ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಮೊದಲ ಕೋವಿಡ್‌ ಕೇಸ್ ಎದುರಿಸಿದ ವೈದ್ಯೆ

Last Updated 1 ಜನವರಿ 2021, 0:48 IST
ಅಕ್ಷರ ಗಾತ್ರ

ದೇಶದ ಮೊದಲ ಕೋವಿಡ್‌ ಪ್ರಕರಣ ಎದುರಿಸಿದ ವೈದ್ಯೆ ರೇಣುಕಾ ಕಟ್ಟಿ

ಕಲಬುರ್ಗಿ: ಕಲಬುರ್ಗಿಯವರೇ ಆದ ಡಾ.ರೇಣುಕಾ ಕಟ್ಟಿ ಅವರು ಮಕ್ತಂಪುರನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಗಿದ್ದಾರೆ. ದೇಶದಲ್ಲೇ ಮೊಟ್ಟ ಮೊದಲು ಕೋವಿಡ್‌ ಸಾವು ಸಂಭವಿಸಿದ್ದು ಮೋಮಿನ್‌ಪುರ ಬಡಾವಣೆಯಲ್ಲಿ. ಇದು ಇವರದೇ ಆರೋಗ್ಯ ಕೇಂದ್ರದ ವ್ಯಾಪ‍್ತಿಗೆ ಬರುತ್ತದೆ. ಕೋವಿಡ್‌ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲದ ಸಂದರ್ಭದಲ್ಲಿ ಡಾ.ರೇಣುಕಾ ಅವರು ಇದೇ ಪ್ರಕರಣಗಳನ್ನು ಎದುರಿಸಬೇಕಾಯಿತು.

ಸೌದಿಯಿಂದ ಮರಳಿದ್ದ ವ್ಯಕ್ತಿ ಕೋವಿಡ್‌ನಿಂದ 2020ರ ಮಾರ್ಚ್‌ 10ರಂದು ಮೃತಪಟ್ಟರು. ಪ್ರಕರಣ ಹೆಚ್ಚುತ್ತಲೇ ಹೋದವು. ಹೀಗಾಗಿ, ದೇಶದ ಚಿತ್ತ ಮೋಮಿನ್‌ಪುರ ಬಡಾವಣೆಯತ್ತ ಹರಿಯುವಂತಾಯಿತು. ಜನರಲ್ಲಿ ಪ್ರಾಣ ಭೀತಿ ಆವರಿಸಿಕೊಂಡಿತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಎದೆಗುಂದದೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದುವರಿದ ರೇಣುಕಾ, ತಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಪಡೆದು ಸೋಂಕಿತರ ಪತ್ತೆ ಕಾರ್ಯಾಚರಣೆಗೆ ಇಳಿದರು.

ಏಪ್ರಿಲ್‌, ಮೇ ತಿಂಗಳಲ್ಲಿ ದೆಹಲಿಯಿಂದ ಬಂದ ‘ತಬ್ಲಿಗಿ’ಗಳು ಕೂಡ ಇದೇ ಬಡಾವಣೆಯಲ್ಲಿದ್ದರು. ಅವರನ್ನು ಪತ್ತೆ ಮಾಡಿ, ಮಾದರಿ ಸಂಗ್ರಹಿಸಿ ವರದಿ ನೀಡುವ ಹೊಣೆಗಾರಿಕೆಯನ್ನೂ ಡಾ.ರೇಣುಕಾ ನಿರ್ವಹಿಸಿದರು. 400ಕ್ಕೂ ಹೆಚ್ಚು ಜನರ ಸ್ಯಾಂಪಲ್‌ಗಳನ್ನು ಖುದ್ದು ಮುಂದೆ ನಿಂತು ಸಂಗ್ರಹಿಸಿದರು. ಜನರಿಗೆ ಮಾಹಿತಿ ರವಾನಿಸಿ ಅವರು ಕೊರೊನಾದಿಂದ ಮುಕ್ತರಾಗುವಂತೆ ಪ್ರಯತ್ನಿಸಿದ್ದು ಇವರ ಹೆಗ್ಗಳಿಕೆ.

***

ವೃತ್ತಿ ನಿಷ್ಠೆಗೆ ಕನ್ನಡಿ ನರ್ಸ್‌ ನಾಗೇಶ್ವರಿ

ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 11 ವರ್ಷಗಳಿಂದ ಸ್ಟಾಫ್‌ ನರ್ಸ್‌ ಆಗಿರುವನಾಗೇಶ್ವರಿ ಎಂ. ಬೆನ್ನೂರಕರ್ ‘ವೃತ್ತಿ ಬದ್ಧತೆ’ಗೆ ಹೆಸರಾದವರು. ಸುತ್ತಲಿನ ಹಳ್ಳಿಗಳ ಜನರಿಗೆ ಚಿರಪ‍ರಿಚಿತರು.

ಕೊರೊನಾ ಸಂದರ್ಭದಲ್ಲಿ ಫ್ರಂಟ್‌ಲೈನ್‌ ವಾರಿಯರ್‌ ಆಗಿಯೂ ಸೇವೆ ಸಲ್ಲಿಸಿದರು.

ಕೊಲ್ಲೂರು ಗ್ರಾಮದ ಸಿದ್ದಮ್ಮ ಹನುಮಂತಪ್ಪ ಎಂಬುವರಿಗೆ ಈಚೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ 10ರ ಸುಮಾರಿಗೆ ಅವರನ್ನು ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಹೆರಿಗೆ ನೋವು ಹೆಚ್ಚಾಗಿದ್ದರಿಂದ ನಾಗೇಶ್ವರಿ ಅವರೇ ಹೆರಿಗೆ ಮಾಡಿಸಲು ಮುಂದಾದರು. ಆದರೆ, 11 ಗಂಟೆ ಸುಮಾರಿಗೆ ವಿದ್ಯುತ್‌ ಕಡಿತಗೊಂಡು, ಇಡೀ ಆಸ್ಪತ್ರೆಗೆ ಕತ್ತಲಾವರಿಸಿತು. ಆಸ್ಪತ್ರೆಯಲ್ಲಿನ ಇನ್ವರ್ಟರ್‌ ಕೂಡ ಕೈಕೊಟ್ಟಿತು. ಎರಡು ತಾಸು ಕಾದರೂ ವಿದ್ಯುತ್‌ ಬರಲಿಲ್ಲ.

ಇಂಥ ಸಂದಿಗ್ಧ ಸ್ಥಿತಿಯಲ್ಲೂ ಎದೆಗುಂದದ ನಾಗೇಶ್ವರಿ ಅವರು, ತಾವೇ ಹೆರಿಗೆ ಮಾಡಿಸಲು ವ್ಯವಸ್ಥೆ ಮಾಡಿಕೊಂಡರು. ನಾಲ್ಕು ಜನರ ಮೊಬೈಲ್ ಪಡೆದು, ಟಾರ್ಚ್‌ ಬಿಟ್ಟು ಅದರ ಬೆಳಕಿನ ಸಹಾಯದಿಂದ ಯಶಸ್ವಿ ಹೆರಿಗೆ ಮಾಡಿಸಿದರು. ಕಠಿಣ ಸಂದರ್ಭದಲ್ಲಿಯೂ ನುಣುಚಿಕೊಳ್ಳದೇ ಧೈರ್ಯ ತೋರಿ ಹೆರಿಗೆ ಮಾಡಿಸಿ ಎರಡು ಜೀವ ಉಳಿಸಿ ಅವರು ಮಾದರಿಯಾದರು.

ನಾಗೇಶ್ವರಿ ಅವರ ವೃತ್ತಿನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಹೆರಿಗೆ ವಿಭಾಗಕ್ಕೆ ಒಂದು ಪ್ರತ್ಯೇಕ ಇನ್ವರ್ಟರ್‌ ಮಂಜೂರು ಮಾಡಿದರು.

***

ಮಾನಸಿಕ ಸ್ಥೈರ್ಯ ತುಂಬಿದ ರಾಚಣ್ಣ

ಕಲಬುರ್ಗಿ: ತಾಲ್ಲೂಕಿನ ಪಟ್ಟಣ ಗ್ರಾಮದ ರಾಚಣ್ಣ ಪಿ. ಬಿಸಗೊಂಡ ಅವರು ಎಂ.ಎಸ್‌.ಡಬ್ಲ್ಯು ಪದವೀಧರ. ಶಿಕ್ಷಣ ಮುಗಿದ ಬಳಿಕ ಶ್ರೀಶ್ರೀ ರವಿಶಂಕರ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯಲ್ಲಿ ಯೋಗ ಕಲಿತು, ಅಲ್ಲಿಯೇ ಯೋಗ ಶಿಕ್ಷಕರಾಗಿದ್ದರು. ನಂತರ ಗ್ರೂಪ್‌–ಡಿ ನೌಕರರಾಗಿ ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಗೆ ಸೇರಿದ್ದು, ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

2020ರ ಮಾರ್ಚ್‌ ಮೊದಲ ವಾರದಿಂದಲೂ ಜಿಮ್ಸ್‌ನ ಕೋವಿಡ್‌ ವಿಭಾಗದಲ್ಲೇ ರಾಚಣ್ಣ ಕೆಲಸ ಮಾಡುತ್ತಿದ್ದಾರೆ. ಇವರ ಶ್ರಮ, ಕಾರ್ಯಶೈಲಿ, ಯೋಗ ಜ್ಞಾನವನ್ನು ಗುರುತಿಸಿದ ಜಿಮ್ಸ್‌ ಅಧಿಕಾರಿಗಳೇ ಅವರನ್ನು ಕೋವಿಡ್‌ ವಾರ್ಡ್‌ಗೆ ನಿಯೋಜಿಸಿದರು. ಕೋವಿಡ್‌ ವಾರ್ಡ್‌ನ ಸ್ವಚ್ಛತೆ, ಸ್ಯಾನಿಟೈಜೇಷನ್‌, ರೋಗಿಗಳ ಆರೈಕೆ ಮಾಡುವುದು ಇವರ ದೈನಂದಿನ ಕೆಲಸ. ಇದರೊಂದಿಗೆ ಆಸ್ಪತ್ರೆಯ ಪ್ರೊಜೆಕ್ಟ್‌ ಕೆಲಸ, ಡ್ಯುಟಿ ಎಂಗೇಜ್‌ಮೆಂಟ್ ಮುಂತಾದ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದರು.

‘ಸೋಂಕಿತರನ್ನು ಮಲ– ಮೂತ್ರ ವಿಸರ್ಜನೆಗೆ ಕರೆದೊಯ್ಯುವುದು, ಊಟ–ನೀರು ಕೊಡುವುದು, ಸಂಬಂಧಿಕರಿಗೆ ಧೈರ್ಯ ಹೇಳುವುದು, ಕುಟುಂಬದವರೊಂದಿಗೆ ಸಂವಹನ ಏರ್ಪಡಿಸುವುದು, ಯೋಗ– ಧ್ಯಾನ ಹೇಳಿಕೊಡುವುದು ಮುಂತಾದ ಗುರುತರ ಜವಾಬ್ದಾರಿ ನಿರ್ವಹಿಸಿದೆ. ದೇವರ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿತು. ಮಾಡಿದೆ’ ಎನ್ನುತ್ತಾರೆ ರಾಚಣ್ಣ.

***

ಅನ್ನ, ಆರೋಗ್ಯಕ್ಕೆ ಹೆಸರಾದ ಜಿ99, ಜಿ55

ಕಲಬುರ್ಗಿ: ಏಳು ವರ್ಷಗಳಿಂದ ಕಲಬುರ್ಗಿ ಜಿಲ್ಲೆಯಲ್ಲಿ ‘ಜಿ–99’ ಮತ್ತು ‘ಜಿ–55’ ತಂಡಗಳು ಸಮಾಜ ಸೇವೆಯಲ್ಲಿ ತೊಡಗಿವೆ. ಈ ತಂಡಗಳ ನಿರ್ಮಾತೃ ಸಮಾಜ ಸೇವಕ ಶರಣು ಪಪ್ಪಾ. ಆರಂಭದಲ್ಲಿ ಏಕಾಂಗಿಯಾಗಿ ಬಡವರ ಸೇವೆ ಮಾಡುತ್ತಿದ್ದ ಅವರನ್ನು ಕಂಡು ಹಲವರು ಸ್ವಯಂಪ್ರೇರಿತರಾಗಿ ಕೈ ಜೋಡಿಸಿದರು. ಆಗ 99 ಮಂದಿಯ ಒಂದು ತಂಡ ರಚನೆಯಾಯಿತು. ಮತ್ತಷ್ಟು ಸದಸ್ಯರ ಸಂಖ್ಯೆ ಹೆಚ್ಚಾದಾಗ 55 ಸದಸ್ಯರ ಇನ್ನೊಂದು ತಂಡ ರಚಿಸಲಾಯಿತು.

ಇದರಲ್ಲಿರುವ ಪ್ರತಿಯೊಬ್ಬ ಸದಸ್ಯ ತಮ್ಮ ಸ್ವಂತ ದುಡಿಮೆಯಲ್ಲಿ ಪ್ರತಿ ತಿಂಗಳು ₹ 500 ದೇಣಿಗೆ ನೀಡುತ್ತಾರೆ. ಹೀಗೆ ಸಂಗ್ರಹವಾಗುವ ₹ 77 ಸಾವಿರವನ್ನು ಪ್ರತಿ ತಿಂಗಳೂ ಈ ತಂಡ ಬಡವರ ವೈದ್ಯಕೀಯ ವೆಚ್ಚಕ್ಕೆ ನೀಡುತ್ತದೆ.

ಲಾಕ್‌ಡೌನ್‌ ವೇಳೆ ತಂಡದ ಸದಸ್ಯರು ಪ್ರತಿ ದಿನ 500ಕ್ಕೂ ಹೆಚ್ಚು ಬೀದಿ ಬದಿ ಜನ, ವ್ಯಾಪರಿಗಳಿಗೆ ದೈನಂದಿನ ಎರಡು ಊಟ ನೀಡಲು ಶುರು ಮಾಡಿದರು. ಮನೆಗಳಿಗೆ ತರಕಾರಿ ವಿತರಿಸಿದರು. ಬಡವರು, ಕಾರ್ಮಿಕರು, ವಲಸಿಗರು, ವೃದ್ಧಾಶ್ರಮದ ವಾಸಿಗಳಿಗೆ, ಅಸಹಾಯಕರಿಗೆ ಎರಡು ತಿಂಗಳಿಗೆ ಸಾಲುವಷ್ಟು ದಿನಸಿ ಕಿಟ್‌ಗಳನ್ನು ವಿತರಿಸಿದರು. ಲಾಕ್‌ಡೌನ್‌ ಅವಧಿ ಮುಗಿಯುವವರೆಗೆ 4500ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ವಿತರಿಸಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು ನೀಡಿದೆ. ತಂಡದ ಸದಸ್ಯರು ರಕ್ತದಾನ ಸಹ ಮಾಡಿದ್ದು ವಿಶೇಷ.

***

ಸಮಾಜಕ್ಕೆ ‘ಪ್ರೇರಣೆ’ಯಾದ ತಂಡ

ಕಲಬುರ್ಗಿ: ನರೋಣ ಗ್ರಾಮದ ರಕ್ಷಿತಾ ಮಹಾದೇವಪ್ಪ ಲಾಡವಂತಿ ಬಿ.ಎಸ್ಸಿ ಕೃಷಿ ಪದವೀಧರೆ. ನಾಲ್ಕು ವರ್ಷಗಳ ಹಿಂದೆ ತಮ್ಮ ಕಿರಿಯ ವಯಸ್ಸಿನಲ್ಲಿಯೇ ಸಮಾಜ ಸೇವೆಗೆ ಮುಂದಾದರು. ಸ್ನೇಹಿತರು ಕೈ ಜೋಡಿಸಿದಾಗ 2019ರಲ್ಲಿ ‘ಪ್ರೇರಣಾ’ ಎಂಬ ಸಂಘ ಕಟ್ಟಿಕೊಂಡರು. ರೈತರು, ಬಡವರು, ಪೌರಕಾರ್ಮಿಕರು, ತರಕಾರಿ ವ್ಯಾಪಾರಸ್ಥರು, ವೃದ್ಧರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಊಟ, ಬಟ್ಟೆಗಾಗಿ ಪರದಾಡುತ್ತಿದ್ದ ಜನರ ನೆರವಿಗೆ ಈ ತಂಡದ 25 ಜನರು ಸಜ್ಜಾದರು. ₹ 2.5 ಲಕ್ಷದ ಆಹಾರ ಸಾಮಗ್ರಿ ವಿತರಿಸಿದರು. 2000ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್‌, ಸ್ಯಾನಿಟೈಸರ್, ಮಾಸ್ಕ್‌ ವಿತರಿಸಿದರು. ರೆಕ್‌ಡ್ರಾಸ್ ಮತ್ತು ವಿವಿಧ ಇಲಾಖೆಗಳ ತಂಡದೊಂದಿಗೆ ಹಳ್ಳಿಗಳಿಗೆ ಹೋಗಿ ಅರಿವು ಮೂಡಿಸಿದರು.

ಸ್ಲಂ ಪ್ರದೇಶ, ಅಲೆಮಾರಿ ಸಮುದಾಯಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿರ್ಗತಿಕರಿಗೆ ದಿನವೂ ಸಿದ್ಧಪಡಿಸಿದ ಊಟ ನೀಡಿದರು.‌ ತಂಡದಲ್ಲಿರುವ ವೈದ್ಯರು, ಫಾರ್ಮಾಸಿಸ್ಟ್‌ಗಳೂ ಉಚಿತ ಸೇವೆ ನೀಡುತ್ತಿದ್ದಾರೆ. ಕೊರೊನೋತ್ತರ ಕೂಡ ಈ ತಂಡ ತನ್ನ ಸಮಾಜ ಸೇವೆ ಮುಂದುವರಿಸಿದೆ. ಈ ತಂಡದವರು ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ. ಸಂಬಳದ ಹಣ ಹಾಕಿ, ಸಮಾಜ ಸೇವೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT