ಸಾಹಿತ್ಯ ಭಂಡಾರವನ್ನೇ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅವರ ಕೃತಿಗಳನ್ನು ಓದಿದರೆ 20ನೇ ಶತಮಾನದ ಸಾಹಿತ್ಯವನ್ನೆಲ್ಲ ಓದಿದಂತಹ ಅನುಭೂತಿಯಾಗುತ್ತದೆ ಎಂದು ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ. ಚನ್ನೇಗೌಡ ಬಣ್ಣಿಸಿದರು.

ನಗರದ ಸರ್ವಜ್ಞ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಮತ್ತು ಗಾಯಕ ದಿ. ಸಿ. ಅಶ್ವಥ್ ಅವರ ಜನ್ಮ ದಿನದ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ, ಕೃಷಿ, ಮಹಿಳೆ, ಶೂದ್ರ ಇನ್ನಿತರ ಆಯಾಮಗಳನ್ನು ಒಳಗೊಂಡ ಕಾದಂಬರಿ, ನಾಟಕ, ಶಿಶು ಸಾಹಿತ್ಯ, ಕವನ ಸಂಕಲನ ಹೀಗೆ ಸಾಹಿತ್ಯದ ಎಲ್ಲ ನೆಲೆಗಳನ್ನು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ ಎಂದರು.

ಶೂದ್ರ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿ, ಕನ್ನಡದ ಅಸ್ಮಿತೆಯನ್ನು ನಮ್ಮೆಲ್ಲರಿಗೆ ತೋರಿಸಿಕೊಟ್ಟ ನಾಡಿನ ಶ್ರೇಷ್ಠ ಕವಿ ಕುವೆಂಪು. ಮೇಲು, ಕೀಳು ಎಂಬ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಸಮಾನರೆಂಬ ಭಾವನೆಯನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

‘ಯಾವ ಭಾಷೆಯ ಮೇಲೆಯೂ ದ್ವೇಷವಿಲ್ಲ. ಭಾಷೆಯನ್ನು ಎಲ್ಲರೂ ಗೌರವಿಸಬೇಕು. ಆದರೆ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆಯನ್ನು ಬಲವಂತದಿಂದ ಹೇರಿ ನಮ್ಮ ಪ್ರಾದೇಶಿಕ ಭಾಷೆಗಳ ಅಳಿವಿಗೆ ಸಂಚು ನಡೆಸುತ್ತಿರುವರೆಂಬ ಭಯ, ಆತಂಕ ನಮ್ಮನ್ನು ಕಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಕುವೆಂಪು ಅವರು ನೀಡಿದ ಸರ್ವೋದಯ, ಸಮನ್ವಯ, ವಿಶ್ವಮಾನವನ ಸಂದೇಶ ಜಾಗತಿಕ ವೇದಿಕೆಯಲ್ಲಿ ಬೃಹತ್‌ ಮಟ್ಟದಲ್ಲಿ ಪರಿಣಾಮ ಮೂಡಿಸಿವೆ. ಕುವೆಂಪು ಅವರ ದೈಹಿಕ ಚಿತ್ರಣ ನೋಡಲು ಆಗದು. ಆದರೆ ಅವರಿಗೆ ಸ್ಫೂರ್ತಿ ನೀಡಿದ ಊರು, ಬೆಟ್ಟ–ಗುಡ್ಡ, ಕಾಡು, ಪರಿಸರವನ್ನು ನೋಡಿ ಮತ್ತು ಅವರ ಸಾಹಿತ್ಯವನ್ನು ಓದಿ ಅವರನ್ನು ಅರ್ಥೈಸಿಕೊಳ್ಳಬೇಕು’ ಎಂದರು.

ಹಿರಿಯ ಸಾಹಿತಿ ಶಿವಶಾಂತರೆಡ್ಡಿ ಕುವೆಂಪು ವ್ಯಕ್ತಿತ್ವವನ್ನು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ, ಪತ್ರಕರ್ತರಿಗೆ ಕುವೆಂಪು ಪ್ರಶಸ್ತಿ ಹಾಗೂ ಗಾಯಕ ಸಿ.ಅಶ್ವಥ್ ಅವರ ಸವಿ ನೆನಪಿಗಾಗಿ ಗಾಯಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕ್ರಿಯಾ ಸಮಿತಿ ಅಧ್ಯಕ್ಷ ರೆಹಮಾನ್ ಮಸ್ಕಿ, ವಿಭಾಗ 1ರ ಕ್ರಿಯಾ ಸಮಿತಿ ಅಧ್ಯಕ್ಷ ವಿಠ್ಠಲ್ ಭೀಮನ್, ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಕಿರದಳ್ಳಿ ಇದ್ದರು.

ಕರವೇ ಪದಾಧಿಕಾರಿಗಳಾದ ಚರಣರಾಜ ರಾಠೋಡ, ಪ್ರಲ್ಹಾದ್ ಹಡಗಿಲಕರ್, ನಾಗರಾಜ ಮಡಿವಾಳ, ಯಲ್ಲಯ್ಯ ಗುತ್ತೇದಾರ, ನಿಸಾರ್ ಅಹ್ಮದ್, ಕವೀನ್ ನಾಟೀಕಾರ ಇನ್ನಿತರರಿದ್ದರು.

ಇದೇ ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹೊರತಂದ ಮಹಿಳಾ ಧ್ವನಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು