ಕಲಬುರ್ಗಿ: ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯ ಸಿಬ್ಬಂದಿಯಲ್ಲಿ ಈಗ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡ್ತಿ, ವರ್ಗಾವಣೆ, ನಿಯೋಜನೆ, ಪದಕ ಪ್ರದಾನ... ಹೀಗೆ ಎಲ್ಲ ಹಂತದಲ್ಲೂ ಸಿಬ್ಬಂದಿ ದೈಹಿಕ ಕಾರ್ಯಕ್ಷಮತೆ ದೃಢಪಡಿಸುವುದು ಅನಿವಾರ್ಯ’ ಎಂದುಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ‘ಪ‍್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಪೊಲೀಸ್ ಸಿಬ್ಬಂದಿಗೆ ಇಲಾಖೆಯು ಈಗ ಸಾಕಷ್ಟು ಸೌಕರ್ಯ, ಸಂಬಳ ನೀಡುತ್ತಿದೆ. ಇನ್ನು ಮುಂದೆ ಸೌಕರ್ಯಕ್ಕೆ ತಕ್ಕಂತೆ ಕೆಲಸ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು.
‘ಸೇವಾ ಹಿರಿತನ ಹಾಗೂ ನಿಯಮದ ಪ್ರಕಾರ ಬಡ್ತಿ, ವರ್ಗಾವಣೆ ನೀಡಿದರೂ ಆರೋಗ್ಯ ಸದೃಢತೆ ದೃಢಪಡಿಸುವುದು ಕಡ್ಡಾಯ. ಅಸಮರ್ಥ, ಅನಾರೋಗ್ಯಕ್ಕೆ ಒಳಗಾದವರು ಕಾರ್ಯಕ್ಷಮತೆ ದೃಢಪಡಿಸಿದ ಬಳಿಕವೇ ಬಡ್ತಿ ಸಿಗಲಿದೆ. ಅಲ್ಲಿಯವರೆಗೆ ಇರುವ ಜಾಗದಲ್ಲೇ ಕೆಲಸ ಮಾಡಬೇಕಾಗುತ್ತದೆ’ ಎಂದು ಹೇಳಿದರು.
‘ಬೊಜ್ಜು, ಅತಿಯಾದ ತೂಕವನ್ನೂ ಅನಾರೋಗ್ಯ ಎಂದೇ ಪರಿಗಣಿಸಲಾಗುತ್ತದೆ. ಫಿಟ್‌ನೆಸ್ ವಿಚಾರದಲ್ಲಿ ಎ, ಬಿ ಮತ್ತು ಸಿ ಎಂದು ಮೂರು ವಿಭಾಗ ಮಾಡಿದ್ದೇವೆ. ದೃಢಕಾಯವಾಗಿ ಇರುವವರು ಎ ವಿಭಾಗದಲ್ಲಿ ಬರುತ್ತಾರೆ. ಮದ್ಯಪಾನ, ಧೂಮಪಾನ, ಗುಟಕಾ ಮೆಲ್ಲುವುದು ಮುಂತಾದ ಚಟಗಳಿಂದ ಆರೋಗ್ಯ ಕ್ಷೀಣಿಸಿದವರನ್ನು ಬಿ ವಿಭಾಗ ಹಾಗೂ ಕ್ಯಾನ್ಸರ್, ಹೃದ್ರೋಗ, ಕೀಲು ಸವೆತ– ಮೂಳೆ ಮುರಿತ ಮುಂತಾದ ಗಂಭೀರ ಸ್ವರೂಪದ ಅನಾರೋಗ್ಯಪೀಡಿತರನ್ನು ಸಿ ವಿಭಾಗದಲ್ಲಿ ಗುರುತಿಸಲಾಗುತ್ತದೆ. ದೈಹಿಕ ಪರಿಶ್ರಮದ ಮೂಲಕ ಸಿ ವಿಭಾಗದವರು ಬಿ ಗೆ ಹಾಗೂ ಬಿ ವಿಭಾಗದವರು ಎ ಗೆ ಅರ್ಹತೆ ಪಡೆಯಬೇಕು’ ಎಂದರು.
‘ಕೆಎಸ್‌ಆರ್‌ಪಿ ಯಲ್ಲಿ ಈಗ ಸಿ ವಿಭಾಗದಲ್ಲಿ 186, ‘ಬಿ’ ನಲ್ಲಿ 1,000 ಹಾಗೂ ‘ಎ’ ನಲ್ಲಿ 7ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 1,015 ಸಿಬ್ಬಂದಿ 10 ಕೆ.ಜಿ ಹೆಚ್ಚಿನ ತೂಕ ಹೊಂದಿದ್ದಾರೆ. ಇವರಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಜನ 5 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಸಿ ಕೆಟಗರಿಯಲ್ಲಿ ಗುರುತಿಸಿದ್ದ 15 ಮಂದಿ ‘ಬಿ’ ಆರ್ಹತೆಗೆ ಬಂದಿದ್ದಾರೆ. ‘ಬಿ’ ನಲ್ಲಿದ್ದ 215 ಮಂದಿ ಪೂರ್ಣ ‘ಫಿಟ್’ ಆಗಿದ್ದಾರೆ. ಈ ಪರಿಶೀಲನೆ ನಿರಂತರವಾಗಿ ಮುಂದುವರಿಯಲಿದೆ’ ಎಂದರು.
‘ಅನಾರೋಗ್ಯವನ್ನೂ ಸವಾಲಾಗಿ ಸ್ವೀಕರಿಸಿ ಗುಣಮುಖರಾಗಿ, ಸದೃಢತೆ ಸಾಧಿಸಿದ ವರಿಗೂ ಪ್ರೋತ್ಸಾಹ, ಪದಕ ವಿತರಣೆಗೆ ಪರಿಗಣಿಸಲಾಗುವುದು’ ಎಂದೂ ಹೇಳಿದರು.
ಪೊಲೀಸರ ಮಕ್ಕಳಿಗೂ ಕೋಚಿಂಗ್
ಕಲಬುರ್ಗಿ: ‘ಪೊಲೀಸರ ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲುಸಿದ್ಧತೆ ನಡೆಸಿದ್ದು, ಮುಂದಿನ ತಿಂಗಳಿಂದಲೇ ಇದು ಚಾಲನೆಗೆ ಬರಲಿದೆ’ ಎಂದು ಅಲೋಕ್ ಕುಮಾರ್ ತಿಳಿಸಿದರು.
‘ಇಲಾಖೆಗೆ ಸೇರಬಯಸುವ ಪೊಲೀಸರ ಮಕ್ಕಳಿಗೂ ಇಲಾಖೆಯಿಂದಲೇ ಪೂರ್ವಸಿದ್ಧತಾ ತರಬೇತಿ ನೀಡುವ ಉದ್ದೇಶವೂ ಇದೆ. ಈಗಾಗಲೇ ಇದು ಬೆಳಗಾವಿಯಲ್ಲಿ ಆರಂಭವಾಗಿದ್ದು, ಮುಂದಿನ ತಿಂಗಳು ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲೂ ಆರಂಭವಾಗಲಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.