ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರೆ’ಯಾದ ಉಜ್ವಲ; ಬಳಕೆದಾರರ ಸಂಖ್ಯೆ ಕ್ಷೀಣ

ಹೆಚ್ಚಿದ ಎಲ್‌ಪಿಜಿ ಬೆಲೆ; ಗ್ರಾಮಗಳಿಂದ ಪಟ್ಟಣಗಳಿಗೆ ತೆರಳಿ ಸಿಲಿಂಡರ್ ಪಡೆಯಬೇಕಾದ ಅನಿವಾರ್ಯತೆ
Last Updated 18 ಏಪ್ರಿಲ್ 2022, 4:56 IST
ಅಕ್ಷರ ಗಾತ್ರ

ಕಲಬುರಗಿ: ಗ್ರಾಮೀಣ ಪ್ರದೇಶದ ಮನೆಗಳನ್ನು ಹೊಗೆ ರಹಿತ ಅಡುಗೆ ಮನೆಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಉಜ್ವಲ ಅಡುಗೆ ಅನಿಲ ಸಿಲಿಂಡರ್ ವಿತರಣೆ ಯೋಜನೆಯು ಮುಗ್ಗರಿಸುತ್ತಿದೆ. ಇದಕ್ಕೆ ಕಾರಣ: ಬೆಲೆ ಏರಿಕೆ ಮತ್ತು ಸಿಲಿಂಡರ್ ಪಡೆಯಲು ದೂರದ ಪಟ್ಟಣಗಳಿಗೆ ತೆರಳಬೇಕಿರುವುದು.

ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪಡೆದ ಬಿಪಿಎಲ್ ಪಡಿತರ ಚೀಟಿಯುಳ್ಳ ಬಡವರು ಸಿಲಿಂಡರ್ ಬಳಕೆ ಕಡಿಮೆ ಮಾಡಿದ್ದಾರೆ. ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ನಗರ ಪ್ರದೇಶದಲ್ಲಿ ₹970 ಮತ್ತು ₹ 30 ಕಮಿಷನ್ ಸೇರಿ ₹ 1 ಸಾವಿರ ತಲುಪಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೆಚ್ಚುವರಿ ₹ 200 ಖರ್ಚು ಮಾಡಬೇಕು.

ಇಷ್ಟೊಂದು ಖರ್ಚು ಮಾಡುವಷ್ಟು ಆರ್ಥಿಕ ಸಬಲತೆ ಇಲ್ಲದಿರುವುದರಿಂದ ಜಿಲ್ಲೆಯ ಬಹುತೇಕ ಬಡ ಕುಟುಂಬಗಳು ಉಜ್ವಲ ಯೋಜನೆಯಡಿ ನೀಡಲಾದ ಗ್ಯಾಸ್ ಒಲೆಗಳನ್ನು ಬಳಸುತ್ತಿಲ್ಲ. ಅಲ್ಲದೇ, ಗ್ಯಾಸ್ ಖಾಲಿಯಾದರೆ ಬಹುತೇಕ ಏಜೆನ್ಸಿಯವರು ಆ ಗ್ರಾಮಗಳಿಗೆ ಸಿಲಿಂಡರ್‌ಗಳನ್ನು ಪೂರೈಸುವುದಿಲ್ಲ.

ಹೀಗಾಗಿ, ಅನಿವಾರ್ಯವಾಗಿ ಒಬ್ಬರ ಬೈಕ್ ಪಡೆದು ಅದಕ್ಕೆ ಪೆಟ್ರೋಲ್ ಖರ್ಚು ಕೊಟ್ಟು ಸಿಲಿಂಡರ್‌ ತರಿಸಲು ಏಜೆನ್ಸಿಯ ಕಚೇರಿ ಇರುವ ಪಟ್ಟಣ ಅಥವಾ ನಗರಕ್ಕೆ ಕಳಿಸಬೇಕು. ಸಿಲಿಂಡರ್ ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಕೂರಲು ಮನೆಯ ಒಬ್ಬ ಸದಸ್ಯ ಅಂದಿನ ಕೂಲಿ ಕೆಲಸ ಬಿಡಬೇಕು.

‘ಗ್ಯಾಸ್ ಸಿಲಿಂಡರ್ ದರ, ಹೋಗಿ ಬರುವ ಖರ್ಚು ಮತ್ತು ಕೂಲಿನು ಬಿಟ್ಟು ಹೋಗಬೇಕಿರುವ ಕಾರಣ ₹ 1200ರಿಂದ ₹ 1300ರವರೆಗೆ ಖರ್ಚು ತಗಲುತ್ತದೆ’ ಎನ್ನುತ್ತಾರೆ ಕಮಲಾಪುರ ತಾಲ್ಲೂಕು ವಿ.ಕೆ. ಸಲಗರ ಗ್ರಾಮದ ಜಯಶ್ರೀ ಕಟ್ಟಿಮನಿ.

ಬಾರದ ಸಬ್ಸಿಡಿ: ಮೂರು ವರ್ಷಗಳ ಹಿಂದೆಯೇ ಜಿಲ್ಲೆಯ ಲಕ್ಷಾಂತರ ಜನರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಉಜ್ವಲ ಯೋಜನೆಯಡಿ ವಿತರಿಸಲಾಗಿದೆ. ಆದರೆ, ಅದಕ್ಕೆ ಸಬ್ಸಿಡಿಯೂ ಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದರಿಂದ ಎಲ್‌ಪಿಜಿ ಬಳಕೆಯತ್ತ ಜನರು ನಿರಾಸಕ್ತಿ ತೋರುತ್ತಿದ್ದಾರೆ. ದುಬಾರಿ ದರ ಹಾಗೂ ಗ್ಯಾಸ್ ವಿತರಣೆಯಲ್ಲಿನ ಸವಾಲುಗಳಿಂದ ಸರ್ಕಾರದ ಪ್ರಮುಖ ಯೋಜನೆಯೊಂದು ಮುಗ್ಗರಿಸಲಾರಂಭಿಸಿದೆ.

ಕಮಲಾಪುರ ತಾಲ್ಲೂಕಿನ ಹೊಡಲ, ವಿ.ಕೆ. ಸಲಗರ, ಶ್ರೀಚಂದ, ಅಪಚಂದ, ಆಳಂದ ತಾಲ್ಲೂಕಿನ ನರೋಣಾ, ಬೋಧನ್, ಚಿತ್ತಾಪುರ, ವಾಡಿ ಭಾಗದ ಕೆಲವು ಗ್ರಾಮ ಹಾಗೂ ತಾಂಡಾಗಳಿಗೆ ಸಿಲಿಂಡರ್ ತಲುಪಿಸುವುದೇ ಸವಾಲಾಗಿದೆ.

ಹೊಸ ಸಂಪರ್ಕಕ್ಕೂ ದರ: ‘ಹೊಸ ಸಂಪರ್ಕ ಪಡೆಯುವ ಬಿಪಿಎಲ್‌ ಕಾರ್ಡುದಾರರಿಗೆ ಉಚಿತವಾಗಿ ಒಲೆ, ಸಿಲಿಂಡರ್‌ ನೀಡಬೇಕು. ಆದರೆ, ಹಲವು ಕಡೆ ಮಧ್ಯವರ್ತಿಗಳು ₹ 500 ಪಡೆದಿದ್ದಾರೆ. ಗುಣಮಟ್ಟದ ಒಲೆ ನೀಡಿಲ್ಲ. ಹೀಗಾಗಿ, ಆ ಒಲೆಗಳನ್ನು ಬಿಟ್ಟು ಹೊಸ ಒಲೆ ಖರೀದಿಸಬೇಕಾಯಿತು’ ಎನ್ನುತ್ತಾರೆ ಜಯಶ್ರೀ ಹಾಗೂ ಕಮಲಾಪುರ ತಾಲ್ಲೂಕು ಹೊಡಲ್ ಗ್ರಾಮದ ಸಾವಿತ್ರಿ ಜಮಾದಾರ.

***

ದುಬಾರಿ ಗ್ಯಾಸ್ ದರ

ಎಲ್‌ಪಿಜಿ ಗ್ಯಾಸ್ ದರ ದುಬಾರಿಯಾಗಿರುವುದರಿಂದ ಅದರ ಬಳಕೆ ಕಡಿಮೆ ಮಾಡಿದ್ದೇವೆ. ಇದರ ಜೊತೆಗೆ ನಗರ ಪ್ರದೇಶಗಳಲ್ಲಿ ಗ್ಯಾಸ್ ಏಜೆನ್ಸಿಯವರೇ ಮನೆಯವರೆಗೆ ತಂದು ಸಿಲಿಂಡರ್‌ಗಳನ್ನು ಒದಗಿಸುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಒಂದು ಸಿಲಿಂಡರ್ ಖಾಲಿಯಾದರೆ ಅದನ್ನು ತರಲು ಒಂದು ಆಟೊ ಅಥವಾ ಬೈಕ್ ಮಾಡಿಕೊಂಡು ಪಟ್ಟಣಕ್ಕೆ ಹೋಗಬೇಕು. ಸಿಲಿಂಡರ್ ಸಾಗಣೆ ವೆಚ್ಚ ನಾವೇ ಭರಿಸಬೇಕು.

ಜಯಶ್ರೀ ಕಟ್ಟಿಮನಿ, ವಿ.ಕೆ. ಸಲಗರ, ಕಮಲಾಪುರ ತಾಲ್ಲೂಕು

***

ನಾವು ಬದುಕುವುದು ಹೇಗೆ?

ಅಡುಗೆ ಅನಿಲ ದರ ಸತತವಾಗಿ ಏರಿಕೆಯಾಗುತ್ತಿದ್ದು, ಗ್ರಾಮೀಣ ಜನರಿಗೆ ಗರ ಬಡಿದಂತಾಗಿದೆ. ಗ್ರಾಮೀಣ ಭಾಗದಲ್ಲಿ ಕೆಲಸವೇ ಸಿಗುತ್ತಿಲ್ಲ. ಅಂಥದ್ದರಲ್ಲಿ ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಮಾಡಿದರೆ ನಾವು ಬದುಕುವುದು ಹೇಗೆ ಎಂಬ ಯೋಚನೆ ಕಾಡತೊಡಗಿದೆ.

ಕವಿತಾ, ಪಾಳಾ, ಕಲಬುರಗಿ ತಾಲ್ಲೂಕು

***

ಉರುವಲೇ ಗತಿ

ಸರ್ಕಾರವು ಉರುವಲು ಕಟ್ಟಿಗೆ ಬಳಸಿ ಒಲೆ ಹೊತ್ತಿಸುವುದನ್ನು ತಡೆಯಲು ಉಚಿತ ಗ್ಯಾಸ್ ಹಾಗೂ ಒಲೆ ನೀಡಿತ್ತು. ಆಗ ನಮಗೂ ಸಂತೋಷವಾಗಿತ್ತು. ಆದರೆ, ನಿರಂತರವಾದ ಗ್ಯಾಸ್ ಬೆಲೆ ಏರಿಕೆಯಿಂದ ನಾವು ಉರುವಲು ಕಟ್ಟಿಗೆ ಆಶ್ರಯಿಸಬೇಕಿದೆ.

ನಾಗಮ್ಮ ಹಂಗರಗಿ, ಪಾಳಾ, ಕಲಬುರಗಿ ತಾಲ್ಲೂಕು

***

‘ಸಭೆಯಲ್ಲಿ ಚರ್ಚಿಸುತ್ತೇವೆ’

ಗ್ರಾಮೀಣ ಪ್ರದೇಶಗಳಿಗೂ ಸಿಲಿಂಡರ್‌ಗಳನ್ನು ವಿತರಿಸಬೇಕು ಎಂಬ ಆದೇಶವಿದೆ. ಯಾವ ಗ್ರಾಮಕ್ಕಾದರೂ ತಲುಪುತ್ತಿಲ್ಲ ಎಂಬ ನಿರ್ದಿಷ್ಟ ದೂರುಗಳಿದ್ದರೆ ಎಲ್‌ಪಿಜಿ ವಿತರಕರ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.

ಶಾಂತಗೌಡ ಗುಣಕಿ, ಉಪನಿರ್ದೇಶಕ, ಆಹಾರ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT