ಕಲಬುರಗಿ: ‘ದಶಕದ ಬಳಿಕ ಕಲಬುರಗಿಯಲ್ಲಿ ಇದೇ 17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರದ ಹಂತದಲ್ಲಿ ಪ್ರದೇಶದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಬಾಕಿ ಇದ್ದಲ್ಲಿ ಕೂಡಲೇ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ–ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಂಗಳವಾರ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಜಿಲ್ಲಾಧಿಕಾರಿ ಅವರು ಸರ್ಕಾರದಲ್ಲಿ ಬಾಕಿ ಇರುವ ಪ್ರಸ್ತಾವಗಳ ಬಗ್ಗೆ ಚರ್ಚಿಸಲಿದ್ದಾರೆ. ಸಂಪುಟ ಸಭೆಯ ಗಾಂಭೀರ್ಯ ಅರಿತು ಕೂಡಲೇ ಇಲಾಖಾವಾರು ಆಯಾ ಅಧಿಕಾರಿಗಳು ಬಾಕಿ ಪ್ರಸ್ತಾವನೆ ಬಗ್ಗೆ ಮಾಹಿತಿ ನೀಡಿದಲ್ಲಿ ಅದನ್ನು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲು ಸರ್ವ ಪ್ರಯತ್ನ ಮಾಡಲಾಗುವುದು’ ಎಂದರು.
ಮುಖ್ಯಮಂತ್ರಿ ಸೇರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸುವುದರಿಂದ ಕಲಬುರಗಿ ನಗರದಾದ್ಯಂತ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು. ನಗರದಲ್ಲಿ ಅನಧಿಕೃತ ಬ್ಯಾನರ್, ಪೋಸ್ಟರ್ ತೆರವುಗೊಳಿಸುವುದಲ್ಲದೆ ನಗರ ಸೌಂದರ್ಯೀಕರಣಕ್ಕೆ ಒತ್ತು ನೀಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಸಚಿವರು, ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಚಿವರಿಗೆ ಆಯಾ ಇಲಾಖೆ ಅಧಿಕಾರಿಗಳೇ ಲೈಸನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸೆ.15 ರಿಂದ 17ರವರೆಗೆ ನಗರದಾದ್ಯಂತ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಬೇಕು. ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಪೊಲೀಸ್ ಪರೇಡ್ ಮೈದಾನದಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಜಿಲ್ಲೆಯ ಜೀವನಾಡಿಯಾದ ಭೀಮಾ ನದಿಯ ನೀರನ್ನು ಮಹಾರಾಷ್ಟ್ರ ಹಿಡಿದಿಟ್ಟುಕೊಳ್ಳುತ್ತಿರುವುದರಿಂದ ಪ್ರತಿ ವರ್ಷ ಜಿಲ್ಲೆಯ 155 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕಲುಷಿತ ನೀರು ನದಿಗೆ ಸೇರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಭೀಮಾ ನ್ಯಾಯಮಂಡಳಿ ಸ್ಥಾಪಿಸಬೇಕಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿ’ ಎಂದು ಹೇಳಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ ಪಾಟೀಲ ಹುಮನಾಬಾದ, ಪಾಲಿಕೆಯ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಅವರು ಭಾಗಿಯಾಗಿದ್ದರು.
ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಓ ಭಂವರ್ ಸಿಂಗ್ ಮೀನಾ, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಎಫ್ ಸುಮಿತ್ ಪಾಟೀಲ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಶಂಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಕಲಬುರಗಿ ಬೆಳೆಯುತ್ತಿರುವುದರಿಂದ ಸಮಗ್ರ ಮೂಲಸೌಕರ್ಯಕ್ಕೆ ₹ 100 ಕೋಟಿ ವಿಶೇಷ ಅನುದಾನ ಘೋಷಿಸಬೇಕು. ನಗರದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಿರ್ಮಿಸಬೇಕುಅಲ್ಲಮಪ್ರಭು ಪಾಟೀಲ ಕಲಬುರಗಿ ದಕ್ಷಿಣ ಶಾಸಕ
ಚಂದ್ರಂಪಳ್ಳಿ ಜಲಾಶಯದ ಪರಿಸರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಅರಣ್ಯ ಕಾಲೇಜು ಸ್ಥಾಪನೆ ನನೆಗುದಿಗೆ ಬಿದ್ದಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕುಅವಿನಾಶ ಜಾಧವ ಚಿಂಚೋಳಿ ಶಾಸಕ
ಕಲಬುರಗಿ ನಗರದ ಸರ್ವೆ 1972–76ರ ಅವಧಿಯಲ್ಲಿ ಆಗಿದ್ದು ನಗರ ಬೆಳವಣಿಗೆ ದೃಷ್ಟಿಯಿಂದ ಮತ್ತೆ ಸರ್ವೆ ಮಾಡುವ ಅವಶ್ಯಕತೆ ಇದೆಕನೀಜ್ ಫಾತಿಮಾ ಕಲಬುರಗಿ ಉತ್ತರ ಶಾಸಕಿ
ಕಮಲಾಪುರ ಬಸ್ ನಿಲ್ದಾಣವು ಚಿಕ್ಕದಾಗಿದ್ದು ನಿವೇಶನ ದೊರಕಿಸಿಕೊಡುವ ಮೂಲಕ ದೊಡ್ಡ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಬೇಕುಬಸವರಾಜ ಮತ್ತಿಮಡು ಕಲಬುರಗಿ ಗ್ರಾಮೀಣ ಶಾಸಕ
ಪ್ರದೇಶದ ನೀರಾವರಿ ಯೋಜನೆಗಳಿಗೆ ಆದ್ಯತೆ ಸಿಗಬೇಕು. ಹಿಂದಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಸ್ಥಾಪಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಶಾಶ್ವತ ಕಟ್ಟಡ ನಿರ್ಮಿಸಬೇಕುತಿಪ್ಪಣ್ಣಪ್ಪ ಕಮಕನೂರ ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.