ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ವಿತರಣಾ ನಾಲೆ ಕಾಮಗಾರಿ ಬಾಕಿ: ರೈತರ ಹೊಲಗಳಿಗೆ ಹರಿಯದ ನೀರು

Published 3 ಆಗಸ್ಟ್ 2024, 5:33 IST
Last Updated 3 ಆಗಸ್ಟ್ 2024, 5:33 IST
ಅಕ್ಷರ ಗಾತ್ರ

ಚಿಂಚೋಳಿ: ‘ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಲುವೆ ಜಾಲದ ಬಲವರ್ಧನೆ ಕಾಮಗಾರಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ತೆವಳುತ್ತ ಸಾಗಿದೆ. ಇದರಿಂದಾಗಿ ಕಾಲುವೆಯ ವಿತರಣಾ ನಾಲೆಗಳ ಮೂಲಕ ರೈತರ ಹೊಲಗಳಿಗೆ ನೀರು ಹರಿಯದಂತಾಗಿದೆ. ಇದು ರೈತರನ್ನು ಹೈರಾಣಾಗಿಸಿದೆ.

‘ಮುಖ್ಯ ಕಾಲುವೆಯು, ನಾಗರಾಳ ಜಲಾಶಯದಿಂದ ನಿಡಗುಂದಾ ಸಮೀಪದವರೆಗೆ 80 ಕಿ.ಮೀ ಉದ್ದವಿದೆ. ಸುಮಾರು 64 ವಿತರಣಾ ನಾಲೆಗಳಿವೆ. ಆದರೆ ಹಲವಾರು ವಿತರಣಾ ನಾಲೆಗಳ ಕಾಮಗಾರಿ ಬಾಕಿ ಉಳಿದಿದ್ದು, ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ.

ಮುಖ್ಯ ಕಾಲುವೆಯ ಕಿ.ಮೀ. 60ರಲ್ಲಿ 300 ಮೀ., ಕಿ.ಮೀ 65ರಲ್ಲಿ 200 ಮೀ., ಕಿ.ಮೀ 68ರಲ್ಲಿ 300 ಮೀ., ಹೀಗೆ ಒಟ್ಟು 800 ಮೀಟರ್ ಕಾಮಗಾರಿ ನಡೆದಿಲ್ಲ. ವಿತರಣಾ ನಾಲೆಗಳಾದ 18, 24, 27, 40 ಇವುಗಳ ಕಾಮಗಾರಿಯೇ ಆರಂಭವಾಗಿಲ್ಲ. ಇದಕ್ಕೆ ರೈತರ ವಿರೋಧವೇ ಕಾರಣವಾಗಿದ್ದು, ಮುಖ್ಯ ಕಾಲುವೆಯ ಬಾಕಿ ಕಾಮಗಾರಿಗೆ ಭೂಮಿ ಕಳೆದುಕೊಂಡ ರೈತರಿಗೆ ಭೂ ಸ್ವಾಧೀನದ ಪರಿಹಾರ ಲಭಿಸಿಲ್ಲ ಎಂಬ ಆರೋಪವಿದೆ.

‘ಯೋಜನೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸದ್ಯ ಅಲ್ಲಲ್ಲಿ ಹೂಳು ತೆಗೆಯಬೇಕಾಗಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತ್ರಿಲೋಚನ ಜಾಧವ ತಿಳಿಸಿದರು.

‘ಮುಖ್ಯ ಕಾಲುವೆಯ ಕೆಲಸ ತೃಪ್ತಿಕರವಾಗಿಲ್ಲ. ವಿತರಣಾ ನಾಲೆಗಳು ಅರೆಬರೆ ಕೆಲಸ ಮಾಡಿದ್ದರಿಂದ ನೀರು ರೈತರ ಹೊಲಗಳಿಗೆ ಸರಾಗವಾಗಿ ಹರಿಯದಂತಾಗಿದೆ. ಇಲ್ಲಿನ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ಬಗ್ಗೆ ನಡೆದ ತನಿಖೆ ಬಹಿರಂಗವಾಗಿಲ್ಲ’ ಎಂದು ನೀರಾವರಿ ಹೋರಾಟಗಾರ, ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಯೋಜನೆಯ ವಿತರಣಾ ನಾಲೆ ಸಂಖ್ಯೆ 27 ಮತ್ತು 28ರಲ್ಲಿ ಕೆಲಸ ಆಗಿಲ್ಲ. 27ರಲ್ಲಿ ಅಗೆದು ಹಾಗೇ ಬಿಟ್ಟಿದ್ದರೆ, 28ರಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ ಘಾಲಿ ದೂರಿದ್ದಾರೆ.

₹110 ಕೋಟಿ ಪಾವತಿ: ಯೋಜನೆಯ ಕಾಲುವೆ ಜಾಲದ ಬಲವರ್ಧನೆಗಾಗಿ ಮಂಜೂರಾದ ಅಂದಾಜು ₹125 ಕೋಟಿಗೆ ಬದಲಾಗಿ ಈವರೆಗೆ ಕಾಮಗಾರಿಗೆ ಗುತ್ತಿಗೆದಾರರಿಗೆ ₹110 ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ ಎಂದು ಯೋಜನೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮುಲ್ಲಾಮಾರಿ ಯೋಜನೆಯ ಆಧುನೀಕರಣದ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ. ಕೆಲಸ ಮಾಡದೇ ವಿತರಣಾ ನಾಲೆಗಳ ಆಧುನಿಕರಣದ ಖೊಟ್ಟಿ ದಾಖಲೆ ಸಲ್ಲಿಸಿ ಬಿಲ್ಲು ಎತ್ತಿ ಹಾಕಿದ್ದಾರೆ. ಈ ಕುರಿತು ನನಗೆ ಮಾಹಿತಿ ಕೇಳಿದರೆ ನೀಡುತ್ತಿಲ್ಲ
ಮಹಾದೇವಪ್ಪ ಪಾಟೀಲ, ಕಾಂಗ್ರೆಸ್ ಮುಖಂಡ, ಬೆಡಕಪಳ್ಳಿ
ಉಪಗುತ್ತಿಗೆಯಿಂದ ಕಳಪೆ ಕಾಮಗಾರಿ
ವಿತರಣಾ ಕಾಲುವೆಗಳ ಕಾಮಗಾರಿಗೆ ಕಳಪೆಯಾಗಿದ್ದು, ಇದಕ್ಕೆ ಕಾರಣ ಉಪಗುತ್ತಿಗೆ ನೀಡಿರುವುದು. ಇದಕ್ಕಾಗಿ ಜಿಲ್ಲೆಯ ಪ್ರಭಾವಿ ನಾಯಕರು 6 ವರ್ಷಗಳ ಹಿಂದೆ ಉಪಗುತ್ತಿಗೆ ಕೊಡಿಸಲು ತೆರೆಮರೆಯಲ್ಲಿ ಯತ್ನಿಸಿದ್ದರು ಎಂಬ ಆರೋಪವಿದೆ. ಶಾಸಕ ಡಾ.ಅವಿನಾಶ ಜಾಧವ ಅಧಿವೇಶನದಲ್ಲಿ, ಮುಖ್ಯಕಾಲುವೆಯ ಕಾಮಗಾರಿ ಕಳಪೆ ಆಗಿರುವ ಕುರಿತು ಪ್ರಸ್ತಾಪಿಸಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಥ್‌ ನೀಡಿದ್ದರು. ಆದರೆ ಈಗ ಮೌನ ವಹಿಸಿದ್ದಾರೆ. ಅವ್ಯವಹಾರದ ತನಿಖೆ ಏನಾಯಿತು ಎಂಬುದು ಬಹಿರಂಗವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT